ಮತ್ತೆ ಬರ್ತಾಳೆ ಮದುಮಗಳು

7

ಮತ್ತೆ ಬರ್ತಾಳೆ ಮದುಮಗಳು

Published:
Updated:
ಮತ್ತೆ ಬರ್ತಾಳೆ ಮದುಮಗಳು

ಕಲಾಗ್ರಾಮಕ್ಕೆ ಮತ್ತೆ ಮದುಮಗಳು ಬರುತ್ತಿದ್ದಾಳೆ. ರಾಷ್ಟ್ರಕವಿ ಕುವೆಂಪು ಅವರ 712 ಪುಟಗಳ ಮೇರು ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ನಾಟಕ ರೂಪದಲ್ಲಿ ಮತ್ತೆ ರಂಗದ ಮೇಲೆ ಬರುತ್ತಿದೆ. ಒಂಬತ್ತು ಗಂಟೆಗಳ ಈ ನಾಟಕ ಪ್ರದರ್ಶನಕ್ಕೆ ಮಲ್ಲತ್ತಹಳ್ಳಿ ಸಮೀಪದ ಕಲಾಗ್ರಾಮದಲ್ಲಿ ನಾಲ್ಕು ವೇದಿಕೆಗಳು ಸಿದ್ಧಗೊಳ್ಳುತ್ತಿವೆ. ಈ ಬಾರಿಯೂ ರಂಗವಿನ್ಯಾಸ ಶಶಿಧರ ಅಡಪ ಅವರದೇ.

‘ಕಲಾ ಗ್ರಾಮದಲ್ಲಿ ‘ಮದುಮಗಳು’ ಪ್ರದರ್ಶನಗೊಳ್ಳುತ್ತಿರುವುದು ಮೂರನೇ ಬಾರಿ. ಈ ಹಿಂದೆ ರಾಜ್ಯದ ವಿವಿಧಡೆಗಳಿಂದ ನಾಟಕಾಸಕ್ತರು ಕಲಾಗ್ರಾಮಕ್ಕೆ ಬಂದು ‌ಸುದೀರ್ಘ ರಂಗ ಪ್ರಯೋಗವನ್ನು ಆನಂದಿಸಿದ್ದಾರೆ. ಈ ಬಾರಿಯೂ ಸಾಕಷ್ಟು ಜನ ಬರಬಹುದು ಎಂದು ನಿರೀಕ್ಷಿಸಲಾಗಿದೆ’ ಎನ್ನುತ್ತಾರೆ ನಾಟಕವನ್ನು ನಿರ್ದೇಶಿಸಿರುವ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯ.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಬರೆದು 50 ವರ್ಷಗಳಾಗಿವೆ. ಇದು ಕುವೆಂಪು ಅವರು ಜ್ಞಾನಪೀಠ ಪ್ರಶಸ್ತಿ ಪಡೆದ 50ನೇ ವರ್ಷಾಚರಣೆಯೂ ಹೌದು. ಈ ಹಿನ್ನೆಲೆಯಲ್ಲಿ ಈ ಬಾರಿ ಕುವೆಂಪು ಅವರ ಹುಟ್ಟುಹಬ್ಬದ ದಿನದಂದೇ (ಡಿ.29) ಮೊದಲ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಕುವೆಂಪು ಭಾಷಾ ಭಾರತಿ ಸಹಯೋಗದಲ್ಲಿ ಡಿ.29 ಮತ್ತು 30ರಂದು ಎರಡು ದಿನಗಳ ವಿಚಾರ ಸಂಕಿರಣ ಹಾಗೂ ರಾಷ್ಟ್ರೀಯ ಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.

‘ನಾಟಕಕ್ಕಾಗಿ ಸುಮಾರು 80 ಮಂದಿ ಬಣ್ಣಹಚ್ಚಲಿದ್ದಾರೆ. ತಂತ್ರಜ್ಞರೂ ಸೇರಿದರೆ ತಂಡದ ಸಂಖ್ಯೆ 100 ದಾಟುತ್ತದೆ. ಈ ನಾಟಕವನ್ನು ಮತ್ತೆ ಪ್ರದರ್ಶಿಸಬೇಕು ಎಂಬ ಬೇಡಿಕೆ ಸಾಕಷ್ಟಿತ್ತು. ಒಬ್ಬ ರಂಗಾಭಿಮಾನಿಯಂತೂ 400 ಟಿಕೆಟ್‌ಗಳಿಗೆ ಬೇಡಿಕೆ ಇಟ್ಟಿದ್ದು ತಾವೇ ಪ್ರದರ್ಶನ ಏರ್ಪಡಿಸುವುದಾಗಿ ಹೇಳಿದ್ದಾರೆ’ ಎಂದು ಬಸವಲಿಂಗಯ್ಯ ಸಂತೋಷ ವ್ಯಕ್ತಪಡಿಸುತ್ತಾರೆ.

ಈ ಹಿಂದಿ ವರ್ಷಗಳಂತೆ ಈ ಬಾರಿಯೂ ರಾತ್ರಿ 8.30ಕ್ಕೆ ನಾಟಕ ಪ್ರದರ್ಶನ ಆರಂಭವಾಗುತ್ತಿದೆ. ಆದರೆ ಈ ವರ್ಷ ನಾಟಕ ಆರಂಭಕ್ಕೂ ಮೊದಲು ಕನಿಷ್ಠ 20 ದಿನ ರಾತ್ರಿ 8 ರಿಂದ 8.30 ರವರೆಗೆ ಸಂಸ್ಕೃತಿ ಚಿಂತನೆ ನಡೆಸಲಾಗುತ್ತದೆ. ಪ್ರತಿ ದಿನ ಒಬ್ಬೊಬ್ಬರು ಚಿಂತಕರು ಮಾತನಾಡಲಿದ್ದಾರೆ. ನಾಟಕ ಆರಂಭಕ್ಕೂ ಮೊದಲು ನೋಡಲು ಬಂದವರ ಜತೆಗೆ ಒಂದಷ್ಟು ವಿಚಾರ ಹಂಚಿಕೊಳ್ಳಲಾಗುತ್ತದೆ. ಮಲೆನಾಡು, ಪರಿಸರ, ಕುವೆಂಪು ಕುರಿತು ವಿಷಯಗಳನ್ನು ಚರ್ಚಿಸಲಾಗುತ್ತದೆ.

ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ ಪಾತ್ರಧಾರಿಗಳಾಗಿದ್ದವರು ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿದ್ದಾರೆ. ಇದರಲ್ಲಿ ಹಂದಿ ಪಾತ್ರ ನಿರ್ವಹಿಸಿದ್ದ ಕಲಾವಿದರಾದ ತಾಂಡವ ಮತ್ತು ಸದಾನಂದ ಕಾಳೆ ಈಗ ಕಿರುತೆರೆ ನಟರು. ಮುಕುಂದಯ್ಯನ ಪಾತ್ರಧಾರಿಗೆ ಚಲನಚಿತ್ರದಲ್ಲಿ ಅವಕಾಶ ದೊರೆತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry