ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬ್ವಾ ಇಗರ್ಜಿ!

Last Updated 25 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ದಕ್ಷಿಣ ಭಾರತ ಯೂರೋಪಿಯನ್ನರ ಆಧಿಪತ್ಯಕ್ಕೆ ಒಳಪಟ್ಟ ಬಳಿಕ ಮೈಸೂರು ಸೀಮೆಯಲ್ಲಿ ಕ್ರೈಸ್ತ ಧರ್ಮದ ಪ್ರಭಾವ ಹೆಚ್ಚಿ ಐತಿಹಾಸಿಕ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಕೂಡ ಕ್ರೈಸ್ತ ಧರ್ಮದ ಕೇಂದ್ರವೊಂದು ತಲೆ ಎತ್ತಿತು. ಫ್ರಾನ್ಸ್ ದೇಶದ ರೋಮನ್‌ ಕ್ಯಾಥೊಲಿಕ್‌ ಪಂಗಡದ ಧರ್ಮ ಪ್ರಚಾರಕ ಫಾದರ್‌ ಅಬ್ಬೆ ದುಬ್ವಾ ಎಂಬುವರು ಶ್ರೀರಂಗನಾಥಸ್ವಾಮಿ ದೇವಾಲಯದ ಪೂರ್ವಕ್ಕೆ ಮೂರು ಮೈಲು ದೂರದಲ್ಲಿರುವ ಗಂಜಾಂ ಬಳಿ ಚರ್ಚ್‌ ನಿರ್ಮಿಸಿ ಧಾರ್ಮಿಕ ಕೈಂಕರ್ಯ ಆರಂಭಿಸಿದರು. ಚದುರಿ ಹೋಗಿದ್ದ ಕ್ರೈಸ್ತರನ್ನು ಒಗ್ಗೂಡಿಸಿದರು.

ಗಂಜಾಂನಲ್ಲಿ, 1800ರ ಸುಮಾರಿಗೆ ಅವರು ನಿರ್ಮಿಸಿದ ಇಂಡೋ–ಸಾರ್ಸೆನಿಕ್‌ ಶೈಲಿಯ ಈ ಚರ್ಚ್‌ ಅನ್ನು ಚುರಕಿ ಗಾರೆ ಮತ್ತು ಮರಗಳನ್ನು ಬಳಸಿ ನಿರ್ಮಿಸಲಾಗಿದೆ. ಚರ್ಚ್‌ನ ಒಳ ಗೋಡೆಗಳಲ್ಲಿ ಯೇಸು ಕ್ರಿಸ್ತನ ಜನನದಿಂದ ಹಿಡಿದು ಶಿಲುಬೆಯಲ್ಲಿ ಅವರು ಪ್ರಾಣತ್ಯಾಗ ಮಾಡುವವರೆಗಿನ ವಿವಿಧ ಪ್ರಸಂಗಗಳನ್ನು ತಿಳಿಸುವ ಆಕರ್ಷಕ ವರ್ಣ ಚಿತ್ರಗಳನ್ನು ಹಾಕಲಾಗಿದೆ.

ಶಿಲುಬೆ ಇರುವ ಬಲ ಭಾಗದಲ್ಲಿ ಫಾ.ದುಬ್ವಾ ಧರಿಸುತ್ತಿದ್ದ ವಸ್ತ್ರಗಳು, ಗೋಡೆ ಗಡಿಯಾರ, ಪುಸ್ತಕಗಳನ್ನು ಇರಿಸಲಾಗಿದೆ. ಚರ್ಚ್‌ನ ಹೊರಗೆ ತೂಗು ಹಾಕಿರುವ ಬೃಹತ್‌ ಲೋಹದ ಗಂಟೆ ಗಮನ ಸೆಳೆಯುತ್ತದೆ. ಫ್ರಾನ್ಸ್‌ನಿಂದ ತರಿಸಿರುವ ಇದು ವಿಶಿಷ್ಟ ಸದ್ದು ಮಾಡುತ್ತದೆ ಎಂದು ಚರ್ಚ್‌ನ ರೆ.ಫಾ.ಪೌಸ್‌ ಥಾಮಸ್‌ ಹೇಳುತ್ತಾರೆ.

ಗಂಜಾಂ ಚರ್ಚ್‌ ಮಾತ್ರವಲ್ಲದೆ ಬೆಂಗಳೂರಿನ ಸೇಂಟ್‌ ಮೇರಿಸ್‌ ಬೆಸಿಲಿಕಾ, ಹಾರೋಬೆಲೆ ಚರ್ಚ್‌ ಮತ್ತು ಹಾಸನದ ಕ್ಯಾಥೊಲಿಕ್‌ ಚರ್ಚ್‌ ಕೂಡ ಫಾ. ದುಬ್ವಾ ಅವರ ನಿರ್ಮಾಣಗಳು. ಈ ಪೈಕಿ ಗಂಜಾಂ ಚರ್ಚ್‌ ಮತ್ತು ಬೆಂಗಳೂರಿನ ಬೆಸಿಲಿಕಾ ಚರ್ಚ್‌ಗಳು ಮಾತ್ರ ಉಳಿದಿವೆ. ಗಂಜಾಂನ ಅಬ್ಬೆ ದುಬ್ವಾ ಚರ್ಚ್‌ನ ಅಡಿಪಾಯದ ವಿನ್ಯಾಸ ಇಂಗ್ಲಿಷ್‌ನ ‘ಟಿ’ ಆಕಾರದಲ್ಲಿದೆ. ಎತ್ತರಕ್ಕೆ ಹೋದಂತೆ ಮೊನಚಾದ ಶಿಖರಗಳಿವೆ.

ಸುಮಾರು 30 ಅಡಿಗಳಷ್ಟು ಎತ್ತರದಲ್ಲಿರುವ ಈ ಇಗರ್ಜಿಯ ಮುಖ್ಯ ದ್ವಾರದ ತುತ್ತ ತುದಿಯಲ್ಲಿ ದೊಡ್ಡ ‘ಕ್ರಾಸ್‌’ ಗಮನ ಸೆಳೆಯುತ್ತದೆ. ಫಾ. ದುಬ್ವಾ ಅವರು ಧರಿಸುತ್ತಿದ್ದ ವಸ್ತ್ರಗಳು, ಬಳಸುತ್ತಿದ್ದ ಗೋಡೆ ಗಡಿಯಾರ, ಪುಸ್ತಕಗಳು ಹಾಗೂ ಇತರ ಪರಿಕರಗಳನ್ನು ಚರ್ಚ್‌ನ ಒಳಗೆ ಈಗಲೂ ಕಾಪಿಡಲಾಗಿದೆ. ಕಾಲನ ಹೊಡೆತಕ್ಕೆ ಸಿಕ್ಕಿ ಶಿಥಿಲವಾಗಿದ್ದ ಈ ಚರ್ಚ್‌ ಇತ್ತೀಚೆಗೆ ಜೀರ್ಣೋದ್ಧಾರ ಕಂಡಿದೆ.

ಫಾ. ದುಬ್ವಾ ಫ್ರಾನ್ಸ್ ದೇಶದ ವಿವಿಯರ್ಸ್‌ನಲ್ಲಿ 1766ರಲ್ಲಿ ಜನಿಸಿದರು. ಇವರ ಮೂಲ ಹೆಸರು ಅಬ್ಬೆ ಜೀನ್‌ ಆಂಟೋನಿ ದುಬಾಯೀಸ್‌. ತಮ್ಮ 27ನೇ ವಯಸ್ಸಿನಲ್ಲಿ ಕ್ರೈಸ್ತ ಪಾದ್ರಿಯಾಗಿ ದೀಕ್ಷೆ ಪಡೆದರು. ಪುದುಚೇರಿ ಮಿಷನ್‌ಗೆ ಒಳಪಟ್ಟಿದ್ದ ಸೇಲಂನ ಬಾರಾಮಹಲ್‌ ಧರ್ಮಕೇಂದ್ರದ ಮೂಲಕ ಧರ್ಮ ಪ್ರಸಾರದಲ್ಲಿ ತೊಡಗಿದರು. ಪ್ಯಾರಿಸ್‌ ವಿದೇಶಿ ಮಿಷನರಿ ಸಂಸ್ಥೆಗೆ (ಎಂಇಪಿ) ಸೇರಿದ ಇವರು ಪುದುಚೇರಿ, ಕೊಯಮತ್ತೂರು, ಧರ್ಮಪುರಿಗಳಲ್ಲಿದ್ದ ಕ್ರೈಸ್ತರ ಆಧ್ಯಾತ್ಮಿಕ ಬಯಕೆಯನ್ನು ಈಡೇರಿಸಿದರು.

ಟಿಪ್ಪು ಮರಣದ (ಶ್ರೀರಂಗಪಟ್ಟಣ ಪತನ) ನಂತರ ಗವರ್ನರ್‌ ಜನರಲ್‌ ವೆಲ್ಲೆಸ್ಲಿಯ ಆಹ್ವಾನದ ಮೇರೆಗೆ ಶ್ರೀರಂಗಪಟ್ಟಣಕ್ಕೆ ಬಂದು ಗಂಜಾಂ ಬಳಿ ಧರ್ಮಕೇಂದ್ರ ಸ್ಥಾಪಿಸಿದರು. ಅದರ ಮರುವರ್ಷವೇ ಚರ್ಚ್‌ ಸ್ಥಾಪಿಸಿ ಚದುರಿ ಹೋಗಿದ್ದ ಕ್ರೈಸ್ತರನ್ನು ಒಗ್ಗೂಡಿಸಿದರು.

ಸರಿಸುಮಾರು ಕಾಲು ಶತಮಾನ (1799ರಿಂದ 1823ರವರೆಗೆ) ಗಂಜಾಂ ಧರ್ಮಕೇಂದ್ರದಲ್ಲಿದ್ದ ಫಾ.ದುಬ್ವಾ ಕನ್ನಡ ಭಾಷೆ ಕಲಿತು, ಹಿಂದೂ ಸಂತನಂತೆ ವೇಷಭೂಷಣ ಧರಿಸಿ, ಸ್ಥಳೀಯ ಜನರ ಜತೆ ಬೆರೆತರು. ತಮ್ಮ ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕ ಸೇವೆಯಿಂದಾಗಿ ಜನರಿಂದ ‘ದೊಡ್ಡ ಸ್ವಾಮಿಯೋರು’ ಎಂದು ಕರೆಸಿಕೊಂಡರು.

ಸ್ಥಳೀಯರಲ್ಲಿ ಪರಕೀಯತೆಯ ಭಾವ ಬಾರದಂತೆ ತಾವು ಸ್ಥಾಪಿಸಿದ ಕ್ಯಾಥೊಲಿಕ್‌ ಚರ್ಚ್‌ಗೆ ‘ಅಮಲೋದ್ಬವ ಮಾತೆಯ ದೇವಾಲಯ’ ಎಂದು ಹೆಸರಿಟ್ಟರು. ಸ್ಥಳೀಯ ಸಂಸ್ಕೃತಿ, ಆಚಾರ–ವಿಚಾರಗಳಿಗೆ ಆಕರ್ಷಿತರಾದ ಅವರು, ‘ಹಿಂದೂ ಮ್ಯಾನರ್ಸ್, ಕಸ್ಟಮ್ಸ್ ಅಂಡ್‌ ಸೆರಮನೀಸ್‌’ ಪುಸ್ತಕ ಬರೆದಿದ್ದಾರೆ.

ಫಾ.ದುಬ್ವಾ ಗಂಜಾಂಗೆ ಬಂದಾಗ ಈ ಪ್ರಾಂತ್ಯದಲ್ಲಿ ಸಿಡುಬು, ಕಾಲರಾ ಮತ್ತು ಪ್ಲೇಗ್‌ ರೋಗಗಳು ಕಾಡುತ್ತಿದ್ದವು. ಮೈಸೂರು ರಾಜವಂಶಸ್ಥ ಚಾಮರಾಜ ಒಡೆಯರ್‌ 1726ರಲ್ಲಿ ಸಿಡುಬು ರೋಗಕ್ಕೆ ತುತ್ತಾಗಿದ್ದರು. ಎಲ್ಲ ಕಾಯಿಲೆಗಳಿಗೆ ಮನೆ ಮದ್ದನ್ನೇ ಅವಲಂಬಿಸಿದ್ದ ಜನರಿಗೆ ಫಾ.ದುಬ್ವಾ ಮೊದಲು ಎಂಬಂತೆ ಆಲೋಪತಿ ಔಷಧ ಪರಿಚಯಿಸಿದರು. ಚುಚ್ಚುಮದ್ದು ನೀಡಿ ಸಾವಿರಾರು ಮಂದಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದರು.


–ಶ್ರೀರಂಗಪಟ್ಟಣ ದ್ವೀಪದಲ್ಲಿ, ಗಂಜಾಂ ಬಳಿ ಇರುವ ಅಬ್ಬೆ ದುಬ್ವಾ ಚರ್ಚ್‌

ಮೈಸೂರು ರಾಜವಂಶಸ್ಥ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರಿಗೂ ಲಸಿಕೆ ಹಾಕಿದರು. ‘ಹದಿನೆಂಟು ತಿಂಗಳ ಅವಧಿಯಲ್ಲಿ 25,432 ಮಂದಿಗೆ ಸಿಡುಬು ರೋಗದ ವಿರುದ್ಧ ಲಸಿಕೆ ಹಾಕಲಾಗಿದೆ’ ಎಂದು ಫಾ.ದುಬ್ವಾ ಅವರೇ ಬರೆದಿಟ್ಟಿದ್ದಾರೆ.

ಶ್ರೀರಂಗಪಟ್ಟಣ ಆಸುಪಾಸಿನಲ್ಲಿ ಬೆರಳೆಣಿಕೆ ಯಷ್ಟು ಅಗ್ರಹಾರಗಳನ್ನು ಹೊರತುಪಡಿಸಿದರೆ ಜನ ಸಾಮಾನ್ಯರಿಗೆ ಶಿಕ್ಷಣ ನೀಡಲು ಶಾಲೆಗಳಿರಲಿಲ್ಲ. ಇದನ್ನು ಮನಗಂಡ ಫಾ.ಅಬ್ಬೆ ದುಬ್ವಾ ತಾವು ಸ್ಥಾಪಿಸಿದ ಚರ್ಚ್‌ನ ಪಕ್ಕದಲ್ಲೇ ಶಾಲೆ ಆರಂಭಿಸಿದರು. ಆಸಕ್ತರಿಗೆ ಉಚಿತವಾಗಿ ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡಿದರು.

ಇಲ್ಲಿನ ಪ್ರಧಾನ ಕಸುಬು ಕೃಷಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಈ ಪಾದ್ರಿ ‘ಸಹಕಾರ ಬೇಸಾಯ’ ಪದ್ಧತಿ ಆರಂಭಿಸಲು ಪ್ರೇರಣೆ ನೀಡಿದರು. ಇವರ ಸ್ಫೂರ್ತಿಯಿಂದ ಹಣ್ಣು, ತರಕಾರಿ, ಹೂ, ಧಾನ್ಯ ಬೆಳೆಯುವ ರೈತರನ್ನು ಒಗ್ಗೂಡಿಸಿ ಕೊಡು–ಕೊಳ್ಳುವ ಮಾದರಿಯ ಬೇಸಾಯ ಆರಂಭಿಸಿದರು. ಅವರ ಸೇವೆಯನ್ನು ಪರಿಗಣಿಸಿದ ‘ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪೆನಿ’ 1823ರಲ್ಲಿ ಫಾ. ದುಬ್ವಾ ಪ್ಯಾರಿಸ್‌ಗೆ ಹೊರಟು ನಿಂತಾಗ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿತು. ಪ್ರಯಾಣ ಭತ್ಯೆ ಮತ್ತು ವಿಶೇಷ ಪಿಂಚಣಿ ಸೌಲಭ್ಯವನ್ನೂ ನೀಡಿತು.

ಸಾಗರದಾಚೆಯಿಂದ ಬಂದು ತನ್ನದಲ್ಲದ ಧರ್ಮದ ಜನ ಮಾನಸದಲ್ಲಿ ಹಸಿರಾಗಿ ಉಳಿದ ಫಾ.ದುಬ್ವಾ 1848ರಲ್ಲಿ ತಮ್ಮ ತಾಯ್ನಾಡಿನಲ್ಲಿ ನಿಧನರಾದರು.

*


–ಪಾದ್ರಿ ಅಬ್ಬೆ ದುಬ್ವಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT