ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋಲಿನ ರುಚಿ ತೋರಲು ಜನರು ಸಿದ್ಧ’

Last Updated 26 ಡಿಸೆಂಬರ್ 2017, 5:56 IST
ಅಕ್ಷರ ಗಾತ್ರ

ಚನ್ನಪಟ್ಟಣ: ಕಾಂಗ್ರೆಸ್ ಪಕ್ಷದ ಅಧಿಕಾರ ಉಂಡು ಹೋಗಿರುವ ಯೋಗೇಶ್ವರ್ ಮೇಲೆ ತಾಲ್ಲೂಕಿನ ಜನರ ಆಕ್ರೋಶವಿದೆ. ಅವರಿಗೆ ಈ ಬಾರಿ ಜನರೇ ಸೋಲಿನ ರುಚಿ ತೋರಿಸಲು ಕಾತರರಾಗಿದ್ದಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಟೀಕಿಸಿದರು.

ಪಟ್ಟಣದ ಬಾಲಕರ ಕಾಲೇಜು ಮೈದಾನದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕನಕೋತ್ಸವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

‘ಯೋಗೇಶ್ವರ್ ಜೊತೆಯಲ್ಲಿರುವವರೇ ಅವರಿಗೆ ಪಾಠ ಕಲಿಸುತ್ತಾರೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರವನ್ನು ಕಾಂಗ್ರೆಸ್ ವಶ ಮಾಡಿಕೊಳ್ಳುವುದಷ್ಟೇ ನಮ್ಮ ಗುರಿಯಾಗಿದೆ. ಚನ್ನಪಟ್ಟಣ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಇಲ್ಲಿನ ಜನರ ಋಣ ತಮ್ಮ ಮೇಲಿದೆ. ಇಲ್ಲಿ ಪಕ್ಷವನ್ನು ಗೆಲ್ಲಿಸಿ ಕ್ಷೇತ್ರವನ್ನು ಸರ್ವತೋಮುಖ ಅಭಿವೃದ್ಧಿ ಮಾಡುವುದೇ ಗುರಿ’ ಎಂದರು.

ಕಾಂಗ್ರೆಸ್ ನ ಇಪ್ಪತ್ತಕ್ಕೂ ಹೆಚ್ಚು ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಯೋಗೇಶ್ವರ್ ಸುಳ್ಳು ಹಬ್ಬಿಸುತ್ತಿದ್ದಾರೆ. ಅವರು ಅಧಿಕಾರಕ್ಕಾಗಿ ಹೋಗಿದ್ದಾರೆ ಎಂದರೆ ಎಲ್ಲರೂ ಹೋಗುವುದಿಲ್ಲ. ಅವರು ತಮ್ಮ ಜೊತೆ ಒಬ್ಬ ಶಾಸಕರನ್ನು ಕರೆದುಕೊಂಡು ಹೋಗಲಿ ಎಂದು ಸವಾಲು ಹಾಕಿದರು.

ಅನ್ಯ ಪಕ್ಷಕ್ಕೆ ಹೋಗಿರುವ ಯೋಗೇಶ್ವರ್ ಗೆ ಆತ್ಮಸಾಕ್ಷಿ ಇದ್ದರೆ ತಮ್ಮ ಸಹೋದರನಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ನಂತರ ಬೇರೆ ಪಕ್ಷದಿಂದ ಸ್ಪರ್ಧಿಸಿ ಗೆಲ್ಲಲಿ, ನಂತರ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲಿ ಎಂದು ಸವಾಲು ಹಾಕಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಜಿ.ಪಂ.ಸದಸ್ಯ ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರೇಗೌಡ, ಶಿವಮಾದು, ಮುಖಂಡರಾದ ನಿಜಾಮ್ ಫೌಜ್ ದಾರ್, ಚಂದ್ರಸಾಗರ್, ನಾಗೇಂದ್ರ, ಪಿ.ಡಿ.ರಾಜು, ಮಲ್ಲೇಶ್, ಹನುಮಂತಯ್ಯ, ವಕೀಲ ಟಿ.ವಿ.ಗಿರೀಶ್, ವಸಂತಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT