7

ಶ್ರಮದ ಪರಿಚಯವೂ ಆಗಲಿ

Published:
Updated:

‘ಯಾರಾದರೂ ನಾನೊಬ್ಬ ಮುಸ್ಲಿಂ, ಕ್ರಿಶ್ಚಿಯನ್, ಲಿಂಗಾಯತ, ಬ್ರಾಹ್ಮಣ, ಹಿಂದೂ ಎಂದರೆ ಖುಷಿಯಾಗುತ್ತದೆ. ಏಕೆಂದರೆ ಆತನಿಗೆ ತನ್ನ ರಕ್ತದ ಪರಿಚಯ ಇದೆ ಎಂದರ್ಥ’ (ಪ್ರ.ವಾ., ಡಿ. 25) ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಈ ಸುದ್ದಿ ಓದುತ್ತಿದ್ದಂತೆಯೇ, ಇದೇ ರೀತಿ ನಮಗೆ ಆಹಾರ ಪದಾರ್ಥಗಳನ್ನು ಬೆಳೆದುಕೊಟ್ಟಿರುವ, ನಾವು ತೊಟ್ಟಿರುವ ಬಟ್ಟೆಯನ್ನು ನೇಯ್ದಿರುವ ಮತ್ತು ವಾಸಕ್ಕೆ ಮನೆಯನ್ನು ಕಟ್ಟಿರುವ ವ್ಯಕ್ತಿಗಳ ಬೆವರನ್ನು ಪರೀಕ್ಷಿಸಿದರೆ, ನಮ್ಮ ಜಾತಿ–ಧರ್ಮವನ್ನು ಮತ್ತಷ್ಟು ಖಚಿತವಾಗಿ ತಿಳಿಯಬಹುದು ಎಂಬ ಅನಿಸಿಕೆಯುಂಟಾಯಿತು.

ಅನಂತಕುಮಾರ್ ಹೆಗಡೆಯವರು ಇತ್ತೀಚೆಗೆ ಆಡುತ್ತಿರುವ ಮಾತುಗಳು ಮೇಲ್ನೋಟಕ್ಕೆ ಹಗುರವಾಗಿ ಕಂಡುಬಂದರೂ, ಅದರಿಂದ ಒಟ್ಟು ಸಮಾಜದ ಮತ್ತು ದೇಶದ ಜನರ ಬದುಕಿಗೆ ದೊಡ್ಡ ಹಾನಿಯುಂಟಾಗುತ್ತಿದೆ. ಏಕೆಂದರೆ ಸಾರ್ವಜನಿಕ ಜೀವನದ ವ್ಯವಹಾರಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಜಾತಿ, ಧರ್ಮವನ್ನು ತನ್ನ ಮೇಲರಿಮೆಯ ಮತ್ತು ಅಹಂಕಾರದ ಆಯುಧವನ್ನಾಗಿ ಮಾಡಿಕೊಂಡಾಗ ಉಂಟಾಗುವ ಸಾಮಾಜಿಕ ಕ್ಷೋಭೆಯು ಇಡೀ ಸಮಾಜವನ್ನು ಮತ್ತು ದೇಶವನ್ನು ಆವರಿಸತೊಡಗುತ್ತದೆ.

ನೂರಾರು ವರ್ಷಗಳಿಂದ ಕಡುಬಡತನದ ಬದುಕಿನಲ್ಲೂ ನೆರೆಹೊರೆಯವರ ಜೊತೆಯಲ್ಲಿ ನೆಮ್ಮದಿಯಿಂದ ಬಾಳುತ್ತಿರುವ ಕೆಳಮಧ್ಯಮ ವರ್ಗದ ಮತ್ತು ಕೆಳವರ್ಗದ ಜನರ ಬದುಕನ್ನು ಇಂತಹ ಮಾತಿನ ಕಿಡಿಗಳು ಮೊದಲು ದುರಂತಕ್ಕೆ ತಳ್ಳುತ್ತವೆ. ಆನಂತರ ನಾವು ಸುರಕ್ಷಿತವೆಂದು ನಂಬಿ, ಈ ಬಗೆಯ ಮೋಜಿನ ಮಾತುಗಳನ್ನು ಕೇಳುತ್ತಿರುವ ಮಧ್ಯಮ ಮೇಲು ವರ್ಗದವರು ಮತ್ತು ಸಿರಿವಂತರು ಸಾಮಾಜಿಕ ಕ್ಷೋಭೆಯಿಂದ ಉಂಟಾಗುವ ದಳ್ಳುರಿಯಲ್ಲಿ ಬೇಯುವಂತಹ ಸಂದರ್ಭ ಸೃಷ್ಟಿಯಾಗುತ್ತದೆ. ಇಂತಹ ಮಾತುಗಳಿಗೆ ಸಂವಿಧಾನದತ್ತವಾದ ಕಾನೂನು ಇಲ್ಲವೇ ಮಾನವೀಯತೆಯಿಂದ ಕೂಡಿದ ನಡೆನುಡಿಗಳಿಂದ ಕಡಿವಾಣವನ್ನು ಹಾಕದಿದ್ದರೆ ಯಾರೊಬ್ಬರಿಗೂ ನೆಮ್ಮದಿಯಿಲ್ಲದಂತಹ ದಿನಗಳು ಮುಂದೆ ಬರಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry