ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಜಾತ್ರ್ಯಾಗ ಸಿಗದ್ದು ಏನೈತಿ?

Last Updated 25 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬನದ ಹುಣ್ಣಿಮೆ ಮುಂದ ಬನವೆಲ್ಲಾ ನಡುಗೇತಿ
ಬನಶಂಕ್ರಿ ಜಾತ್ರಿ ಬಂದೈತಿ! ತವರಿಂದ
ಕರಿಯಾಕ ಬಂಡಿ ಬರತೈತಿ

ಜನಪದರ ಮನದಿಂದ ಮೂಡಿಬಂದ ಈ ತ್ರಿಪದಿ, ಜಾತ್ರೆಯ ನಂಟು ಜನರೊಂದಿಗೆ ಎಷ್ಟಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಉತ್ತರವಾಹಿನಿಯಾಗಿ ಹರಿಯುವ ಮಲಪಹಾರಿ ಸಮೀಪದ ತುಳಸೀಗುಡ್ಡದ ಕೆಳಗೆ ತಿಲಕವನದಲ್ಲಿ ತೆಂಗಿನ ತೋಪು, ಬಾಳೆಗಳು ತೊನೆದಾಡುತ್ತವೆ. ಆ ಹಸಿರಿಗೆ ಉಸಿರಾಗಿರುವ ಸರಸ್ವತಿ ಹಳ್ಳ, ಹರಿದ್ರಾ ತೀರ್ಥ, ತೈಲತೀರ್ಥ, ಸದಾ ಕೇಳಿಬರುವ ಹಕ್ಕಿಗಳ ಕಲರವ... ಹೌದು, ಬಿಸಿಲ ಬೇಗೆಯ ಬಯಲು ಸೀಮೆಯಲ್ಲಿ ಮಲೆನಾಡಿನ ತುಂಡೊಂದನ್ನು ಕಂಡ ಅನುಭವ. ಇದೇ ಬನಶಂಕರಿ ದೇವಿಯ ತಾಣ. ಬನದೇವಿಯ ಸಂಪದದಲ್ಲಿ ಎದ್ದು ಕಾಣುವ ಢವಳ ಶಿಖರವನ್ನು ಹೊಂದಿದ ದೇವಾಲಯ ದೂರದಿಂದಲೇ ಆಕರ್ಷಿಸುತ್ತದೆ.

ಕಲ್ಲು ಮಂಟಪಗಳಿಂದ ಆವೃತವಾದ ಹರಿದ್ರಾತೀರ್ಥಕ್ಕೆ ಹೊಂದಿಕೊಂಡಿದೆ ಈ ಶಕ್ತಿದೇವತೆಯ ಗುಡಿ. ಮಹಾದ್ವಾರದ ಒಳಗಡೆ ಎತ್ತರವಾದ ಕಲ್ಲಿನ ದೀಪ ಸ್ತಂಭಗಳಿದ್ದು, ಬಲಿಪೀಠ ಮತ್ತು ಧ್ವಜ ಸ್ತಂಭಗಳಿವೆ.

ಗರ್ಭಗುಡಿಯಲ್ಲಿ ಕಪ್ಪು ಶಿಲೆಯಲ್ಲಿ ಕಲಾಪೂರ್ಣವಾಗಿ ಕೆತ್ತಿದ ಸಿಂಹವಾಹಿನಿಯಾದ ಎಂಟು ಕೈಗಳುಳ್ಳ ದೇವಿಯ ವಿಗ್ರಹ ಭವ್ಯವಾಗಿದೆ. ಬನಶಂಕರಿ ದೇವಿಯ ಪ್ರತಿಷ್ಠಾಪನೆ ಶಾಲಿವಾಹನ ಶಕೆ 603ರಲ್ಲಿ ಆಯಿತೆಂದು ಬನದೇವಿಯ ಪೀಠದಲ್ಲಿದ್ದ ಶಾಸನದಿಂದ ತಿಳಿಯುವುದು.

ವನದುರ್ಗೆ, ಬನಶಂಕರಿ ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಹೂವಕ್ಕ, ಚೌಡಮ್ಮ... ಹೀಗೆ ಈ ಬನದತಾಯಿಗೆ ಹತ್ತಾರು ಹೆಸರುಗಳು. ರೈತರ ಆರಾಧ್ಯ ದೈವವಾಗಿರುವ ಈ ದೇವಿಯ ಜಾತ್ರೆಯಲ್ಲಿ ಮಣ್ಣಿನ ಮಕ್ಕಳ ಸಂಭ್ರಮ ಮುಗಿಲು ಮುಟ್ಟುತ್ತದೆ.

ಜಾತ್ರೆಯ ಬಾಬುದಾರರು
ಬಾದಾಮಿಯ ಬಡಿಗೇರರು ಬನಶಂಕರಿ ತೇರು ಕಟ್ಟುವರು. ಚೋಳಚಗುಡ್ಡದ ಕಂಬಾರರು ತೇರಿಗೆ ಬೇಕಾದ ಕಬ್ಬಿಣದ ಬಳೆಗಳನ್ನು ತಯಾರಿಸಿ, ಜೋಡಿಸುವರು. ಬಾದಾಮಿಯ ಭಾಗವಾಗಿರುವ ತಟಕೋಟೆಯ ಭಕ್ತರು ತೇರಿಗೆ ಎಣ್ಣೆ ಉಣಿಸಿ, ಸುರುಮಾ ಹಚ್ಚಿ ಸಜ್ಜುಗೊಳಿಸುವರು. ಬೇಲೂರಿನ ಕುಂಬಾರರು ನಂದಾದೀಪಕ್ಕೆ ಬೇಕಾಗುವ ಪಣತಿಗಳನ್ನು ಪೂರೈಸುವರು, ರೋಣ ತಾಲ್ಲೂಕಿನ ಮೂಡ್ಲಗೇರಿ ಗ್ರಾಮದವರು ತೇರು ಎಳೆಯಲು ಬೇಕಾಗುವ ಹಗ್ಗವನ್ನು ವಿಶೇಷ ಬಂಡಿಯ ಮೇಲೆ ಮೋಜು ಮಜಲುಗಳೊಂದಿಗೆ ಮೆರವಣಿಗೆ ಮಾಡುತ್ತಾ ತರುವರು.

ಘಟಸ್ಥಾಪನೆಯಿಂದ ರಥೋತ್ಸವದ ದಿನದವರೆಗೆ ಚತುರ್ವೇದ ಪಾರಾಯಣ ಮಾಡುವರು. ರಥೋತ್ಸವದ ಮುನ್ನ ನಡೆಯುವ ಪಲ್ಲೇದ ಹಬ್ಬ ತುಂಬಾ ವೈಶಿಷ್ಟ್ಯಪೂರ್ಣ. 108 ಪಲ್ಲೆಗಳನ್ನು ಮಾಡಿ ದೇವಿಗೆ ಅರ್ಪಿಸುವರು. ಬಹುಶಃ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸದಾ ಹಸಿರನ್ನೇ ನೀಡಿದುದರ ಫಲ ಇದಾಗಿರಬಹುದು! ಬನದ ಹುಣ್ಣಿಮೆಯಂದು ರಥೋತ್ಸವ ಜರುಗುವುದು.

ಬಾದಾಮಿ ವಡ್ಡರು ತೇರಿನ ಗಾಲಿಗೆ ರಥೋತ್ಸವದ ವೇಳೆ ಸನ್ನಿ ಹಾಕುವರು. ಚೋಳಚಗುಡ್ಡದ ಕಮಾಟಿಗರು ಪಲ್ಲಕ್ಕಿ ಹೊರುವರು, ದೀವಟಿಗೆ ಹಿಡಿಯುವರು. ಭಜಂತ್ರಿಯವರು ಚೌಡಕಿ ಬಾರಿಸುವರು, ಶಹನಾಯಿ ವಾದನ ಮಾಡುವರು. ಇವರೆಲ್ಲರ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಡೊಳ್ಳಿನ ಮೇಳ, ಭಜನಾ ಮೇಳ, ನಂದಿಕೋಲು, ಹೆಜ್ಜೆ ಕುಣಿತ ತಂಡಗಳು ಜಾನಪದ ಸೊಗಡನ್ನು ಸಿರಿಯನ್ನು ಅನಾವರಣಗೊಳಿಸುವರು.

ಮುಂಗಾರು ಸುಗ್ಗಿ ಮುಗಿದು, ಹಿಂಗಾರು ಮಾಗಿ ಶೃಂಗಾರವಾಗಿರುವಾಗ ಸಂಭ್ರಮ, ಸಡಗರಗಳಿಂದ ಬರುವ ಬನಶಂಕರಿ ಜಾತ್ರೆ ಬಯಲು ಸೀಮೆಯ ಅತಿದೊಡ್ಡ ಉತ್ಸವಗಳಲ್ಲೊಂದು. ತಿಂಗಳುಗಟ್ಟಲೆ ನಡೆಯುವ ಅಪರೂಪದ ಜಾತ್ರೆ ಇದು.

ವರ್ಷವಿಡೀ ವನಪುರಿಯಾಗಿರುವ ಈ ಕ್ಷೇತ್ರದಲ್ಲಿ ಜಾತ್ರೆ ವೇಳೆಗೆ ಹೊಚ್ಚಹೊಸ ಮಾಯಾನಗರಿ ನಿರ್ಮಾಣಗೊಳ್ಳುವುದು. ಈ ಮಾಯಾನಗರಿಯಲ್ಲಿ ರಸ್ತೆಗಳು, ಕ್ರಾಸುಗಳು, ಕೂಟಗಳು, ಕಾಲುದಾರಿಗಳು ಇರುವವು. ಚಿತ್ರಮಂದಿರಗಳು, ನಾಟಕ ರಂಗಮಂದಿರಗಳು, ಸರ್ಕಸ್ ಕಂಪನಿಗಳು, ಕಟ್ಟಿಗೆಯ ಅಡ್ಡೆಗಳು, ಅಂದದ ಮನೆಗೆ ಬೇಕಾಗುವ ಚೆಂದದ ಬಾಗಿಲುಗಳು, ಹೋಟೆಲ್‌ಗಳು, ಪಾನ್ ಶಾಪ್‌ಗಳು, ಬೆಂಡು, ಬತ್ತಾಸು, ಲಡ್ಡು, ಚುರುಮುರಿ ಸಾಲು ಅಂಗಡಿಗಳು, ಅಮಿನಗಡದ ಕರದಂಟು, ಧಾರವಾಡ ಪೇಡೆ, ಬೆಳಗಾವಿ ಕುಂದಾ ಮಾರುವ ಮಳಿಗೆಗಳು, ಕಿಸೆ ಖಾಲಿ ಮಾಡಿಸುವ ಗೊಂಬೆ, ಬಾಂಡೆ ಅಂಗಡಿಗಳು... ಮಹಾನಗರಗಳ ಶಾಪಿಂಗ್‌ ಮಾಲುಗಳನ್ನು ನಾಚಿಸುವಂತಹ ಮಾರುಕಟ್ಟೆ ಇಲ್ಲಿ ನಿರ್ಮಾಣವಾಗಿರುತ್ತದೆ.

ಯಾವ ಮಾಲ್‌ಗಳಲ್ಲೂ ಸಿಗದಂತಹ ತೊಟ್ಟಿಲು ಬಟ್ಟಲು, ಟ್ರಂಕು, ಬಣ್ಣ ಬಣ್ಣದ ಬಾರಕೋಲು, ಗೆಜ್ಜೆಸರ, ಗಂಟೆ ಬಾಸಿಂಗ, ಜೂಲಾ, ಕೋಡೆನು, ಕರ್ಣಿ, ಹಣೆಗೆಜ್ಜೆ, ಗೊಂಡೆ ಇರುವ ರೈತಾಪಿ ಜನರ ಅಂಗಡಿಗಳು, ಬಳೆಗಾರ ಚನ್ನಯ್ಯರ ಬಳೆ ಅಂಗಡಿಗಳು, ಉಡದಾರ, ಶಿವದಾರ, ಕಾಶಿದಾರ, ಲಿಂಗು, ಪೀಠಕ, ವಿಭೂತಿ, ರುದ್ರಾಕ್ಷಿ, ಕ್ರಿಯಾಗಟ್ಟಿ ಮಾರಾಟದ ಮಳಿಗೆಗಳು, ಬಂಡಾರ, ಕುಂಕುಮ ಮಾರುವ ನೂಕುಬಂಡಿಗಳು, ಸಂಜೆಯ ರಂಗಿಗೆ ಜೋಲಿ ಹೊಡೆಸುವ ಗುಂಡಿನಂಗಡಿಗಳು, ಮಸ್ತರಾಮ ಮರಾಠಿ ಖಾನಾವಳಿಗಳು, ಬರ್ಮಾ ಬಜಾರುಗಳು, ಕಿವಿ ಕೊರೆಯುವ ರಿಕಾರ್ಡುಗಳು... ಒಂದೇ ಎರಡೇ ಎಲ್ಲಾ!

ಇಂಥದ್ದನ್ನು ಮತ್ತಾವ ಜಾತ್ರೆಯಲ್ಲೂ ನೋಡಲು ಸಾಧ್ಯವಿಲ್ಲ. ಅದಕ್ಕೆ ಬನಶಂಕರಿ ಜಾತ್ರೆ ಕುರಿತು ಇಲ್ಲೊಂದು ನಾಣ್ಣುಡಿ ಪ್ರಚಲಿತದಲ್ಲಿದೆ. ಬನಶಂಕರಿ ಜಾತ್ರ್ಯಾಗ ಅಪ್ಪ ಅವ್ವನ ಬಿಟ್ಟು ಎಲ್ಲಾ ಸಿಗತೈತಿ. ಇದು ಅಕ್ಷರಶಃ ಸತ್ಯ.

ಕಳಸ ಇಳಿಯುವ ದಿನ ದನದ ಜಾತ್ರೆಗೆ ನಾಂದಿ ಹಾಡುತ್ತದೆ. ಬಾದಾಮಿ ಬಂಡೆಗಳ ಮುಂದೆ ಎ.ಪಿ.ಎಂ.ಸಿ ಎದುರಿನ ಬಯಲಿನಲ್ಲಿ ಸೇರುವ ದನಗಳ ದೃಶ್ಯ ನಯನ ಮನೋಹರ. ದೂರ ದೂರದ ಊರುಗಳಿಂದ ದನಗಳು ಜಾತ್ರೆಗೆ ಬರುತ್ತವೆ. ಮಸ್ತ್‌ ಮೇಸಿದ ಹರೆಯದ ಹೋರಿಗಳು ಜಾತ್ರೆಯ ಆಕರ್ಷಣೆ. ಕೊರೆಯುವ ಚಳಿಯಲ್ಲೂ ಅವುಗಳ ಮೈತಿಕ್ಕಿ ಮಿಂಚುವಂತೆ ಮಾಡುವ ರೈತರು.

ನೋಡುಗರನ್ನು ಆಯಸ್ಕಾಂತದಂತೆ ಆಕರ್ಷಿಸುವ ಕೇಂದ್ರಗಳು ಲಕ್ಷ ಲಕ್ಷ ಕಿಮ್ಮತ್ತಿನ ಜೋಡಿಗಳು. ದನದ ಜಾತ್ರಾ ಸಮಿತಿ ನೀಡುವ ಬಹುಮಾನಗಳು. ನಂತರ ನಡೆಯುವ ವ್ಯಾಪಾರ ವಹಿವಾಟುಗಳು. ಇವು ದನದ ಜಾತ್ರೆಯ ವೈಶಿಷ್ಟ್ಯಗಳು. ಅಂದಹಾಗೆ, ಜನವರಿ 2ರಿಂದ ಶುರುವಾಗುವ ಈ ಬೆಡಗಿನ ಜಾತ್ರೆಗೆ ನೀವೂ ಒಂದ್ಸಲ ಬನ್ರಲಾ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT