ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಸಂಸ್ಥೆಗೆ ನಿರ್ವಹಣೆ ಜವಾಬ್ದಾರಿ

Last Updated 26 ಡಿಸೆಂಬರ್ 2017, 6:16 IST
ಅಕ್ಷರ ಗಾತ್ರ

ಉಡುಪಿ: ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯಲ್ಲಿ ಉಡುಪಿ ನಗರಸಭೆ ನಗರದ ಬೀಡಿನಗುಡ್ಡೆಯಲ್ಲಿ ವಸತಿ ರಹಿತರ ಆಶ್ರಯತಾಣವನ್ನು ನಿರ್ಮಾಣ ಮಾಡಿ ಆರು ತಿಂಗಳು ಕಳೆದರೂ ಇನ್ನೂ ಬಳಕೆಯಾಗುತ್ತಿಲ್ಲ.

ವಲಸೆ ಕಾರ್ಮಿಕರು, ನಿರಾಶ್ರಿತರು ಹಾಗೂ ಕೂಲಿ ಕಾರ್ಮಿಕರಿಗೆ ರಾತ್ರಿ ವೇಳೆ ಆಶ್ರಯ ನೀಡುವ ಉದ್ದೇಶದಿಂದ ಸುಮಾರು ₹37.32 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪೀಠೋಪಕರಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ, ಕೇಂದ್ರವನ್ನು ನಿರ್ವಹಣೆ ಮಾಡಲು ಸಂಸ್ಥೆಯನ್ನು ಇನ್ನೂ ನಿಗದಿಪಡಿಸಿಲ್ಲ. ಭದ್ರತಾ ಸಿಬ್ಬಂದಿಯನ್ನೂ ಸಹ ನೇಮಿಸಬೇಕಿದೆ.

‘ಆಶ್ರಯ ತಾಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಈಗಾಗಲೇ ಇದೆ. ಬಿಸಿ ನೀರಿಗಾಗಿ ಸೋಲಾರ್ ಸಹ ಅಳವಡಿಸಲಾಗಿದೆ’ ಎನ್ನುತ್ತಾರೆ ನಗರಸಭೆಯ ಸಮುದಾಯ ಅಧಿಕಾರಿ ಎಸ್‌.ಎಸ್. ನಾರಾಯಣ್.

‘ಅಲ್ಲಿ ಉಳಿದುಕೊಳ್ಳುವವರು ಅಡುಗೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕಿದೆ. ಮುಖ್ಯವಾಗಿ ಕೇಂದ್ರವನ್ನು ನಿರ್ವಹಣೆ ಮಾಡಲು ಸಂಸ್ಥೆಯನ್ನು ನಿಗದಿಪಡಿಸಬೇಕಿದ್ದು, ಆ ಪ್ರಯತ್ನ ಮುಂದುವರಿದಿದೆ. ಕೆಲವೇ ದಿನಗಳಲ್ಲಿ ನಿರಾಶ್ರಿತರು ಆಶ್ರಯ ಪಡೆಯಲು ಎಲ್ಲ ಸೌಲಭ್ಯ ಮಾಡಿಕೊಡಲಾಗುವುದು’ ಎಂದು ಅವರು ಹೇಳುತ್ತಾರೆ.

ಒಟ್ಟು 48 ಜನರು ಉಳಿದುಕೊಳ್ಳಲು ಇಲ್ಲಿ ವ್ಯವಸ್ಥೆ ಇದೆ. ಮನೆ ಇಲ್ಲದ ಕಾರ್ಮಿಕರು, ನಿರ್ಗತಿಕರು ಬಂದು ಉಳಿಯಬಹುದು. ವಿಳಾಸ ದಾಖಲೆ ಅಥವಾ ಇನ್ಯಾವುದೇ ದಾಖಲೆ ಇದ್ದರೆ ತೋರಿಸಬಹುದು. ಇಲ್ಲದಿದ್ದರೂ ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತದೆ. ‌ರಾತ್ರಿ ಉಳಿದುಕೊಂಡವರು ಬೆಳಿಗ್ಗೆ ಎದ್ದು ಹೋಗಬೇಕಾಗುತ್ತದೆ. ಮತ್ತೆ ರಾತ್ರಿ ಬಂದು ಉಳಿಯಬಹುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ಅನಾರೋಗ್ಯ ಪೀಡಿತರು, ವೃದ್ಧರಿಗೆ ಆದ್ಯತೆ ನೀಡಲಾಗುತ್ತದೆ.

ರಾತ್ರಿ ವೇಳೆ ಉಡುಪಿಯನ್ನು ಒಂದು ಸುತ್ತು ಹಾಕಿದರೆ ಅಂಗಡಿ ಶಟರ್ ಎದುರು, ಪಾದಚಾರಿ ಮಾರ್ಗದಲ್ಲಿ ಜನರು ಮಲಗಿರುವ ದೃಶ್ಯ ಕಾಣಬಹುದು. ಮಳೆಗಾಲದಲ್ಲಿ ನೆಮ್ಮದಿಯಿಂದ ನಿದ್ರೆ ಮಾಡಲಾಗದೆ ಪರದಾಡುವುದು ಸಹ ಸಾಮಾನ್ಯ. ಆಶ್ರಯ ತಾಣ ಪ್ರಾರಂಭವಾದ ನಂತರ ಇವರೆಲ್ಲರೂ ನೆಮ್ಮದಿಯಿಂದ ನಿದ್ರೆ ಮಾಡಬಹುದಾಗಿದೆ.

ತಂಗುವವರಿಂದ ಸಾಂಕೇತಿಕವಾಗಿ ₹10 ಸಂಗ್ರಹಿಸಲು ಸಹ ಚಿಂತನೆ ಇದೆ. ಆದರೆ, ಅದಿನ್ನೂ ಅಂತಿಮವಾಗಿಲ್ಲ. ಸಂಪೂರ್ಣ ಉಚಿತ ಎಂದರೆ ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.

ಭದ್ರತೆ ಸಹ ಮುಖ್ಯ

8 ಗಂಟೆ ಅವಧಿಗೆ ಒಬ್ಬರಂತೆ 3 ಮಂದಿ ಮೇಲ್ವಿಚಾರಣಾ ಸಿಬ್ಬಂದಿ ಬೇಕಾಗುತ್ತಾರೆ. ರಕ್ಷಣೆ ದೃಷ್ಟಿಯಿಂದಲೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಗಸ್ತಿನ ವೇಳೆ ಈ ಕೇಂದ್ರಕ್ಕೂ ಭೇಟಿ ನೀಡುವಂತೆ ಪೊಲೀಸರಿಗೆ ಸಹ ಮನವಿ ಮಾಡಲಾಗುವುದು. ಈ ಆಶ್ರಯ ತಾಣ ದುರುಪಯೋಗ ಆಗದಂತೆ ಸಹ ಎಚ್ಚರಿಕೆ ವಹಿಸಲಾಗುವುದು ಎನ್ನುತ್ತಾರೆ ಸಮುದಾಯ ಅಧಿಕಾರಿ ನಾರಾಯಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT