7

ಮುಳ್ಳುಗಳಿರುವ ಪುಂಡಿ ರಸ್ತೆಯಲ್ಲಿಯೇ ರಾಶಿ

Published:
Updated:
ಮುಳ್ಳುಗಳಿರುವ ಪುಂಡಿ ರಸ್ತೆಯಲ್ಲಿಯೇ ರಾಶಿ

ಕುಷ್ಟಗಿ: ರಸ್ತೆಗಳನ್ನೇ ರೈತರು ಸಾಮೂಹಿಕವಾಗಿ ಕಣಗಳನ್ನಾಗಿಸಿಕೊಳ್ಳುತ್ತಿರುವುದು ಮುಂದುವರೆದಿದ್ದು ಅಪಾಯವನ್ನು ಲೆಕ್ಕಿಸದೆ ಪುಂಡಿ ಗಿಡಗಳನ್ನೂ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಚೆಲ್ಲಿ ರಾಶಿ ಮಾಡುವ ಮೂಲಕ ವಾಹನ ಸವಾರರಿಗೆ ಅಪಾಯ ತಂದೊಡ್ಡಿರುವುದು ಕಂಡುಬರುತ್ತಿದೆ.

ಸಜ್ಜೆ, ಜೋಳದ ತೆನೆಗಳನ್ನು ರಸ್ತೆಯಲ್ಲಿಯೇ ರಾಶಿ ಮಾಡುವುದು ಸಾಮಾನ್ಯ ಸಂಗತಿ. ಸುಂಕದಿಂದ ಕೂಡಿರುವ ಇದರ ಧೂಳು ಕಣ್ಣಿಗೆ ಬಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ. ಅಂಥದ್ದರಲ್ಲಿ ತೆನೆಯಲ್ಲಿ ಕಣ್ಣಿಗೆ ಗೋಚರಿಸದಷ್ಟು ಸಣ್ಣ ಗಾತ್ರದ ಮುಳ್ಳುಮೊನೆ ಹೊಂದಿರುವ ಪುಂಡಿ ತೆನೆಯ ಧೂಳು ಕಣ್ಣಿಗೆ ಸೋಕಿದರೂ ಸಾಕು ಅಪಾಯ ಕಟ್ಟಿಟ್ಟ ಬುತ್ತಿ. ಸದ್ಯ ಪುಂಡಿ ಬೆಳೆ ಕೊಯಿಲು ನಡೆಯುತ್ತಿದ್ದು ರಸ್ತೆಯಲ್ಲಿಯೇ ರಾಶಿ ನಡೆಸಿದ್ದಾರೆ’ ಎಂದು ವಾಹನ ಚಾಲಕರು ಹೇಳಿದರು.

ಮುಂದೆ ಚಲಿಸುವ ವಾಹನದ ಹಿಂದೆ ಹೋಗುವಾಗ ಧೂಳು ಮಿಶ್ರಿತ ಗಾಳಿ ಬರುತ್ತದೆ. ಇದರಿಂದ ಇತರೆ ವಾಹನ ಅದರಲ್ಲೂ ದ್ವಿಚಕ್ರ ವಾಹನ ಚಲಾಯಿಸುವುದು ಸವಾಲಿನ ಸಂಗತಿಯಾಗಿದೆ. ಭಾನುವಾರ ತಾಲ್ಲೂಕಿನ ನೆರೆಬೆಂಚಿ ಗ್ರಾಮದ ಬಳಿ ಈ ರೀತಿ ಪುಂಡಿ ಬೆಳೆ ಧೂಳಿನ ಹೊಡೆತಕ್ಕೆ ಸಿಲುಕಿದೆ ಅನೇಕ ದ್ವಿಚಕ್ರ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಅಷ್ಟೆ ಅಲ್ಲ ಪುಂಡಿಗಿಡಗಳು ಹಸಿಯಾಗಿದ್ದು ಅದರ ಮೇಲೆ ದ್ವಿಚಕ್ರ ವಾಹನ ಹೋಗುವಾಗ ಚಕ್ರಗಳು ಆಯತಪ್ಪುತ್ತಿದ್ದವು ಎಂದು ಬೇವೂರು ಗ್ರಾಮದ ದ್ವಿಚಕ್ರ ವಾಹನ ಸವಾರರಾದ ವೀರಭದ್ರಪ್ಪ, ಚಂದ್ರಶೇಖರ ಮುರುಡಿ ವಿವರಿಸಿದರು.

ನಿರ್ಲಕ್ಷ್ಯ: ರಸ್ತೆಗಳು ಕಣಗಳಾಗುತ್ತಿರುವುದು, ರಾತ್ರಿ ವೇಳೆ ಕೆಲವರು ಕಲ್ಲು ಕಟ್ಟಿಗೆಗಳನ್ನು ಇಟ್ಟಿರುತ್ತಾರೆ. ವಾಹನ ಸವಾರರು ಬಿದ್ದು ತೊಂದರೆ ಅನುಭವಿಸಿರುವ ಸಾಕಷ್ಟು ಉದಾಹರಣೆಗಳಿದ್ದರೂ ಪೊಲೀಸ್‌ ಮತ್ತಿತರೆ ಇಲಾಖೆ ನಿರ್ಲಕ್ಷ್ಯ ಮುಂದುವರೆದಿದೆ. ಒಬ್ಬರ ಮೇಲೆಯೂ ಕ್ರಮ ಜರುಗಿಸಿದ ಉದಾಹರಣೆ ಇಲ್ಲ. ಹಾಗಾಗಿ ರಸ್ತೆ ರಾಶಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಜಾಣ ಕುರುಡು: ಕುಷ್ಟಗಿಯಿಂದ ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ತೆರಳುವಾಗ ಬಹುತೇಕ ಕಡೆ ರಸ್ತೆಯಲ್ಲಿಯೇ ರಾಶಿ ಮಾಡುತ್ತಿರುವುದು ಗೊತ್ತಾಗುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳು, ಸಚಿವರು, ಶಾಸಕರು ಹೀಗೆ ಎಲ್ಲರ ವಾಹನಗಳು ಇದೇ ಮಾರ್ಗವಾಗಿಯೇ ಬರ ಹೋಗುತ್ತಿರುತ್ತವೆ. ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಪಟ್ಟಣದಲ್ಲಿಯೇ ಪೋಸು ನೀಡುವ ಪೊಲೀಸ್‌ ಅಧಿಕಾರಿಗಳಿಗೆ ರಸ್ತೆ ರಾಶಿಯಿಂದ ಆಗುವ ತೊಂದರೆ ಗೊತ್ತಾಗುವುದಿಲ್ಲವೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಸಾರ್ವಜನಿಕರು ಆರೋಪಿಸಿದರು.

ಕುಸುಬೆ ಮುಳ್ಳು: ಹಿಂಗಾರು ಹಂಗಾಮಿನಲ್ಲಿ ಕಪ್ಪು ಜಮಿನಿನಲ್ಲಿ ಕುಸುಬೆ ಬೆಳೆಯಲಾಗುತ್ತದೆ. ಅದರ ಎಲೆಗಳೇ ಮುಳ್ಳುಮೊನೆಯಿಂದ ಕೂಡಿರುತ್ತವೆ. ಬಿಸಿಲಿನಲ್ಲಿ ಕೈಯಿಂದ ಮುಟ್ಟಲೂ ಸಾಧ್ಯವಾಗುವುದಿಲ್ಲ. ಅಂಥದ್ದರಲ್ಲಿ ಅದನ್ನು ಕಡುಬಿಸಿಲಿನಲ್ಲಿ ಡಾಂಬರು ರಸ್ತೆಗೆ ಹಾಕಿ ರಾಶಿ ಮಾಡಲಾಗುತ್ತದೆ. ಇದರಿಂದಲೂ ಅಪಾಯ ಹೆಚ್ಚು ಎಂದು ವಾಹನ ಸವಾರರು ಹೇಳಿದರು.

ಸಿಪಿಐ ಹೇಳಿದ್ದು: ಈ ಕುರಿತು ವಿವರಿಸಿದ ಪೊಲೀಸ್‌ ಇನ್‌ಸ್ಪೆಕ್ಟರ್‌ ಸುರೇಶ ತಳವಾರ, ಗಮನಕ್ಕೆ ಬಂದರೆ ಅಥವಾ ಜನ ದೂರು ಕೊಟ್ಟರೆ ಕ್ರಮ ಜರುಗಿಸುತ್ತೇವೆ, ಕಣ್ಣಿಗೆ ಹಾನಿ ಮಾಡುವ ಪುಂಡಿ, ಕುಸುಬೆ ರಾಶಿ ಮಾಡುವುದು ತಮನಕ್ಕೆ ಬಂದಿಲ್ಲ. ಈ ಬಗ್ಗೆ ಜನರಿಗೆ ಸೂಕ್ತ ತಿಳಿವಳಿಕೆ ನೀಡುವ ಪ್ರಯತ್ನ ಮಾಡುತ್ತೇವೆ. ಅದಕ್ಕೂ ಮಣಿಯದಿದ್ದರೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

* * 

ಮುಳ್ಳಿನಿಂದ ಕೂಡಿದ ಪುಂಡಿಯನ್ನೂ ರಸ್ತೆಯಲ್ಲಿ ರಾಶಿ ಮಾಡುವುದು ಅಪಾಯಕಾರಿ ಬೆಳವಣಿಗೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ

ಸುರೇಶ ತಳವಾರ ಕುಷ್ಟಗಿ ಸಿಪಿಐ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry