3

ರಾಷ್ಟ್ರೀಯ ಪಕ್ಷಗಳು ಮತ್ತು ಸವಾಲುಗಳು

ಡಾ. ಸಂದೀಪ್‌ ಶಾಸ್ತ್ರಿ
Published:
Updated:
ರಾಷ್ಟ್ರೀಯ ಪಕ್ಷಗಳು ಮತ್ತು ಸವಾಲುಗಳು

ನಮ್ಮ ಭಾರತ ದೇಶದಲ್ಲಿ ಚುನಾವಣೆಗಳು ಹಬ್ಬಗಳಿದ್ದಂತೆ; ಒಂದು ಹಬ್ಬ ಮುಗಿಯುತ್ತಿದ್ದಂತೆ ಮತ್ತೊಂದು ಹಬ್ಬ ಬರುವ ರೀತಿಯಲ್ಲೇ ಒಂದು ಚುನಾವಣೆ ಮುಗಿಯುತ್ತಿದ್ದಂತೆ ಮತ್ತೊಂದು ಚುನಾವಣೆ ಬರುತ್ತದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ಚುನಾವಣೆಯ ನಿರೀಕ್ಷೆ ಹಾಗೂ ಸಡಗರ ಇನ್ನೂ ಹಸಿರಾಗಿರುವಾಗಲೇ, ಮುಂದಿನ ಬೇಸಿಗೆಯಲ್ಲಿ ನಡೆಯಬೇಕಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಇದೀಗ ಮಹತ್ವ ಪಡೆದಿದೆ ಹಾಗೂ ಗಮನ ಸೆಳೆದಿದೆ.

ಗುಜರಾತ್ ಚುನಾವಣೆಯೊಂದಿಗೆ 2017ರ ಚುನಾವಣಾ ಋತು ಮುಕ್ತಾಯಗೊಂಡಿದ್ದರೆ, ಕರ್ನಾಟಕ ಚುನಾವಣೆಯು 2018ರ ಮೊದಲ ಪ್ರಮುಖ ಚುನಾವಣೆಯಾಗಿದೆ. ಈ ವಿಧಾನಸಭಾ ಚುನಾವಣೆಯು ಮುಂದಿನ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶ, ಛತ್ತೀಸಗಡ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳ ಪ್ರಚಾರಾಂದೋಲನಕ್ಕೆ ಭೂಮಿಕೆ ಸಿದ್ಧಪಡಿಸಲಿದೆ. ಅಷ್ಟೇ ಅಲ್ಲ, 2018ರ ಈ ಚುನಾವಣೆಗಳು 2019ರ ಲೋಕಸಭಾ ಚುನಾವಣೆ ಕಾರ್ಯತಂತ್ರದ ಮೇಲೆ ಸ್ಪಷ್ಟ ಪ್ರಭಾವವನ್ನೂ ಬೀರಲಿವೆ.

ಕರ್ನಾಟಕ ಚುನಾವಣೆಯು ರಾಷ್ಟ್ರೀಯವಾಗಿ ಗಮನ ಸೆಳೆಯಲು ಕಾರಣಗಳೇನು? ಮೊದಲನೆಯದಾಗಿ, ಬಿಜೆಪಿ ಬಯಸುವಂತೆ ಎನ್‍ಡಿಎ ಅಧಿಕಾರ ಸ್ಥಾಪನೆಯ ಗುರಿ ಹೊಂದಿರುವ ದೊಡ್ಡ ರಾಜ್ಯ ಇದಾಗಿದೆ.

ಈಶಾನ್ಯ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಕರ್ನಾಟಕಕ್ಕಿಂತ ಮುಂಚೆಯೇ ಚುನಾವಣೆಗಳು ನಡೆಯಲಿವೆಯಾದರೂ ಕರ್ನಾಟಕದಮೇಲೆ ಹೆಚ್ಚಿನ ಗಮನ ಕೇಂದ್ರೀಕೃತವಾಗಿದೆ. ಎಡಪಂಥೀಯರ ಭದ್ರಕೋಟೆಯಾಗಿಯೇ ಉಳಿದಿದೆ ತ್ರಿಪುರಾ. ನಾಗಾಲ್ಯಾಂಡ್‌ನಲ್ಲಿ ಎನ್‍ಡಿಎ ಮಿತ್ರಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ಮೇಘಾಲಯವು ಕಾಂಗ್ರೆಸ್ ಆಡಳಿತದಲ್ಲಿದೆ. ಬಿಜೆಪಿಯು ಪ್ರಧಾನಮಂತ್ರಿಯವರ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಮೇಘಾಲಯದಲ್ಲಿ ಈಗಾಗಲೇ ಪ್ರಚಾರ ಅಭಿಯಾನ ಆರಂಭಿಸಿದೆ. ಈ ನಡುವೆ ಹಲವಾರು ಕಾರಣಗಳಿಗಾಗಿ ಎರಡೂ ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕದ ಚುನಾವಣೆ ಮುಖ್ಯವಾದುದಾಗಿದೆ. ದಕ್ಷಿಣ ಭಾರತದಲ್ಲಿ ತನ್ನ ಪ್ರವೇಶಕ್ಕೆ ರಹದಾರಿ ಕಲ್ಪಿಸಿದ್ದ ಕರ್ನಾಟಕದಲ್ಲಿ (2008ರ ಗೆಲುವಿನ ಮೂಲಕ) ಮತ್ತೊಮ್ಮೆ ಗೆಲುವು ಸಾಧಿಸಿ ಈ ಭಾಗದಲ್ಲಿ ತನ್ನ ಹೆಜ್ಜೆಯನ್ನು ಸದೃಢಗೊಳಿಸುವುದು ಬಿಜೆಪಿಗೆ ಅತ್ಯಂತ ಮಹತ್ವದ ವಿಷಯವಾಗಿದೆ.

ಆಂಧ್ರಪ್ರದೇಶದಲ್ಲಿ ಎನ್‍ಡಿಎ ಮೈತ್ರಿಕೂಟ ಅಧಿಕಾರದಲ್ಲಿದೆಯಾದರೂ ಇಲ್ಲಿ ಬಿಜೆಪಿ ‘ಕಿರಿಯ ಸಹೋದರ’ನ ಸ್ಥಾನದಲ್ಲೇ ಇದೆ (ಚಂದ್ರಬಾಬು ನಾಯ್ಡು ಅವರು 2014ರ ಚುನಾವಣಾ ಪ್ರಚಾರದ ವೇಳೆ, ಆಂಧ್ರಪ್ರದೇಶದಲ್ಲಿ ‘ನಮೋ’ ಎಂದರೆ ನರೇಂದ್ರ ಮೋದಿ ಎಂದರ್ಥವಲ್ಲ; ನಾಯ್ಡು- ಮೋದಿ ಎಂಬುದು ಅದರ ಅಂತರಾರ್ಥ ಎಂದಿದ್ದು ಇದಕ್ಕೆ ನಿದರ್ಶನ). ಹೀಗಾಗಿ ಬಿಜೆಪಿಗೆ ಕರ್ನಾಟಕದ ಚುನಾವಣೆ ಮಹತ್ವದ್ದಾಗಿದ್ದು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಅಧಿಕಾರ ಉಳಿಸಿಕೊಳ್ಳುವುದಕ್ಕೂ ಇದು ಪೂರಕ ಎಂಬುದು ಅದರ ಎಣಿಕೆ.

ಇನ್ನು ಕಾಂಗ್ರೆಸ್, 2014ರ ಲೋಕಸಭಾ ಚುನಾವಣಾ ಸೋಲಿನ ನಂತರ ತಾನು ಆಡಳಿತ ನಡೆಸುತ್ತಿದ್ದ ಯಾವ ರಾಜ್ಯದಲ್ಲೂ ಪುನಃ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಈ ಸೋಲಿನ ಸರಪಳಿ ತುಂಡರಿಸಲು ಕರ್ನಾಟಕದ ಚುನಾವಣೆ ಅದಕ್ಕೊಂದು ಅವಕಾಶವಾಗಿದೆ. ಒಂದೊಮ್ಮೆ ಕಾಂಗ್ರೆಸ್ ಈ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡರೆ, ಪಂಜಾಬ್ ಮಾತ್ರವೇ ಆ ಪಕ್ಷ ಅಧಿಕಾರದಲ್ಲಿರುವ ದೊಡ್ಡ ರಾಜ್ಯವಾಗಲಿದೆ. ಜೊತೆಗೆ ಬಿಜೆಪಿಯ ‘ಕಾಂಗ್ರೆಸ್‌ಮುಕ್ತ ಭಾರತ’ ಘೋಷಣೆಯು ಆ ಪಕ್ಷವನ್ನು ಏನಿಲ್ಲವೆಂದರೂ ಅಧಿಕಾರದಿಂದಲಾದರೂ ಮುಕ್ತಗೊಳಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಗುಜಾರಾತ್‍ನಲ್ಲಿ 22 ವರ್ಷಗಳ ಅಧಿಕಾರದ ನಂತರ ಪುನಃ ವಿಜಯ ಸಾಧಿಸಿದ್ದರಿಂದ ಬಿಜೆಪಿ ಹೇಗೆ ಭಾರಿ ರಾಜಕೀಯ ಲಾಭಗಳನ್ನು ಗಳಿಸಿಕೊಂಡಿದೆಯೋ ಹಾಗೆಯೇ ಕರ್ನಾಟಕದಲ್ಲಿನ ಜಯವು ಕಾಂಗ್ರೆಸ್‍ನ ಸ್ಥೈರ್ಯವನ್ನು ಹೆಚ್ಚಿಸಲಿದೆ. ಜತೆಗೆ, ಗುಜರಾತ್‍ನಲ್ಲಿ ಕಾಂಗ್ರೆಸ್ ಸ್ಥಾನ ಗಳಿಕೆ ಜಾಸ್ತಿಯಾಗಿರುವುದು ಪಕ್ಷವು ಪುನಶ್ಚೇತನದ ಜಾಡಿಗೆ ಹೊರಳಿರುವುದರ ಸೂಚಕ ಎಂದು ಅದರ ಬೆಂಬಲಿಗರು ಹೇಳಿಕೊಳ್ಳಲು ಇಂಬು ನೀಡಿದೆ. ಇದೇ ವೇಳೆ, ಕರ್ನಾಟಕದಲ್ಲಿ ಅದು ವಿಜಯಮಾಲೆ ಕೊರಳಿಗೇರಿಸಿಕೊಂಡಿದ್ದೇ ಆದರೆ ಈ ವಿಶ್ಲೇಷಣೆಗೆ ದೃಢಮುದ್ರೆ ಒತ್ತಿದಂತಾಗುತ್ತದೆ; ಪಕ್ಷದ ಹೊಸ ಅಧ್ಯಕ್ಷರ ಕಿರೀಟಕ್ಕೆ ಗರಿ ದೊರಕಿದಂತಾಗುತ್ತದೆ.

ಕರ್ನಾಟಕ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಉದ್ದೇಶದಿಂದ ಈ ಎರಡೂ ಪಕ್ಷಗಳು ಸ್ಪಷ್ಟವಾಗಿ ವಿಭಿನ್ನ ಕಾರ್ಯತಂತ್ರಗಳನ್ನು ಅನುಸರಿಸುತ್ತಿವೆ. ಪ್ರಶಾಂತ್ ಝಾ ಅವರು ಹೇಳಿರುವ ಪ್ರಕಾರ, ಬಿಜೆಪಿ ತನ್ನ ಅಮಿತ್ ಷಾ ಮಾದರಿಯ ‘ಚುನಾವಣಾ ನಿರ್ವಹಣೆ ತಂತ್ರ’ ಮುಂದುವರಿಸಲಿದೆ. ಪ್ರಧಾನ ಕಚೇರಿಯು ಪ್ರತಿಯೊಂದು ಸಣ್ಣ ಸಣ್ಣ ವಿಷಯದ ಬಗ್ಗೆಯೂ ಗಮನ ನೀಡುವುದು; ಬಿಜೆಪಿ ಕಾರ್ಯಕರ್ತರ ಪಡೆಯನ್ನು ಕ್ರಿಯಾಶೀಲಗೊಳಿಸುವುದು; ಅತ್ಯಂತ ಮುಖ್ಯವಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವುದು- ಇದು ಅವರ ವೈಖರಿಯಾಗಿದೆ.

ಕರ್ನಾಟಕದ ಪರಿಸ್ಥಿತಿಯಲ್ಲಿ ಆ ಪಕ್ಷಕ್ಕೆ ಈ ತಂತ್ರಗಾರಿಕೆ ಬಿಟ್ಟು ಬೇರೆ ಯಾವ ಆಯ್ಕೆಯೂ ಇಲ್ಲ ಎಂಬುದೂ ದಿಟವೇ ಸರಿ. ಪಕ್ಷದ ರಾಜ್ಯ ನಾಯಕರಲ್ಲಿ ಪರಸ್ಪರ ಕಿತ್ತಾಟವಿರುವುದರಿಂದ ಹಾಗೂ 2008ರಿಂದ 2013ರ ವರೆಗೆ ಪಕ್ಷ ಹೋಳಾಗುತ್ತಾ ನಡೆದಿದ್ದರ ಬಗ್ಗೆ ಹಿನ್ನೋಟ ಬೀರಿದರೆ, ಸ್ಥಳೀಯ ನಾಯಕರಿಗೆ ಚುನಾವಣಾ ಸಾರಥ್ಯ ವಹಿಸುವುದು ಆ ಪಕ್ಷದ ಪಾಲಿಗೆ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಂತಾಗುವ ಸಾಧ್ಯತೆಯೇ ಹೆಚ್ಚು. ಪಕ್ಷವು ಒಂದು ವರ್ಷಕ್ಕೂ ಮುಂಚೆಯೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದರೂ ಪಕ್ಷದ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಯ ತೀರ್ಮಾನಗಳೇ ನಿರ್ಣಾಯಕ ಎಂಬುದು ಪ್ರತಿ ಹಂತದಲ್ಲೂ ದೃಢವಾಗುತ್ತಿವೆ. ಅಭ್ಯರ್ಥಿಗಳ ಆಯ್ಕೆ, ಚುನಾವಣಾ ತಂತ್ರಗಾರಿಕೆ, ತಾರಾ ಪ್ರಚಾರಕರ ನಿಯೋಜನೆ- ಹೀಗೆ ಪ್ರತಿಯೊಂದೂ ಅವರ ಆಣತಿಯಂತೆಯೇ ನಡೆಯಲಿವೆ.

ಇಂತಹ ಮಾದರಿಯು ಈ ಹಿಂದೆ ಪಕ್ಷಕ್ಕೆ ಲಾಭ ತಂದುಕೊಟ್ಟಿದೆಯಾದರೂ ಕರ್ನಾಟಕದಲ್ಲಿನ ಸವಾಲುಗಳೇ ಬೇರೆ ರೀತಿಯದ್ದಾಗಿವೆ. ಮೊದಲನೆಯದಾಗಿ, ಆ ಪಕ್ಷಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದ ಸಂಘಟನೆಯಲ್ಲಿ ಬಿರುಕುಗಳು ಕಾಣಿಸುತ್ತಿರುವುದು ಹಾಗೂ ಎರಡನೆಯದಾಗಿ, ಬಿಜೆಪಿ ರಕ್ಷಣಾತ್ಮಕವಾಗುವಂತೆ ಕಾಂಗ್ರೆಸ್ ಚುನಾವಣಾ ಕಾರ್ಯಸೂಚಿ ಸಿದ್ಧಪಡಿಸುತ್ತಿರುವುದು ಇದಕ್ಕೆ ಕಾರಣಗಳಾಗಿವೆ.

ಕಾಂಗ್ರೆಸ್ ಪಕ್ಷವು 1985ರ ನಂತರ ಯಾವ ರಾಜ್ಯದಲ್ಲೂ ಸ್ವತಂತ್ರವಾಗಿ ಎರಡನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಪರಿಪಾಟಕ್ಕೆ ಅದು ಹೇಗೆ ತಡೆಯೊಡ್ಡುತ್ತದೆ? ಪಂಜಾಬ್‍ನಲ್ಲಿ ವಿನೂತನ ತಂತ್ರಗಾರಿಕೆ ಅನುಸರಿಸಿದ ಆ ಪಕ್ಷ ಈಗ ಇಲ್ಲಿ ಏನು ಮಾಡಲಿದೆ ಎಂಬುದು ಕುತೂಹಲಕಾರಿ. ಬಿಜೆಪಿಯ ಕೇಂದ್ರೀಕೃತ ಪ್ರಚಾರಾಂದೋಲನಕ್ಕೆ ಪ್ರತಿಯಾಗಿ ಆ ಪಕ್ಷವು ಸ್ಥಳೀಯ ನಾಯಕತ್ವ ಸಬಲಗೊಳಿಸಲು ಆದ್ಯತೆ ನೀಡಿದೆ. ಚುನಾವಣೆಗೆ ಬಲು ಮುಂಚೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲೇ ಮತದಾರರ ಮುಂದಕ್ಕೆ ಹೋಗುವುದಾಗಿ ಪ್ರಕಟಿಸಿದೆ. ಇದು ಮೇಲ್ಮಟ್ಟದಲ್ಲಿಯಾದರೂ ಸಿದ್ದರಾಮಯ್ಯ ನೇತೃತ್ವದಲ್ಲಿ ಆ ಪಕ್ಷದ ಸಂಘಟನೆಗೆ ಪೂರಕವಾಗಿರುವಂತೆ ಗೋಚರಿಸುತ್ತಿದೆ. ಆಗೊಮ್ಮೆ ಈಗೊಮ್ಮೆ ಪಕ್ಷದ ಅಧ್ಯಕ್ಷರ ಭಿನ್ನಧ್ವನಿ ಕೇಳಿಬರುತ್ತಿರುವುದರ ಮಧ್ಯೆಯೂ ಮುಖಂಡರು ಮತ್ತು ಕಾರ್ಯಕರ್ತರು ಮುಖ್ಯಮಂತ್ರಿಯ ಬೆನ್ನಿಗಿದ್ದಾರೆ ಎಂಬುದು ಕಂಡುಬರುತ್ತಿದೆ.

ತಮ್ಮ ನಾಯಕತ್ವವನ್ನು ಘೋಷಿಸಿದ ಕ್ಷಣದಿಂದಲೇ ಮುಖ್ಯಮಂತ್ರಿ ಸ್ಥಳೀಯ ವಿಷಯಗಳಿಗೆ ಒತ್ತು ನೀಡಿ ಪಕ್ಷದ ಪ್ರಚಾರದಲ್ಲಿ ಚಲನಶೀಲತೆ ಮೂಡಿಸಿದ್ದಾರೆ. ನಾಡಧ್ವಜದ ಅಗತ್ಯ, ಸ್ಥಳೀಯ ಅಸ್ಮಿತೆ ಮತ್ತು ಕನ್ನಡ ಭಾಷೆಗೆ ಮನ್ನಣೆ, ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನದ ವಿಷಯ- ಇವೆಲ್ಲವೂ ಬಿಜೆಪಿಗೆ ಮುಖಾಮುಖಿಯಾಗಲು ಇರಿಸಿರುವ ನಡೆಗಳೇ ಆಗಿವೆ. ಕೇಂದ್ರ ನಾಯಕತ್ವದ ಅಡಿಯಲ್ಲಿ ಬಿಜೆಪಿ ಪ್ರಚಾರವು ರಾಷ್ಟ್ರೀಯತೆ ಮತ್ತು ದೇಶಪ್ರೇಮದ ವಿಷಯಗಳನ್ನು ಮುಖ್ಯವಾಗಿಸಿಕೊಂಡಿದ್ದರೆ ಕಾಂಗ್ರೆಸ್ ಪಕ್ಷವು ಬೇರೆಯದೇ ವಿಷಯಗಳ ಬಗ್ಗೆ ಗಮನ ಸೆಳೆಯುವಂತೆ ಮಾಡುತ್ತಿದೆ. ಮುಖ್ಯವಾಗಿ, ಲಿಂಗಾಯತ ಸಮುದಾಯವು ಹೆಚ್ಚಾಗಿ ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದಿರುವುದು ಗೊತ್ತಿರುವಂಥದ್ದೇ. ಹೀಗಾಗಿ ಆ ಸಮುದಾಯಕ್ಕೆ ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡುವ ಪ್ರಸ್ತಾವ ಆ ಸಮುದಾಯದ ಮತಗಳನ್ನು ಒಡೆಯುವ ಉದ್ದೇಶ ಹೊಂದಿರುವುದು ಸುಸ್ಪಷ್ಟ.

ಕಾಂಗ್ರೆಸ್ ಪಕ್ಷವು ಸ್ಥಳೀಯ ವಿಷಯಗಳನ್ನು ಹಾಗೂ ಸ್ಥಳೀಯ ನಾಯಕತ್ವವನ್ನು ಮುಂದಿಟ್ಟುಕೊಂಡು ರಾಜ್ಯದ ವಿಧಾನಸಭಾ ಚುನಾವಣೆಯೊಂದನ್ನು ಎದುರಿಸಲು ಸಜ್ಜಾಗುತ್ತಿರುವುದು ಗಮನಿಸಲೇಬೇಕಾದ ಮತ್ತೊಂದು ಸಂಗತಿಯಾಗಿದೆ. ಕಾಂಗ್ರೆಸ್ ಪಕ್ಷವು ಈ ಚುನಾವಣೆಯನ್ನು ‘ರಾಹುಲ್ ತಂಡ’ ವರ್ಸಸ್ ‘ಬ್ರ್ಯಾಂಡ್ ಮೋದಿ’ ಹೋರಾಟವಾಗಿಸಲು ಅಣಿಯಾಗುತ್ತಿದೆ.

ಈ ಎರಡು ಪಕ್ಷಗಳಿಗೆ ಹೋಲಿಸಿದರೆ ಜೆಡಿಎಸ್ ಹಿಂದೆಯೇ ಉಳಿದಿದ್ದು ‘ಕಿಂಗ್ ಮೇಕರ್’ ಆಗುವುದರ ಮೇಲೆ ಕಣ್ಣು ನೆಟ್ಟಿದೆ. ಎರಡು ಪಕ್ಷಗಳ ನಡುವಿನ ನೇರಾನೇರ ಹೋರಾಟದ ಅಖಾಡದಂತೆ ಕಾಣುತ್ತಿರುವ ರಾಜ್ಯದಲ್ಲಿ ಅದನ್ನೇನಾದರೂ ಏರುಪೇರು ಮಾಡಲು ಸಾಧ್ಯವಾದೀತೆ ಎಂಬುದು ಆಸಕ್ತಿಕರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry