7

ಸಂಸ್ಕಾರದಿಂದ ಬ್ರಾಹ್ಮಣ ಸಮಾಜ ಜೀವಂತ

Published:
Updated:
ಸಂಸ್ಕಾರದಿಂದ ಬ್ರಾಹ್ಮಣ ಸಮಾಜ ಜೀವಂತ

ಕುಕನೂರು: ‘ಭಾರತದ ಮೇಲೆ ಮುಸ್ಲಿಮರಿಂದ 800 ವರ್ಷಗಳ ಕಾಲ ನಿರಂತರ ಆಕ್ರಮಣ ನಡೆದರೂ ಬ್ರಾಹ್ಮಣ ಸಮಾಜ ಜೀವಂತವಾಗಿದೆ. ಅದಕ್ಕೆ ತನ್ನದೇ ಆದ ಸಂಸ್ಕಾರ ಇರುವುದೇ ಕಾರಣ’ ಎಂದು ಕೇಂದ್ರದ ಉದ್ಯೋಗ ಮತ್ತು ಕೌಶಲ ಅಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಇಲ್ಲಿನ ಮಹಮ್ಮಾಯಿ ದೇವಸ್ಥಾನದ ಆವರಣದಲ್ಲಿ ಬ್ರಾಹ್ಮಣ ಯುವ ಪರಿಷತ್‌ ಪ್ರಥಮ ವಾರ್ಷಿಕೋತ್ಸವ ಹಾಗೂ ಯುವಜನ ಮೇಳದಲ್ಲಿ ಅವರು ಮಾತನಾಡಿದರು. ಜಗತ್ತಿನ ಜಾತಿ ವ್ಯವಸ್ಥೆ ದೇಶವನ್ನೇ ಹಾಳುಮಾಡಿದೆ. ಜಾತಿ ಸಮಾವೇಶಗಳು, ಜಾತಿ ಸಂಪ್ರದಾಯಗಳು ದೊಡ್ಡ ತಲೆನೋವಾಗಿ ಪರಿಣಮಿಸಿಬಿಟ್ಟಿದೆ. ಆದರೆ, ಇದನ್ನೆಲ್ಲ ಯಾವದೃಷ್ಟಿಯಿಂದ ನೋಡುತ್ತೇವೆಯೋ ಅದರಂತೆಯೇ ಇವೆಲ್ಲಾ ಗೋಚರಿಸುತ್ತವೆ. ದೃಷ್ಟಿ ಬದಲಾಯಿಸಿದರೆ ದೃಶ್ಯ ಬದಲಾಗುತ್ತದೆ ಎಂದರು.

ಕೇವಲ 54 ವರ್ಷಗಳಲ್ಲಿ ಇಡೀ ಯುರೋಪ್‌ ಕ್ರೈಸ್ತರ ವಿಚಾರಧಾರೆಯನ್ನು ಒಪ್ಪಿಕೊಂಡಿತು. ಶತಮಾನಗಳೂ ಗತಿಸಿರಲಿಲ್ಲ. ಜಗತ್ತು ಆಯಾ ವಿಚಾರಧಾರೆಗಳ ಹಾದಿಯಲ್ಲಿ ಬಂದು ನಿಂತಿತ್ತು. ಜಾತಿ ವ್ಯವಸ್ಥೆ ಒಂದು ವಿಷವಾಗಿ ಪರಿಣಮಿಸಿದೆ. ವಿಕಾರವಾಗಿ ಸಾಮಾಜಿಕ ಸುವ್ಯವಸ್ಥೆಯನ್ನೇ ಹಾಳುಮಾಡುತ್ತಿದೆ. ಸಾಮರಸ್ಯದ ಬದುಕು ನಮ್ಮದಾಗಬೇಕು. ಅಂಥ ಬದುಕನ್ನು ಜಗತ್ತೇ ಒಪ್ಪಿಕೊಳ್ಳುತ್ತದೆ ಎಂದರು.

ಅದ್ಭುತವಾದ ಪ್ರಜಾಪ್ರಭುತ್ವವನ್ನು ಈ ದೇಶ ನಮಗೆ ನೀಡಿದೆ. ಎಷ್ಟೋ ಜನ ಶಿಕ್ಷಣ ಪಡೆದ ಪಂಡಿತರಿರುತ್ತಾರೆ. ಆದರೆ ಶಿಕ್ಷಣವೇ ಬೇರೆ. ಸಂಸ್ಕಾರವೇ ಬೇರೆ. ಶಿಕ್ಷಣ ಹೊಟ್ಟೆಪಾಡಿಗಾಗಿ ಇದ್ದರೆ, ಸಂಸ್ಕಾರ ನಮ್ಮ ಬದುಕಿಗೆ ಅರ್ಥ ಕಲ್ಪಿಸುವ ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿದೆ ಎಂದರು.

‘ದೇಶದಲ್ಲಿ ಅನೇಕ ಜಾತಿ, ಧರ್ಮ, ಪಂಥ ಎಲ್ಲವೂ ಸಂಕೀರ್ಣ ಎನಿಸಿಬಿಡುತ್ತದೆ. ಸಾವಿರ ವರ್ಷಗಳ ನಿರಂತರ ವೈಚಾರಿಕತೆಯಿಂದ ಹುಟ್ಟಿಕೊಂಡಿದ್ದೇ ಪ್ರತಿಯೊಬ್ಬರ ವಿಚಾರವನ್ನು ತಲೆಬಾಗಿ ಸ್ವೀಕರಿಸುತ್ತೇವೆ. ವೇದ ಉಪನಿಷತ್ತುಗಳನ್ನು ಬರೆದ ಋಷಿಮುನಿಗಳು ತಮ್ಮ ಹೆಸರನ್ನು ಬರೆಯದೆ ವಿಚಾರವನ್ನು ಮಾತ್ರ ಬರೆದಿದ್ದಾರೆ. ನಾವು ಜಾತಿಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದು ನೂರಾರು ವರ್ಷಗಳ ಈಚೆಗೆ ಬಂದ ವಿಕೃತಿ ಎಂದರು. ತಂತ್ರಜ್ಞಾನದ ಗುಲಾಮರು ನಾವಾಗಬಾರದು. ಅದರ ಯಜಮಾನರು ನಾವಾಗಬೇಕು. ತಂತ್ರಜ್ಞಾನ ನಮ್ಮ ಸಾಮರ್ಥ್ಯ ಕುಗ್ಗಿಸುತ್ತದೆ. ಮಂತ್ರಗಳು ಜ್ಞಾನದ ಭಂಡಾರಗಳು. ಮಂತ್ರದಿಂದ ಹೊಟ್ಟೆ ತುಂಬುವುದಿಲ್ಲ’ ಎಂದರು.

ಬ್ರಾಹ್ಮಣ ಸಮಾಜ ಹೊಸ ಆಯಾಮದತ್ತ ಮುನ್ನಡೆಯಬೇಕು. ಸಮಾಜಮುಖಿಯಾಗಿ ಕೆಲಸಮಾಡಬೇಕು ಎಂದರು. ಸಂಸದ ಸಂಗಣ್ಣ ಕರಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಹಾಲಪ್ಪ ಆಚಾರ್‌, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಿ.ಎಚ್‌.ಪೊಲೀಸ್‌ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯೆ ಗಂಗಮ್ಮ ಗುಳಗಣ್ಣವರ್, ಮಾಜಿ ಸದಸ್ಯ ವೀರಪ್ಪ ಕುಡಗುಂಟಿ ಬ್ರಾಹ್ಮಣ ಯುವ ಪರಿಷತ್ ಅಧ್ಯಕ್ಷ ಜನಾರ್ದನ, ಉಪಾಧ್ಯಕ್ಷ ಸಿ.ಎಂ. ಜೋಷಿ, ಕಾರ್ಯದರ್ಶಿ ಗಿರಿಧರ ಗ್ರಾಮ ಪುರೋಹಿತ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry