ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು –ಬೆಳಗಾವಿ ರಾಜ್ಯ ಹೆದ್ದಾರಿ ಮೇಲ್ದರ್ಜೆಗೆ

Last Updated 26 ಡಿಸೆಂಬರ್ 2017, 5:48 IST
ಅಕ್ಷರ ಗಾತ್ರ

ಕವಿತಾಳ: ಒಂದು ವಾರದ ಅವಧಿಯಲ್ಲಿ ರಾಯಚೂರು– ಬೆಳಗಾವಿ ರಾಜ್ಯ ಹೆದ್ದಾರಿಯ ಎರಡನೇ ಸುತ್ತಿನ ಸರ್ವೆ ನಡೆಯುತ್ತಿದ್ದು, ರಸ್ತೆ ಬದಿಯ ಕಟ್ಟಡಗಳ ಮಾಲೀಕರಲ್ಲಿ ಆತಂಕ ಎದುರಾಗಿದೆ.

ಬೆಳಗಾವಿ ಸಮೀಪದ ರಾಷ್ಟ್ರೀಯ ಹೆದ್ದಾರಿ 48 (4) ಮತ್ತು ರಾಯಚೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 167ಗೆ ಸಂಪರ್ಕ ಕಲ್ಪಿಸುವ ರಾಯಚೂರು– ಬಾಚಿ ರಾಜ್ಯ ಹೆದ್ದಾರಿಯನ್ನು ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ತಾಂತ್ರಿಕ ಅರ್ಹತಾ ಯೋಜನಾ ವರದಿ ನೀಡಲು ಬೆಂಗಳೂರಿನ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ.

ಅಂದಾಜು 350 ಕಿ.ಮೀ. ರಸ್ತೆಯಲ್ಲಿ ಸಿರವಾರ, ಲಿಂಗಸುಗೂರು, ಮುದಗಲ್, ಹುನಗುಂದ, ಅಮೀನಗಡ, ಲೋಕಾಪುರ ಮತ್ತು ಯರಗಟ್ಟಿ ಪಟ್ಟಣಗಳಿಗೆ ಬೈ ಪಾಸ್‌ ಸರ್ವೆ ನಡೆಸಲು ಸೂಚಿಸಲಾಗಿದೆ. ರಸ್ತೆಯನ್ನು ನೇರವಾಗಿಸುವ ನಿಟ್ಟಿನಲ್ಲಿ ಎಡ, ಬಲ ಬದಿಗಳಲ್ಲಿ ವಿಸ್ತರಣೆ ಮತ್ತು ಸಮತಟ್ಟುಗೊಳಿಸುವುದು ಸೇರಿದಂತೆ ರಸ್ತೆ ಮಧ್ಯದಿಂದ ಎರಡೂ ಬದಿಯಲ್ಲಿ 22.5 ಮೀಟರ್‌ ಅಂತರದ ಕಟ್ಟಡಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಚರಂಡಿ, ಸೇತುವೆ, ಪಾದಾಚಾರಿ ರಸ್ತೆ ಸೇರಿದಂತೆ ತಾಂತ್ರಿಕ ಮಾಹಿತಿ ಸಂಗ್ರಹಿಸಲು ಟೆಂಡರ್‌ ನಿಯಮದಲ್ಲಿ ಉಲ್ಲೇಖಿಸಲಾಗಿದೆ.

‘2016ರಲ್ಲಿ ಮಾಡಿಕೊಂಡ ಒಪ್ಪಂದದಂತೆ ನಡೆಯುತ್ತಿರುವ ಸಮೀಕ್ಷೆ ರದ್ದಾಗುವ ಸಾಧ್ಯತೆಗಳಿದ್ದು, ಎಕಾನಾಮಿಕಲ್‌ ಕಾರಿಡಾರ್‌ ಆಗಿ ಮೇಲ್ದರ್ಜೇಗೆ ಏರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರದ ಅನ್ವಯ 120 ಕಿ.ಮೀ. ವೇಗದ ಹೊಸ ಸಮೀಕ್ಷೆಗೆ ಟ್ರೈ ಪಾರ್ಟಿ ಅಗ್ರಿಮೆಂಟ್‌ ಮಾಡಿಕೊಳ್ಳುವ ಸಾಧ್ಯತೆ ಇದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಜಯಪುರ ವಿಭಾಗದ ತಾಂತ್ರಿಕ ಸಹಾಯಕ ಡಿ.ಜಿ.ಮಠ ತಿಳಿಸಿದ್ದಾರೆ.

‘8 ವರ್ಷಗಳ ಅವಧಿಯಲ್ಲಿ ಸಿರವಾರ, ಕವಿತಾಳ ಸೇರಿದಂತೆ ವಿವಿಧೆಡೆ ರಸ್ತೆ ವಿಸ್ತರಣೆಗಾಗಿ ಕಟ್ಟಡ ತೆರವುಗೊಳಿಸಲಾಗಿದ್ದು, ಕೇವಲ ಚರಂಡಿ ನಿರ್ಮಾಣಕ್ಕಾಗಿ ₹5 ಕೋಟಿಗೂ ಅಧಿಕ ಹಣವನ್ನು ವ್ಯಯಿಸಲಾಗಿದೆ. ವಿದ್ಯುತ್‌ ಕಂಬಗಳ ಸ್ಥಳಾಂತರ ಮತ್ತು ರಸ್ತೆ ದುರಸ್ತಿಯನ್ನು ಕೈಗೊಂಡಿಲ್ಲ. ರಸ್ತೆ ವಿಸ್ತರಣೆ ವಿಷಯದಲ್ಲಿ ಪದೇ ಪದೇ ಬದಲಿಸುವ ನಿಯಮಗಳಿಂದ ಕಟ್ಟಡ ಮಾಲೀಕರಿಗೆ ಆತಂಕವಾಗಿದೆ. ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಬೇಕು’ ಎಂದು ವ್ಯಾಪಾರಿ ಇಲ್ಲೂರು ಗುಂಡಯ್ಯ ಶೆಟ್ಟಿ ಮನವಿ ಮಾಡುತ್ತಾರೆ.

‘ಪಟ್ಟಣವನ್ನು ಬೈಪಾಸ್‌ ವ್ಯವಸ್ಥೆಯಿಂದ ಹೊರತು ಪಡಿಸಿರುವುದು ಸರಿಯಲ್ಲ. ಈ ಕುರಿತು ಜನಪ್ರತಿನಿಧಿಗಳು ಗಮನ ಹರಿಸಬೇಕು, ರಸ್ತೆ ಬದಿ ಕಟ್ಟಡಗಳ ತೆರವು ಸಂಬಂಧವೂ ಸಮರ್ಪಕ ಮಾಹಿತಿ ನೀಡಬೇಕು’ ಎಂದು ಕಟ್ಟಡಗಳ ಮಾಲೀಕರು ಆಗ್ರಹಿಸುತ್ತಾರೆ.

ಎಕಾನಾಮಿಕಲ್‌ ಕಾರಿಡಾರ್‌: ‘ಎಕಾನಾಮಿಕಲ್‌ ಕಾರಿಡಾರ್‌ ನಿರ್ಮಾಣವಾದಲ್ಲಿ ವಸತಿ ಪ್ರದೇಶಗಳಲ್ಲಿ ರಸ್ತೆ ಎರಡು ಬದಿ 75 ಅಡಿ ಮತ್ತು ಉಳಿದಂತೆ 42.5 ಮೀಟರ್‌ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳವ ಸಾಧ್ಯತೆ ಇದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT