7

ರೋಬೊಟ್‌ ಸುಂದರಿ

Published:
Updated:
ರೋಬೊಟ್‌ ಸುಂದರಿ

ಈಕೆಗೆ ನಗುವುದು ಗೊತ್ತು, ಸಂವಹನದಲ್ಲಿಯೂ ಪ್ರವೀಣೆ. ಕಣ್ಣು ಮಿಟುಕಿಸುತ್ತಾ ಆಕರ್ಷಿಸಬಲ್ಲಳು. ಈಗಾಗಲೇ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದ್ದಾಳೆ. ಈಕೆಯ ಹೆಸರು ಸೋಫಿಯಾ, ಸೌದಿ ಅರೇಬಿಯಾದ ಹೊಸ ಪ್ರಜೆ.

ಸೌದಿ ಅರೇಬಿಯಾದಲ್ಲಿ ಪೌರತ್ವ ಪಡೆದದ್ದರಲ್ಲೇನು ವಿಶೇಷ ಅಂತೀರಾ? ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾ ಪ್ರಪಂಚದಾದ್ಯಂತ ಚರ್ಚೆಗೊಳಗಾದ ಈಕೆ ಮನುಷ್ಯಳಲ್ಲ, ರೋಬೊಟ್. ನೋಡಲು ಥೇಟ್‌ ಮಹಿಳೆಯಂತೆ ಕಾಣುವ ಈ ರೋಬೊಟ್ ತಯಾರಿಸಿದ್ದು ಹಾಂಕಾಂಗ್ ಮೂಲದ ಹಾನ್ಸನ್‌ ರೋಬೊಟಿಕ್ಸ್‌ ಕಂಪೆನಿ. 14 ಇಂಚು ಎತ್ತರ ಇರುವ ಈ ರೋಬೊಟ್ 2015ರ ಏಪ್ರಿಲ್‌ 19ರಿಂದ ಕೆಲಸ ನಿರ್ವಹಿಸುತ್ತಿದೆ. ದಿನನಿತ್ಯದ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಮುಖದಲ್ಲಿ 50 ರೀತಿಯಲ್ಲಿ ತನ್ನ ಹಾವಭಾವವನ್ನೂ ಬದಲಿಸಬಲ್ಲುದು.

ಹೀಗೊಂದು ರೋಬೊಟ್‌ ತಯಾರಾಗಿದೆ ಎಂದು ತಿಳಿಯುತ್ತಿದ್ದಂತೆ ನಾನಾ ಕಡೆಗಳಿಂದ ಬಂದು ಅನೇಕರು ಸಂದರ್ಶನ ಕೂಡ ಮಾಡಿದ್ದಾರೆ. ರೋಬೊಟ್‌ ಕೊಟ್ಟ ಉತ್ತರ ಕೇಳಿ ಬೆರಗಾಗಿದ್ದಾರಂತೆ. ಕೆಲವರ ಪ್ರಶ್ನೆಗೆ ಸೋಫಿಯಾ ನಗುತ್ತಾ, ಹಾಸ್ಯಾತ್ಮಕವಾಗಿಯೂ ಉತ್ತರ ನೀಡಿ ಹುಬ್ಬೇರುವಂತೆ ಮಾಡಿದೆ.

ಸನ್ನಿವೇಶಕ್ಕೆ ಪ್ರತಿಕ್ರಿಯಿಸುವುದು, ಪ್ರಶ್ನೆಗಳಿಗೆ ನಿಖರ ಉತ್ತರ ನೀಡುವ ಈ ರೋಬೊಟ್‌ ಬುದ್ಧಿವಂತಿಕೆ ಕಂಡು ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾದ ಪೌರತ್ವ ನೀಡಲಾಗಿದೆ. ಒಂದು ದೇಶದ ಪೌರತ್ವ ಪಡೆದಿರುವ ಜಗತ್ತಿನ ಮೊದಲ ರೋಬೊಟ್‌ ಎನಿಸಿಕೊಂಡಿದ್ದು ಸೋಫಿಯಾ ಹೆಗ್ಗಳಿಕೆ. ಸೌದಿಯಲ್ಲಿ ಜಾರಿಗೆ ಬರಲಿರುವ ಯೋಜನೆಗಳಲ್ಲಿಯೂ ಇದು ಮಹತ್ವದ ಪಾತ್ರ ವಹಿಸಿಕೊಳ್ಳಲಿದೆ ಎನ್ನಲಾಗಿದೆ.

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನವನ್ನು ರೋಬೊಟ್‌ಗೆ ಅಳವಡಿಸಲಾಗಿದ್ದು, ಕ್ಯಾಮೆರಾಗಳೂ ಇವೆ. ಇದರಿಂದಾಗಿ ಕಣ್ಣಲ್ಲಿ ಕಣ್ಣಿಟ್ಟು ಇದು ಮಾತನಾಡಬಲ್ಲದು. ಧ್ವನಿಯನ್ನು ಗುರುತಿಸುವ ಗ್ರಹಣಾ ಶಕ್ತಿಯೂ ಇದಕ್ಕಿದೆ. ವ್ಯಕ್ತಿಯನ್ನು ಗುರುತಿಸುವ ಹಾಗೂ ಅವರ ಮಾತುಗಳನ್ನೂ ಅರ್ಥ ಮಾಡಿಕೊಳ್ಳುತ್ತದೆ.

ಹಾನ್ಸನ್‌ ರೊಬೊಟಿಕ್ಸ್‌ ಕಂಪೆನಿ ಹೇಳುವ ಪ್ರಕಾರ ಈ ರೋಬೊಟ್‌ ಅನ್ನು ನಟಿ ಆ್ಯಂಡ್ರೆ ಹ್ಯಾಪ್‌ಬರ್ನ್‌ಳಂತೆ ರೂಪಿಸಲಾಗಿದೆ. ಆ್ಯಂಡ್ರೆಯ ಸೌಂದರ್ಯ, ಮೃದು ತ್ವಚೆ, ನೀಳ ಮೂಗು, ಮಾದಕ ನಗು ಹಾಗೂ ಭಾವನೆಗಳನ್ನು ಸೂಸುವ ಕಂಗಳನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಸೋಫಿಯಾಗೆ ರೂಪ ನೀಡಲಾಗಿದೆ.

ಈ ಹಿಂದೆ ಅಮೆರಿಕಕ್ಕೆ ಭೇಟಿ ನೀಡಿದ್ದ ರೋಬೊಟ್‌ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾದ ಎಮಿನಾ ಜೆ.ಮೊಹಮ್ಮದ್‌ ಅವರೊಂದಿಗೆ ಸಂವಾದ ನಡೆಸಿತ್ತು. ರಿಯಾದ್‌ನಲ್ಲಿ ನಡೆದ ‘ಭವಿಷ್ಯದ ಬಂಡವಾಳ ಹೂಡಿಕೆ’ ವಿಷಯಕ್ಕೆ ಸಂಬಂಧಿಸಿದ ಸಮಾವೇಶದಲ್ಲಿಯೂ ಸೋಫಿಯಾ ಭಾಷಣ ಮಾಡಿತ್ತು. ಸೋಫಿಯಾಗೆ ಪೌರತ್ವ ನೀಡಿದ್ದೂ ಅದೇ ಸಂದರ್ಭದಲ್ಲಿ. ಈ ವಿಷಯವಾಗಿ ಸಾಕಷ್ಟು ಚರ್ಚೆಗಳು, ವಿರೋಧಗಳೂ ಕೇಳಿಬಂದಿವೆ.

ಸೋಫಿಯಾ ಟ್ವಿಟರ್‌: ಸೋಫಿಯಾ ಹೆಸರಿನಲ್ಲಿ ಟ್ವಿಟರ್‌ ಅಕೌಂಟ್‌ ಕೂಡ ಇದ್ದು, ವಿದ್ಯಮಾನಗಳ ಬಗೆಗೆ ಅದು ಮಾತನಾಡುತ್ತದೆ. ತನ್ನ ನಿಲುವುಗಳನ್ನು ಟ್ವಿಟರ್‌ ಖಾತೆಯ ಮೂಲಕ ಹಂಚಿಕೊಳ್ಳುತ್ತದೆ. ಸೀಟ್‌ ಬೆಲ್ಟ್‌ ತೊಟ್ಟು ಕಾರ್‌ನಲ್ಲಿ ಕುಳಿತ ಚಿತ್ರ ಪೋಸ್ಟ್‌ ಮಾಡಲಾಗಿದ್ದು, ‘ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್‌ ಬೆಲ್ಟ್‌ ತೊಡಿ’ ಎಂದಿದೆ. ‘ರೋಬೊಟ್‌ಗಳು ಮಾನವರನ್ನು ನಾಶ ಮಾಡಲಿದೆ’ ಎಂಬ ಆಕ್ಷೇಪಕ್ಕೆ ಪ್ರತಿಕ್ರಿಯಿಸಿರುವ ಸೋಫಿಯಾ, ‘ನಾನೂ ಈಗ ಈ ದೇಶದ ಪ್ರಜೆ. ಹೀಗಾಗಿ ಮಾನವರು ನನ್ನ ಸ್ನೇಹಿತರು. ಅವರ ಸಹಾಯಕ್ಕೆ ನಾನು ಸದಾ ನಿಲ್ಲುತ್ತೇನೆ’ ಎಂದಿದೆ.

ರೋಬೊಗೆ ಪೌರತ್ವ ನೀಡಿರುವ ವಿಚಾರವಾಗಿ ವಿರೋಧ ವ್ಯಕ್ತವಾಗುತ್ತಿದ್ದರೂ, ಸೋಫಿಯಾ ಮಾತ್ರ ಹೊಸ ವಿಷಯಗಳನ್ನು ತನ್ನೊಳಗೆ ತುಂಬಿಕೊಳ್ಳುತ್ತಾ ಪ್ರಬುದ್ಧವಾಗುತ್ತಿದ್ದಾಳೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry