ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯದಿಂದ ವಿಮುಖರಾಗಿಸುತ್ತಿರುವ ತಂತ್ರಜ್ಞಾನ’

Last Updated 26 ಡಿಸೆಂಬರ್ 2017, 5:36 IST
ಅಕ್ಷರ ಗಾತ್ರ

ಮಳವಳ್ಳಿ: ‘ತಂತ್ರಜ್ಞಾನ ಜನರನ್ನು ಬುದ್ಧಿವಂತರಾಗಿಸುತ್ತಿದೆ; ಉತ್ತಮ ಮನುಷ್ಯರಾಗಿಸುತ್ತಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಭಾನುವಾರ ಅಭಿಪ್ರಾಯಪಟ್ಟರು

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ15ನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ತಂತ್ರಜ್ಞಾನದಿಂದ ಜನ ದುಡಿಮೆಗೆ ಅರ್ಹರಾಗುತ್ತಿದ್ದಾರೆ. ಸಾಹಿತ್ಯ, ಸಂಸ್ಕೃತಿ, ಪರಂಪರೆ ಉಳಿಸಲು ನೆರವಾಗುತ್ತಿಲ್ಲ. ನೆಲದ ಭಾಷೆ ಉಳಿಸಲು ಓದುವಿಕೆ ಅಗತ್ಯ’ ಎಂದು ಹೇಳಿದರು.

‘ಕನ್ನಡ ಭಾಷೆಯಲ್ಲಿ ವಚನ, ತತ್ವಪದ, ದಾಸರಪದ ಸೇರಿ ಸಾರಸ್ವತ ಸಂಪನ್ಮೂಲವಿದೆ. ಪೋಷಕರು ಮಕ್ಕಳಿಗೆ ಈಗಿನಿಂದಲೇ ಓದುವ ಹವ್ಯಾಸ ಬೆಳೆಸಬೇಕು. ಸಾಹಿತ್ಯದ ಸಂಪರ್ಕ ಕಲ್ಪಿಸಬೇಕು’ ಎಂದು ಸಲಹೆ ಮಾಡಿದರು.

‘ಕೆಲ ರಾಜಕಾರಣಿಗಳು ಮಾತೃನಿಂದನೆ ಕುರಿತು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಅಂಥವರನ್ನು ಸ್ವಚ್ಛಗೊಳಿಸಬೇಕಿದೆ. ಚುನಾವಣೆಗಳು ಚರ್ಚೆಗಳಾಗಿ ನಡೆಯಬೇಕು.ಆದರೆ, ಈಗ ಪರಸ್ಪರ ದ್ವೇಷ ಬಿತ್ತುವ ಕೆಲಸ ಆಗುತ್ತಿದೆ. ರಾಜಕಾರಣಿಗಳಿಗೂ ಉತ್ತಮ ತರಬೇತಿಯ ನೀಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಎಚ್.ಡಿ.ಚೌಡಯ್ಯ ಅವರು ಸಮ್ಮೇಳಾನಧ್ಯಕ್ಷ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅವರನ್ನು ಸನ್ಮಾನಿಸಿದರು. ‘ಡಾ. ಹೆಬ್ರಿ ಅವರು ನಮ್ಮ ಮಂಡ್ಯದ ಆಸ್ತಿಯಾಗಿದ್ದಾರೆ’ ಎಂದರು.

ಐಪಿಎಸ್ ಅಧಿಕಾರಿ ಎಂ.ನಂಜುಂಡಸ್ವಾಮಿ ಮಳವಳ್ಳಿಯ, ‘ಸ್ಥಳೀಯ ಭಾಷೆಗಳ ಕನಿಷ್ಠ ನಾಲ್ಕು ಪಾಠಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು. ಇಲ್ಲದಿದ್ದರೆ ಸ್ಥಳೀಯ ಭಾಷೆ ಕಣ್ಮರಯಾಗುತ್ತವೆ.’ ಎಂದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದು, ‘ಸರ್ಕಾರಿ ಶಾಲೆಗಳ ಉಳಿವಿಗೆ ಸಾರ್ವಜನಿಕರಿಂದಲೇ ವಂತಿಗೆ ಸಂಗ್ರಹಿಸಿ ಮೂಲಸವಲತ್ತು, ಉತ್ತಮ ಶಿಕ್ಷಣ ಕಲ್ಪಿಸುವ ಕುರಿತು ಚರ್ಚೆ ನಡೆದಿದೆ’ ಎಂದರು.

‘ಈ ನಿಟ್ಟಿನಲ್ಲಿ ತಾಲ್ಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ನಡೆಯುತ್ತಿರುವ ಸರ್ಕಾರಿ ಶಾಲೆಗೆ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗಿದೆ’ ಎಂದು ತಿಳಿಸಿದರು.
ಸಾಹಿತಿ ಶಂಕರ ದೇವನೂರು, ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ ಚಾಮಲಾಪುರ ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷ ಡಾ.ಪ್ರದೀಪ್ ಕುಮಾರ್ ಹೆಬ್ರಿ ಅವರು, ‘ವಿಜಯಪುರದಲ್ಲಿ ನಡೆದ ಘಟನೆ ಅಮಾನವೀಯ. ಇಂಥದು ಮರುಕಳಿಸದಂತೆ ಎಚ್ಚರವಹಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT