ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರ್‌ ಬಂಗಾರಪ್ಪರಿಂದ ಪಶ್ಚಾತ್ತಾಪ ಯಾತ್ರೆ

Last Updated 26 ಡಿಸೆಂಬರ್ 2017, 6:03 IST
ಅಕ್ಷರ ಗಾತ್ರ

ಸೊರಬ: ‘ಬಿಜೆಪಿಯನ್ನು ಜಗಳಗಂಟಿ ಪಕ್ಷ ಎಂದು ಈ ಹಿಂದೆ ಜರಿದ ಕುಮಾರ್ ಬಂಗಾರಪ್ಪ ಅವರು ಈಗ ಬಿಜೆಪಿ ಸೇರಿ ಪರಿವರ್ತನಾ ಯಾತ್ರೆ ಮಾಡಲು ಹೊರಟಿರುವುದು ಪಶ್ಚಾತ್ತಾಪದ ಯಾತ್ರೆಯಾಗಿದೆ’ ಎಂದು ಶಾಸಕ ಮಧು ಬಂಗಾರಪ್ಪ ಲೇವಡಿ ಮಾಡಿದರು.

ತಾಲ್ಲೂಕಿನ ಬಿಳವಾಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆದವಟ್ಟಿ, ಗೇರುಕೊಪ್ಪ, ಬಿಳವಾಣಿ ಗ್ರಾಮಗಳ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯ ಗುದ್ದಲಿಪೂಜೆ ಹಾಗೂ ಶಿವಪುರ ಗ್ರಾಮದ ಅಂಗನವಾಡಿ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಸಂವಿಧಾನದ ವಿರುದ್ಧವಾಗಿ ನಡೆಯುತ್ತಿದ್ದಾರೆ. ಸಭೆ–ಸಮಾರಂಭಗಳಲ್ಲಿ ದೇಶದಲ್ಲಿ ಗಲಭೆ ಉಂಟು ಮಾಡುವಂತಹ ಹೇಳಿಕೆಗಳನ್ನು ನೀಡುವ ಮೂಲಕ ಪ್ರಚೋದನೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಘನತೆ, ಗೌರವ ಬಿಟ್ಟು ಬಿಜೆಪಿ ಸೇರಿರುವ ಕುಮಾರ್ ಬಂಗಾರಪ್ಪ ಅವರಿಗೆ ತಾಲ್ಲೂಕಿನ ಜನ ಈ ಬಾರಿಯೂ ಸೋಲಿನ ರುಚಿ ತೋರಿಸುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅನುದಾನ ಬಿಡುಗಡೆ ಆಧಾರದ ಮೇಲೆ ತಾಲ್ಲೂಕಿನ ಗಡಿಗ್ರಾಮಗಳ ಅಭಿವೃದ್ಧಿಗೆ ನಾನು ಹೆಚ್ಚು ಒತ್ತು ನೀಡಿದ್ದೇನೆ. ಕೆಲವು ಬಗರ್‌ಹುಕುಂ ಅರ್ಜಿಗಳು ಮಾತ್ರ ಬಾಕಿ ಉಳಿದಿವೆ. ಅವುಗಳನ್ನು ಕೂಡಲೇ ಇತ್ಯರ್ಥಗೊಳಿಸಲಾಗುವುದು’ ಎಂದರು.

‘ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಮಹದಾಯಿ ಯೋಜನೆ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಪರಿವರ್ತನಾ ಯಾತ್ರೆಗೆ ಜನರನ್ನು ಕರೆತರಲು ಬರುವ ವಾಹನಗಳಿಗೆ ಗ್ರಾಮಸ್ಥರು ನಿರ್ಬಂಧಿಸಬೇಕು’ ಎಂದು ಮಧು ಬಂಗಾರಪ್ಪ ಕರೆ ನೀಡಿದರು.

ಬಿಳವಾಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ ಕೆ.ವೈ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ತಾರಾ ಶಿವಾನಂದ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸುರೇಶ ಹಾವಣ್ಣನವರ್, ಸದಸ್ಯ ನಾಗರಾಜ ಚಂದ್ರಗುತ್ತಿ, ಮೀನಾಕ್ಷಮ್ಮ ನಿರಂಜನಮೂರ್ತಿ, ಎಪಿಎಂಸಿ ಸದಸ್ಯೆ ಸರಸ್ವತಿ ಪ್ರಶಾಂತ್, ಸುರೇಶ ಕೋಲ್ಗುಣಸಿ, ಪುಟ್ಟರಾಜಗೌಡ, ಎಚ್.ಗಣಪತಿ, ಮಾರುತಿ ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT