ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌ ಶರ್ಮಾ ಬ್ಯಾಟಿಂಗ್‌ನಲ್ಲಿ ಲಾಲಿತ್ಯ

Last Updated 25 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಲೇ ಝಿ ಎಲಿಗೆನ್ಸ್’- ಹೀಗೊಂದು ಪದವನ್ನು ಕ್ರಿಕೆಟ್ ವೀಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ಪ್ರಯೋಗಿಸಿದ್ದರು. ರೋಹಿತ್ ಶರ್ಮ ಬ್ಯಾಟಿಂಗ್ ಶೈಲಿಗೆ ಅವರು ಕೊಟ್ಟ ಗುಣವಿಶೇಷಣವಿದು. ಸೋಮಾರಿತನವೆಂಬಂತೆ ತೋರುವ ಬ್ಯಾಟಿಂಗ್ ನಲ್ಲಿಯೂ ಇರುವ ಲಾಲಿತ್ಯವನ್ನು ಹರ್ಷ ಸರಿಯಾಗಿಯೇ ಗುರುತಿಸಿದ್ದರು.

ರೋಹಿತ್ ಇಷ್ಟಪಡುವ ತಂಡ ಶ್ರೀಲಂಕಾ. ಅವರು ಎರಡನೇ ಹಾಗೂ ಮೂರನೇ ದ್ವಿಶತಕಗಳನ್ನು ಏಕದಿನ ಪಂದ್ಯಗಳಲ್ಲಿ ಗಳಿಸಿದ್ದು ಅದೇ ತಂಡದ ವಿರುದ್ಧ. 50 ಓವರ್ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ವಿಶ್ವದ ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ ಗಳಿಸಿಲ್ಲ. ಇದು ರೋಹಿತ್ ವಿಕ್ರಮ.
ಮಹಾರಾಷ್ಟ್ರದ ಹುಡುಗ ರೋಹಿತ್ ಬೆಳೆದದ್ದು ಅಜ್ಜಿ-ತಾತನ ಮನೆಯಲ್ಲಿ. ಅಪ್ಪ-ಅಮ್ಮನಿಗೆ ಮಗನನ್ನು ಓದಿಸುವುದೂ ಕಷ್ಟವಿತ್ತು ಎಂಬ ಮಾತಿದೆ.

ಮುಂಬೈನ ಬೊರಿವಲಿಯ ಅಜ್ಜಿಯ ಮನೆಯಲ್ಲಿ ಚೆಂಡಿನಾಟ ಆಡುತ್ತಿದ್ದ 11ರ ಹುಡುಗನನ್ನು ಕ್ರಿಕೆಟ್ ಶಿಬಿರಕ್ಕೆ ಸೇರಿಸಿದ್ದು ಚಿಕ್ಕಪ್ಪ. ಶುಲ್ಕ ಭರಿಸಿದ್ದೂ ಅವರೇ. ಅಲ್ಲಿದ್ದ ತರಬೇತುದಾರ ದಿನೇಶ್ ಲ್ಯಾಡ್ ಬೆಳೆಯುವ ಪೈರನ್ನು ಮೊಳಕೆಯಲ್ಲೇ ಗುರುತಿಸಿದರು. ಸ್ವಾಮಿ ವಿವೇಕಾನಂದ ಅಂತರರಾಷ್ಟ್ರೀಯ ಶಾಲೆಯಲ್ಲಿ ಅವರು ತರಬೇತುದಾರರಾಗಿದ್ದರು.

ರೋಹಿತ್ ಪ್ರತಿಭೆ ಗಮನಿಸಿ, ಅವರು ಅದೇ ಶಾಲೆಗೆ ಸೇರಿಸಿದ್ದು ತಿರುವು. ಶಾಲೆಗೆ ಶುಲ್ಕ ಕಟ್ಟುವಷ್ಟು ಶಕ್ತಿ ರೋಹಿತ್ ಕುಟುಂಬಕ್ಕೆ ಇರಲಿಲ್ಲ. ಅದಕ್ಕೇ ದಿನೇಶ್ ವಿದ್ಯಾರ್ಥಿವೇತನ ಕೊಡಿಸಿದರು. ನಾಲ್ಕು ವರ್ಷ ಚಿಕ್ಕಾಸು ಶುಲ್ಕವನ್ನೂ ಕಟ್ಟದೆ ರೋಹಿತ್ ಓದಿನ ಜೊತೆಗೆ ಕ್ರಿಕೆಟ್ಟನ್ನೂ ಕಲಿತರು.

ತುರುಸಿನ ಸ್ಪರ್ಧೆಯ ಕಾಲಘಟ್ಟದಲ್ಲಿ ರೋಹಿತ್ ಮೊದಲ ದರ್ಜೆ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದು. 2006ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಆಡಿ ಕೈಪಳಗಿಸಿಕೊಂಡರು. 2006-07ರ ರಣಜಿ ಋತುವಿನಲ್ಲಿ ಮುಂಬೈ ತಂಡ ಪ್ರತಿನಿಧಿಸುವ ಅವಕಾಶ ಅವರಿಗೆ ಸಿಕ್ಕಿತು.

ಗುಜರಾತ್ ವಿರುದ್ಧದ ಪಂದ್ಯವೊಂದರ ಇನಿಂಗ್ಸ್‌ನಲ್ಲಿ ಬರೀ 267 ಎಸೆತಗಳಲ್ಲಿ 205 ರನ್ ಜಮೆ ಮಾಡಿದಾಗಲೇ ಅವರ ರನ್ ಹಸಿವು ವ್ಯಕ್ತಗೊಂಡಿತ್ತು. 2008-09ರ ರಣಜಿ ಫೈನಲ್ಸ್‌ನ ಎರಡೂ ಇನಿಂಗ್ಸ್ ಗಳಲ್ಲಿ ಶತಕಗಳನ್ನು ಗಳಿಸಿ, ಅನುಭವ ಗಟ್ಟಿಯಾಗುತ್ತಿರುವ ಸೂಚನೆಯನ್ನೂ ಅವರು ಕೊಟ್ಟಿದ್ದರು.

ಇಂಥ ಹಿನ್ನೆಲೆಯಿದ್ದೂ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಆರು ವರ್ಷ ಅವರು ಪಡಿಪಾಟಲು ಪಟ್ಟರು. ಸ್ಥಿರತೆಯದ್ದೇ ಅವರಿಗೆ ಸಮಸ್ಯೆ. ಸುರೇಶ್ ರೈನಾ, ವಿರಾಟ್ ಕೊಹ್ಲಿ ರೇಸ್‌ನಲ್ಲಿ ಅವರನ್ನು ಹಿಂದಿಕ್ಕಿಬಿಟ್ಟರು. ಅಸ್ಥಿರತೆಯ ಕಾರಣದಿಂದಲೇ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಆಡುವ ಅವಕಾಶದಿಂದಲೂ ಅವರು ವಂಚಿತರಾದರು. 2011ರಲ್ಲಿ ವಿಂಡೀಸ್ ಎದುರು ಆಡುವ ಅವಕಾಶ ಸಿಕ್ಕಾಗ ಮಿಂಚಿ, ಸರಣಿ ಶ್ರೇಷ್ಠ ಗೌರವ ಪಡೆದರು.

2015ರ ವಿಶ್ವಕಪ್‌ನಲ್ಲಿ ದೇಶದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದು ಅವರ ಹೋರಾಟ ಪ್ರಜ್ಞೆಗೆ ಸಾಕ್ಷಿ.
2013ರಲ್ಲಿ ಆರಂಭಿಕ ಆಟಗಾರನಾಗಿ ಬಡ್ತಿ ಪಡೆದ ಮೇಲಷ್ಟೆ ರೋಹಿತ್ ಅಸ್ಥಿರತೆಯ ಹಣೆಪಟ್ಟಿ ಕಳಚಿದ್ದು.

ನೂರಾಎಂಟು ಏಕದಿನ ಪಂದ್ಯಗಳನ್ನು ಆಡಿದ ನಂತರ ರೋಹಿತ್ ಟೆಸ್ಟ್ ಪದಾರ್ಪಣೆಗೆ ಕಾಲ ಕೂಡಿಬಂದದ್ದು. 2010ರಲ್ಲಿ ವಿ.ವಿ.ಎಸ್. ಲಕ್ಷ್ಮಣ್ ಗಾಯಗೊಂಡಾಗ ಬದಲಿ ಆಟಗಾರನಾಗಿ ಆಡಲು ಬುಲಾವು ಸಿಕ್ಕಿತ್ತು. ಆದರೆ, ಅಭ್ಯಾಸ ಮಾಡುವಾಗ ಫುಟ್ ಬಾಲ್ ಆಡಲು ಹೋಗಿ ಗಾಯ ಮಾಡಿಕೊಂಡರು. ಆಗ ಅದೃಷ್ಟ ಕೈಕೊಟ್ಟಿದ್ದರಿಂದ ಇನ್ನೂ ಮೂರು ವರ್ಷ ಟೆಸ್ಟ್ ಆಡಲು ಕಾಯುವ ಪರಿಸ್ಥಿತಿ ಬಂತು.

ಶತಕಕ್ಕೂ ರೋಹಿತ್‌ಗೂ ನಂಟಿದೆ. ಆಡಿದ ಮೊದಲ ಎರಡೂ ಟೆಸ್ಟ್‌ಗಳಲ್ಲಿ ಅವರು ಶತಕ ದಾಖಲಿಸಿದರು. ಟ್ವೆಂಟಿ20 ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಗಳಿಸಿದಾಗ ಅಂಥ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಗೌರವ ಅವರನ್ನು ಹುಡುಕಿಕೊಂಡು ಬಂತು. 2009ರ ರಣಜಿಯಲ್ಲಿ ತ್ರಿಶತಕ ಗಳಿಸಿದ ಮೇಲೆ ಅವರ ಲಯದ ಕುರಿತು ಇದ್ದ ಅನುಮಾನಗಳು ದೂರವಾಗಿದ್ದವು.

ಮೊನ್ನೆ ಅವರು ಶ್ರೀಲಂಕಾ ವಿರುದ್ಧ ದ್ವಿಶತಕ ಗಳಿಸಿದಾಗ, ಪತ್ನಿ ರಿತಿಕಾ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತು. ಯಾಕೆಂದರೆ, ತನ್ನ ಪತಿ ಹಾದು ಬಂದಿರುವ ಕಷ್ಟಗಳ ಅರಿವು ಅವರಿಗೆ ಚೆನ್ನಾಗಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT