7

ಅಮ್ಮನಿಗೆ ಸುಸ್ತಾಗಿದೆ, ಏನ್‌ ನಿನ್ನ ರಗಳೆ

Published:
Updated:
ಅಮ್ಮನಿಗೆ ಸುಸ್ತಾಗಿದೆ, ಏನ್‌ ನಿನ್ನ ರಗಳೆ

ಅಮ್ಮ, ನೀನು ಆಫೀಸಿಂದ ಬಂದ ತಕ್ಷಣ ಮಲ್ಕೋತೀಯಲ್ಲ? ನಂಗೆ ಬೋರಾಗುತ್ತಿದೆ ಬಾ ಹೊರಗೆ ಹೋಗೋಣ...

ಆಫೀಸಿಂದ ಬಂದ ಮೇಲಾದ್ರೂ ಒಂಚೂರು ಆರಾಮವಾಗಿ ಇರೋಣ ಅಂದ್ರೆ ನೀನ್ಯಾಕೆ ಹೀಗೆ ಕಿರುಕುಳ ಕೊಡ್ತೀಯಾ? ಆಡ್ಕೋ ಹೋಗು ಅನುಷಾ.. ನಾನು ಅಷ್ಟು ಹೊತ್ತಿಂದ ಮಾತಾಡ್ತಾನೇ ಇದ್ದೀನಿ ನೀನು ಕೇಳಿಸ್ಕೋತಾನೇ ಇಲ್ಲ...

ಹೌದು ಮಗಾ... ನಾನೂ ಮನುಷ್ಯಳೇ ಅಲ್ವಾ? ನೀನು, ಅಪ್ಪ, ಅಜ್ಜಿ, ತಾತ ಎಲ್ಲರೂ ಮಧ್ಯಾಹ್ನ ಅಥವಾ ಸಂಜೆ ನಿದ್ದೆ ಮಾಡ್ತೀರಿ. ನಾನು ಬೆಳಿಗ್ಗೆ ಐದಕ್ಕೆ ಎದ್ದು ಆರೂವರೆ ಒಳಗೆ ಬೆಳಿಗ್ಗೆ ಮತ್ತು ಮಧ್ಯಾಹ್ನದ ಅಡುಗೆ ಮಾಡಿಟ್ಟು ನಿನ್ನನ್ನು ರೆಡಿ ಮಾಡಿ ನಾನೂ ರೆಡಿಯಾಗಿ ಹೋಗುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತೆ. ಸಂಜೆ ಬಂದು ಸ್ವಲ್ಪ ಆರಾಮವಾಗಿ ಇರೋಣ ಅಂದ್ರೆ ನಿನ್ನ ಕಾಟ.

ಹೋಗಮ್ಮ ನಿಂಗೆ ನಾನಂದ್ರೆ ಇಷ್ಟಾನೇ ಇಲ್ಲ. ನಂಗೆ ಗೊತ್ತು. ಅದಕ್ಕೆ ನನ್ನ ಜತೆ ಮಾತೇ ಆಡಲ್ಲ. ಆಫೀಸಿಂದ ಬಂದು ಸುಸ್ತು ಅಂತೀಯ. ನಾನು ಯಾರ ಜತೆ ಆಟ ಆಡ್ಬೇಕು, ಯಾರ ಜತೆ ಮಾತಾಡ್ಬೇಕು ಹಾಗಿದ್ರೆ? ಪರಿಣಿತಿ ಆಗ್ಲೇ ಅವಳಮ್ಮನ ಜತೆ ಪಾರ್ಕ್‌ಗೆ ಹೋದ್ಳು ಗೊತ್ತಾ?

ಅಯ್ಯೋ ಮಗಾ ನಿಂಗೆ ನಾನು ಹೇಗೆ ಅರ್ಥ ಮಾಡಿಸ್ಬೇಕು? ನಂಗೂ ಸುಸ್ತಾಗುತ್ತಲ್ವಾ ಪುಟ್ಟ... ಅರ್ಥ ಮಾಡ್ಕೋ...

***

ಅಮ್ಮನ ಸುಸ್ತು ಅರ್ಥವಾಗದ ಮಗಳು, ಮಕ್ಕಳ ಆಟವಾಡುವ ಮನಸ್ಸಿಗೆ ಸ್ಪಂದಿಸಲಾಗದ ಅಮ್ಮ... ಮನೆ, ಕಚೇರಿ, ಪ್ರಯಾಣದ ನಡುವೆ ಹೈರಾಣಾಗುವ ಉದ್ಯೋಗಸ್ಥ ತಾಯಂದಿರು ಮತ್ತು ಮಕ್ಕಳ ನಡುವಿನ ಭಾವನಾತ್ಮಕ ಬಂಧ ಸಡಿಲವಾಗುತ್ತಿದೆಯೇ? ‘ನಾನು ದುಡಿಯೋದು ನಿನಗಾಗಿಯೇ, ನಿನ್ನ ಭವಿಷ್ಯಕ್ಕಾಗಿಯೇ’ ಎನ್ನುವ ಅಮ್ಮ ಅದೇ ಮಗುವಿನೊಂದಿಗೆ ಮೌಲಿಕ ಸಮಯವನ್ನು (ವ್ಯಾಲ್ಯೂ ಟೈಂ) ಕಳೆಯಲಾಗದೆ ಒದ್ದಾಡುತ್ತಿದ್ದಾಳೆಯೇ?

ಎರಡನೇ ತರಗತಿಯ ಮಕ್ಕಳ ತಾಯಂದಿರ ವಾಟ್ಸ್‌ಆ್ಯಪ್‌ ಬಳಗವೊಂದರಲ್ಲಿ ಇಂಥದ್ದೊಂದು ಚರ್ಚೆ ಈಚೆಗೆ ನಡೆದಿತ್ತು. ಎಲ್ಲರ ದೂರೂ ಮಕ್ಕಳ ಕುರಿತಾಗಿಯೇ ಇತ್ತು. ಆದರೆ ಕೊನೆಯಲ್ಲಿ ಅವರೆಲ್ಲರೂ ಒಕ್ಕೊರಲಿನ ನಿರ್ಧಾರವನ್ನೂ ಪ್ರಕಟಿಸಿದ್ದರು. ಉದ್ಯೋಗಸ್ಥ ತಾಯಂದಿರು ಮಕ್ಕಳ ಮನಸ್ಸನ್ನು ಅರಿತು ತಮ್ಮ ದಿನಚರಿಯಲ್ಲಿ ಒಂದಿಷ್ಟು ತಿದ್ದುಪಡಿ ಮಾಡಿಕೊಳ್ಳುವುದು ಅವರ ನಿರ್ಧಾರದ ಮುಖ್ಯಾಂಶ.

‘ಇಡೀ ಕುಟುಂಬಕ್ಕಾಗಿ ತ್ಯಾಗ ಮಾಡುವ, ತಾಳ್ಮೆ ವಹಿಸುವ ನಾವು ನಮ್ಮದೇ ಕರುಳಬಳ್ಳಿಗಳ ಬಗ್ಗೆ ಅಸಹನೆ, ಅಲಕ್ಷ್ಯ ಮಾಡಬಾರದು. ಅದಕ್ಕಾಗಿ ಇನ್ನಷ್ಟು ಸಹನೆಯನ್ನು ರೂಢಿಸಿಕೊಳ್ಳಬೇಕು. ಇದರಿಂದ ಮಕ್ಕಳ ಜತೆ ಆಟವಾಡಲು, ಅವರಿಗಾಗಿ ನಮ್ಮ ಅಮೂಲ್ಯ ಸಮಯವನ್ನು ಮೀಸಲಿಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂಬುದು ಅವರ ಒಟ್ಟಾರೆ ನಿರ್ಧಾರ.

ಆ ಗುಂಪಿನಲ್ಲೊಬ್ಬರು ಮನೋವೈದ್ಯೆಯೂ ಇದ್ದಾರೆ. ಅವರು ಪ್ರತಿಯೊಬ್ಬರ ಮನಸ್ಸಿಗೆ ನಾಟುವ ಸಲಹೆ ನೀಡಿದ್ದರು. ‘ನಮ್ಮ ಮಾನಸಿಕ ತುಮುಲ, ಒತ್ತಡ, ಅಸಹನೆ, ಮುಂಗೋಪ, ದುಃಖ, ತಲೆನೋವು, ಕಚೇರಿಯಲ್ಲೋ, ಮನೆಯಲ್ಲೋ, ಪ್ರಯಾಣದಲ್ಲೋ ಆದ ಕಹಿಘಟನೆಗಳಿಂದ ಹೊರಬಂದು ಹೊಸ ಉಲ್ಲಾಸ ತುಂಬಿಕೊಳ್ಳಲು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವುದು ಅತ್ಯಂತ ಪರಿಣಾಮಕಾರಿ ಮಾರ್ಗ’ ಎಂಬುದು ಅವರ ಸಲಹೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry