7

ಸರ್ಕಾರಿ ಆಸ್ಪತ್ರೆ –ವೈದ್ಯರು

Published:
Updated:

ಇತ್ತೀಚೆಗೆ ನಮ್ಮ ಮನೆ ಕೆಲಸದವಳು ಬೆನ್ನು ನೋವಿನಿಂದ ಒದ್ದಾಡುತ್ತಿದ್ದಳು. ನಾನು ‘ಕೆ.ಆರ್. ಆಸ್ಪತ್ರೆಗೆ (ಮೈಸೂರು) ಹೋಗು’ ಎಂದು ಉಚಿತ ಸಲಹೆ ನೀಡಿದೆ. ‘ಅಯ್ಯೋ ಬ್ಯಾಡ ಕಣ್ರವ್ವ ಅಲ್ಲಿ ಶಾನೆ ಜನ, ಔಷ್ದಿನೇ ಕೊಡಲ್ಲ, ಇಂಜಕ್ಷನ್ನೂ ಕೊಡಲ್ಲ. ‘ಫೋಟೊ ತೆಗೆಯೋ ಯಂತ್ರ (ಎಕ್ಸ್ ರೇ) ಕೆಟ್ಟೋಗದೆ’ ಅಂತಾರೆ, ನಮ್ಮ ಡಾಕ್ಟ್ರು ಪೀಸು ತಗಂಡ್ರೂ ಒಳ್ಳೆ ಔಷ್ದಿ ಕೊಡ್ತಾರೆ’ ಎಂದಳು.

ಖಾಸಗಿ ಆಸ್ಪತ್ರೆಗಳ ನಿಯಂತ್ರಣದ ಬಗ್ಗೆ ಸರ್ಕಾರ ಮಾತನಾಡುತ್ತಿದೆ. ಆದರೆ ಅದರದೇ ಸ್ವಾಮ್ಯದ ಆಸ್ಪತ್ರೆಗಳ ಕಡೆ ಗಮನಹರಿಸುತ್ತಿಲ್ಲವೇಕೆ?

ವರ್ಷಕ್ಕೊಂದು ಬಾರಿಯೋ ಎರಡು ಬಾರಿಯೋ ಆರೋಗ್ಯಮಂತ್ರಿ ಆಸ್ಪತ್ರೆಗೆ ಭೇಟಿ ನೀಡಿ, ಕೂಗಾಡಿ, ಹಾರಾಡಿ, ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಆದಾದ  ವಾರದಲ್ಲೇ ‘ನಾಯಿಬಾಲ ಡೊಂಕು’ ಎಂಬಂತೆ ಆಸ್ಪತ್ರೆಗಳು ಯಥಾಸ್ಥಿತಿಗೆ ಮರಳುತ್ತವೆ.

ಸರ್ಕಾರಿ ವೈದ್ಯರಲ್ಲಿ ಅನೇಕರು ಮನೆಯಲ್ಲಿ ಸ್ವಂತ ಕ್ಲಿನಿಕ್ ನಡೆಸುತ್ತಿದ್ದಾರೆ. ಅನೇಕ ಖಾಸಗಿ ನರ್ಸಿಂಗ್ ಹೋಂಗಳಿಗೆ ‘ವಿಸಿಟಿಂಗ್ ಡಾಕ್ಟರ್’ಗಳಾಗಿದ್ದಾರೆ. ಅವರೂ ದುಬಾರಿ ಫೀಸು ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರ ಅವರ ಮೇಲೆ ಯಾವ ಕ್ರಮ ಕೈಗೊಂಡಿದೆ?

ಆಸ್ಪತ್ರೆಯ ಆವರಣ, ವಾರ್ಡುಗಳು, ಶೌಚಾಲಯಗಳು ಸ್ವಚ್ಛತೆಯಿಂದ ದೂರವಾಗಿವೆ. ರೋಗಿಗಳ ಜೊತೆ ಬರುವವರಿಗೆ ಕುಳಿತುಕೊಳ್ಳಲು, ಮಲಗಲು ಜನರಲ್ ವಾರ್ಡ್‌ಗಳಲ್ಲಿ ಸೌಲಭ್ಯಗಳಿಲ್ಲ. ಸಾರ್ವಜನಿಕ ಆಸ್ಪತ್ರೆಗಳು ಸಾರ್ವಜನಿಕರಿಗೆ ಸೌಲಭ್ಯ ಒದಗಿಸದಿದ್ದರೆ ಹೇಗೆ?

ಈ ಬಗ್ಗೆ ನಾವು ಮಾತನಾಡುತ್ತಿದ್ದಾಗ ಪರಿಚಯಸ್ಥರೊಬ್ಬರು ಬಂದರು. ‘ನನ್ನ ಮಗಳು ಬಯಸಿ ಬಯಸಿ ಮೆಡಿಕಲ್‌ಗೆ ಸೇರಿದಳು. ಈಗ ಹೌಸ್‌ಸರ್ಜನ್ ಆಗಿದ್ದಾಳೆ. 24 ಗಂಟೆ ಡ್ಯೂಟಿ ಮಾಡಬೇಕು. ಡ್ಯೂಟಿ ಮಾಡಲು ಅವಳಿಗಾಗಲೀ, ಅವಳ ಸಹಪಾಠಿಗಳಿಗಾಗಲೀ ಬೇಸರವಿಲ್ಲ. ಆದರೆ ಆಸ್ಪತ್ರೆಯಲ್ಲಿ ಅವರು ತಂಗಲು, ವಿಶ್ರಾಂತಿ ತೆಗೆದುಕೊಳ್ಳಲು ವ್ಯವಸ್ಥೆಯಿಲ್ಲ. ಟಾಯ್ಲೆಟ್ ಬಳಸಲಾರದ ಸ್ಥಿತಿಯಲ್ಲಿರುತ್ತದೆ. ಚಳಿಗೆ ಕಂಬಳಿ ಹೊದ್ದು, ಎಲ್ಲೋ ಕುಳಿತು ರಾತ್ರಿ 2.30ಕ್ಕೆ ಒಬ್ಬಳೇ ಮನೆಗೆ ಬರುವ ಪರಿಸ್ಥಿತಿ ಇದೆ. ನಮಗೆ ನೆಮ್ಮದಿಯೇ ಇಲ್ಲ. ಯಾರ ಬಳಿ ಈ ತೊಂದರೆ ಹೇಳಲು ಸಾಧ್ಯ?’ ಎಂದರು.

ಖಾಸಗಿ ಆಸ್ಪತ್ರೆಗಳ ಮೇಲೆ ಹರಿಹಾಯುವ ರಾಜಕಾರಣಿಗಳು ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಚುನಾವಣೆ ಹತ್ತಿರ ಬಂದಾಗ ಮತದಾರರನ್ನು ಸೆಳೆಯಲು ಕಣ್ಣೊರೆಸುವ ತಂತ್ರಗಳನ್ನು ಮಾಡುವುದನ್ನು ಬಿಟ್ಟು ಜನರಿಗೆ ಉತ್ತಮ ಸೌಲಭ್ಯ ದೊರೆಯುವಂತೆ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಒಳ್ಳೆಯ ಸೌಲಭ್ಯ ಮತ್ತು ಚಿಕಿತ್ಸೆಗಳನ್ನು ನೀಡಿದರೆ ಜನರೇಕೆ ಖಾಸಗಿ ನರ್ಸಿಂಗ್ ಹೋಂಗಳಿಗೆ ಹೋಗುತ್ತಾರೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry