7

ನ್ಯಾ.ಸದಾಶಿವ ಆಯೋಗ ವರದಿ ಶೀಘ್ರ ಜಾರಿ

Published:
Updated:

ಸುರಪುರ: ‘ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.30ರಂದು ವಿಶೇಷ ಸಭೆ ಕರೆದಿದ್ದಾರೆ. ಮಾದಿಗ ಸಮುದಾಯಕ್ಕೆ ಸಕಾರಾತ್ಮಕ ಫಲಿತಾಂಶ ಸಿಗುವ ಸಾಧ್ಯತೆ ನಿಚ್ಚಳವಾಗಿದೆ’ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘದ ತಾಲ್ಲೂಕುಮಟ್ಟದ 2ನೇ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ವರದಿ ಕುರಿತು ಕೆಲ ಪಟ್ಟಭದ್ರರು ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ. ಇಂತಹ ಗೊಂದಲಗಳಿಗೆ ಕಿವಿಗೊಡಬಾರದು. ವರದಿ ಅನುಷ್ಠಾನದಿಂದ ಹಿಂದುಳಿದ ಯಾವುದೇ ಜಾತಿಗಳಿಗೂ ಅನ್ಯಾಯವಾಗುವುದಿಲ್ಲ. ಆಯಾ ಜಾತಿ ಜನಾಂಗದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರಕಲಿದೆ. ಸಿದ್ದರಾಮಯ್ಯ ಅವರು ಎಲ್ಲ ಜಾತಿ, ಜನಾಂಗಗಳಿಗೆ ನ್ಯಾಯ ಒದಗಿಸಿಕೊಡುತ್ತಾರೆ’ ಎಂದರು.

‘ನಮ್ಮ ಉದ್ಧಾರ ನಮ್ಮ ಕೈಯಲ್ಲಿದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಸರ್ಕಾರದ ಪ್ರತಿಯೊಂದು ಯೋಜನೆಗಳ ಲಾಭ ಪಡೆಯಬೇಕು. ಅಭಿವೃದ್ಧಿಗೆ ಅಧಿಕಾರ ಕೀಲಿಕೈ ಇದ್ದಂತೆ. ಮಾದಿಗರು ರಾಜಕೀಯ ಕ್ಷೇತ್ರದಲ್ಲಿಯೂ ಮುಂದೆ ಬರಬೇಕು. ಜಾತಿ ವ್ಯವಸ್ಥೆಯನ್ನು ಕಿತ್ತೆಸೆಯಬೇಕು. ಜಾತಿ, ಜಾತಿಗಳ ನಡುವೆ ವಿಷಬೀಜ ಬಿತ್ತುವ ಮತೀಯ ಶಕ್ತಿಗಳನ್ನು ದೂರವಿಡಬೇಕು’ ಎಂದು ಕರೆ ನೀಡಿದರು.

‘ಸಂಘಟನೆ ಮತ್ತು ರಾಜಕಾರಣ ಎರಡೂ ಒಂದಾಗಿರಲು ಸಾಧ್ಯವಿಲ್ಲ. ಮಾದಿಗರು ಸಂಘಟನೆಗಿಂತ ರಾಜಕೀಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು. ಅಟ್ರಾಸಿಟಿ (ಜಾತಿ ನಿಂದನೆ) ಪ್ರಕರಣ ನಿಜವಾದ ಅಸ್ತ್ರವಲ್ಲ. ಅದರ ಸಾಧನೆ ಶೂನ್ಯ. ಇದರಿಂದ ಯಾವುದೇ ಲಾಭವಿಲ್ಲ. ಜಾತಿ ನಿಂದನೆ ಪ್ರಕರಣ ದಾಖಲಿಸುವುದಕ್ಕಾಗಿ ಬೇಡ. ಪ್ರತಿಯೊಂದು ಜಾತಿ, ಜನಾಂಗದೊಂದಿಗೆ ಪ್ರೀತಿ, ವಿಶ್ವಾಸದಿಂದ ಬಾಳ್ವೆ ನಡೆಸಬೇಕು’ ಎಂದು ತಿಳಿಸಿದರು.

‘ದ್ವೇಷ ಬೇಡ. ಅಸೂಯೆಯನ್ನು ಕಿತ್ತೊಗೆಯಿರಿ. ಸಮಾಜದ ಒಳಿತಿಗಾಗಿ ಸಂಘಟಿತರಾಗಿ. ಸೌಲಭ್ಯಕ್ಕಾಗಿ ಹೋರಾಟವಿರಲಿ. ಧ್ವನಿ ಇಲ್ಲದ, ಶಕ್ತಿಯಿಲ್ಲದ ಮಾದಿಗ ಜನಾಂಗಕ್ಕೆ ಶಾಸಕ ರಾಜಾ ವೆಂಕಟಪ್ಪನಾಯಕರು ಧ್ವನಿಯಾಗಬೇಕು’ ಎಂದು ನುಡಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ‘ಮಾದಿಗರು ಅತ್ಯಂತ ಸಂಭಾವಿತ ಸಮಾಜ. ಜಗಳಗಂಟರಲ್ಲ ಒಳ್ಳೆ ಜನ. ನನ್ನ ಅಧಿಕಾರಾವಧಿಯಲ್ಲಿ ಅವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿದ್ದೇನೆ. ಅದರಂತೆ ಎಲ್ಲಾ ಜಾತಿ ಜನಾಂಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನೆಡೆಯುತ್ತಿದ್ದೇನೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದರು.

ಉಪನ್ಯಾಸಕರಾದ ಡಾ.ಬಿ.ಜಿ.ನಂದನ ಮತ್ತು ಮಹಾದೇವಪ್ಪ ದಳಪತಿ ಉಪನ್ಯಾಸ ನೀಡಿದರು. ಹಿರಿಯೂರ ದೇಶಿಮಠದ ಷಡಕ್ಷರಿ ಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಣ್ಣ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಭೀಮಣ್ಣ ಬಿಲ್ಲವ್, ಬಿಸಲಪ್ಪ ಕಟ್ಟಿಮನಿ, ಪಂಡಿತ ನಿಂಬೂರ್, ಎಸ್.ಬಿ.ಮುರಾರಿ, ಎಸ್.ಜಿ.ಕಟ್ಟಿಮನಿ, ಭೀಮಾಶಂಕರ ಬಿಲ್ಲವ್ ಇದ್ದರು.

ಸಮಾವೇಶದ ಮುಂಚೆ ಸತ್ಯಂಪೇಟೆಯ ಮಾತಂಗ ಪರ್ವತದಿಂದ ಕುಂಬಾರಪೇಟೆ ಮಾರ್ಗವಾಗಿ ಬೈಕ್ ರ‍್ಯಾಲಿ ಮೂಲಕ ಸ್ವಾಗತಿಸಿ, ನಂತರ ನಗರದಲ್ಲಿ ತೆರೆದ ವಾಹನದಲ್ಲಿ ವೇದಿಕೆಯವರೆಗೂ ಮೆರವಣಿಗೆ ನಡೆಯಿತು. ಸಮಾಜದ ಮುಖಂಡರು ಮತ್ತು ವಿವಿಧ ಗ್ರಾಮಗಳ ಜನರು ಭಾಗವಹಿಸಿದ್ದರು. ಯಲ್ಲಪ್ಪ ಹುಲಿಕಲ್ ಸ್ವಾಗತಿಸಿದರು. ಧರ್ಮರಾಜ ಬಡಿಗೇರ್ ನಿರೂಪಿಸಿದರು. ಬಸವರಾಜ ಅಗ್ನಿ ವಂದಿಸಿದರು.

* * 

ಮದ್ಯದಂಗಡಿಗಳ ಪರವಾನಗಿ ನೀಡುವಲ್ಲಿಯೂ ಮೀಸಲಾತಿ ಅನ್ವಯಿಸಬೇಕು ಎಂಬುದರ ಬಗ್ಗೆ ಚಿಂತನೆ ಇದೆ. ಸಿಎಲ್-2, ಸಿಎಲ್-9 ಬ್ಯಾಕ್ ಲಾಗ್ ಕಾಯಿದೆ ಜಾರಿಗೆ ಪ್ರಕಾರ ಆದ್ಯತೆ ನೀಡಲಾಗುವುದು.

ಅರ್.ಬಿ.ತಿಮ್ಮಾಪುರ ಅಬಕಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry