ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರೂ ಆಧಾರ್ ಕಾರ್ಡ್ ಮಾಡಿಸಿ: ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

Last Updated 26 ಡಿಸೆಂಬರ್ 2017, 6:19 IST
ಅಕ್ಷರ ಗಾತ್ರ

ಉಡುಪಿ: ಈ ವರೆಗೆ ಆಧಾರ್ ಕಾರ್ಡ್ ಪಡೆಯದವರು ಈ ಕೂಡಲೇ ನೋಂದಣಿ ಮಾಡಿಕೊಳ್ಳಿ. ಈಗಾಗಲೇ ಆಧಾರ್ ಕಾರ್ಡ್ ಪಡೆದಿದ್ದು, ಅದರಲ್ಲಿ ಲೋಪಗಳಿದ್ದರೆ ಸಹ ತಿದ್ದುಪಡಿ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ಜಿಲ್ಲಾಡಳಿತ ಮತ್ತು ಇ ಆಡಳಿತ ಇಲಾಖೆ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಏರ್ಪಡಿಸಿರುವ ಆಧಾರ್ ಅದಾಲತ್‌ಗೆ ಮಂಗಳಾರ ಚಾಲನೆ ನೀಡಿ ಮಾತನಾಡಿದರು. 30ರ ವರೆಗೆ ಈ ಅದಾಲತ್‌ ನಡೆಯಲಿದ್ದು, ನಾಲ್ಕು ಘಟಕಗಳ ಮೂಲಕ ತಿದ್ದುಪಡಿ ಮತ್ತು ಹೊಸ ನೋಂದಣಿ ಮಾಡಲಾಗುವುದು ಎಲ್ಲರೂ ಈ ಅವಕಾಶವನ್ನು ಬಳಸಿಕೊಳ್ಳಿ ಎಂದು ಮನವಿ ಮಾಡಿದರು.

ಸಾಮಾಜಿ ಭದ್ರತೆ ವಿಭಾಗದ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿ, ಪಿಂಚಣಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ ಮಾಡಿಸಿ ಅದನ್ನು ಬ್ಯಾಂಕ್ ಖಾತೆಗೆ ಜೋಡಿಸಿ. ಈಗ ಕೆಲವರಿಗೆ ಮನಿ ಆರ್ಡರ್ ಮೂಲಕ ಪಿಂಚಣಿ ತಲುಪುತ್ತಿದೆ. ಆದರೆ ಮುಂದೆ ಬ್ಯಾಂಕ್ ಖಾತೆಯ ಮೂಲಕವೇ ಪಾವತಿಸಲಾಗುತ್ತದೆ. ತೀರಾ ವೃದ್ಧರು ಅಥವಾ ಅಂಗವಿಕಲರನ್ನು ಬಿಟ್ಟು ಬೇರೆಲ್ಲರೂ ನೋಂದಣಿ ಮಾಡಿ ಎಂದು ಮನವಿ ಮಾಡಿದರು.

ಹೊಸ ನೋಂದಣಿ ಮತ್ತು ತಿದ್ದುಪಡಿಗಾಗಿ ಈಗ ನಾಲ್ಕು ದಿನಗಳ ಅದಾಲತ್ ನಡೆಸಲಾಗುತ್ತಿದೆ. ಆದರೆ ಇಲ್ಲಿ ಹೊಸ ನೋಂದಣಿಗೆ 2 ಹಾಗೂ ತಿದ್ದುಪಡಿಗೆ 2 ಘಟಕ ಇದೆ. ಒಂದು ಘಟಕದಲ್ಲಿ ದಿನಕ್ಕೆ 35 ಹೊಸ ಕಾರ್ಡ್ ಅಥವಾ ತಿದ್ದುಪಡಿ ಮಾಡಲು ಮಾತ್ರ ಸಾಧ್ಯವಾಗುತ್ತದೆ. ಉಳಿದವರು ತಾಲ್ಲೂಕು ಕಚೇರಿಯಲ್ಲಿರುವ ಅಟಲ್‌ಜಿ ಜನಸ್ನೇಹಿ ಕೇಂದ್ರದಲ್ಲಿ ನೋಂದಣಿ ಮಾಡಲು ಅವಕಾಶ ಇದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯ 34 ಅಂಚೆ ಕಚೇರಿ ಹಾಗೂ 14 ಬ್ಯಾಂಕ್ ಶಾಖೆಗಳಲ್ಲಿ ಸಹ ಆಧಾರ್ ತಿದ್ದುಪಡಿಗೆ ಅವಕಾಶ ಕಲ್ಪಿಸುವ ಯೋಜನೆ ಇದೆ. ಅದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧ, ಕಚೇರಿ ಅಧೀಕ್ಷಕ ಸಂಪತ್ ಇದ್ದರು.

ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ಪರಿಶೀಲಿಸಿ

ಮತದಾರರ ಕರಡುಪಟ್ಟಿಯನ್ನು ಸಹ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಪ್ರತಿಯೊಬ್ಬರೂ ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಅರ್ಜಿ ಸಲ್ಲಿಸಿ. ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಬದಲಾವಣೆ ಮಾಡಿಕೊಳ್ಳಲು ಸಹ ಇದೇ 29ರ ವರೆಗೆ ಅವಕಾಶ ಇದೆ.

2018 ಜನವರಿ 1ಕ್ಕೆ 18 ವರ್ಷ ತುಂಬುವ ಯುವಕರು ಸಹ ನೋಂದಣಿ ಮಾಡಿಕೊಳ್ಳಬೇಕು. ಅವರನ್ನು ಶತಮಾನದ ಮತದಾರರ ಎಂದು ಗುರುತಿಸಿ ಜನವರಿ 25ರಂದು ನಡೆಯುವ ಮತದಾರರ ದಿನಾಚರಣೆ ದಿನದಂದು ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT