ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೇಸುವಿನ ಸಂದೇಶ ಬದುಕಿಗೆ ಆದರ್ಶ

Last Updated 26 ಡಿಸೆಂಬರ್ 2017, 6:30 IST
ಅಕ್ಷರ ಗಾತ್ರ

ಯಾದಗಿರಿ: ‘ಮಾನವ ಕುಲದ ಉದ್ಧಾರ ಹಾಗೂ ಮಾನವೀಯ ಆದರ್ಶ ಮೌಲ್ಯಗಳಂತಹ ಯೇಸುವಿನ ಸಂದೇಶ ಎಲ್ಲರ ಬದುಕಿಗೆ ಆದರ್ಶವಾಗಿದೆ’ ಎಂದು ಮೆಥೋಡಿಸ್ಟ್ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ನಂದಕುಮಾರ ಅಭಿಪ್ರಾಯಪಟ್ಟರು.

ನಗರದ ಮೆಥೋಡಿಸ್ಟ್ ಚರ್ಚ್‌ನಲ್ಲಿ ಸೋಮವಾರ ಕ್ರಿಸ್‌ಮಸ್ ಹಬ್ಬದ ಅಂಗ ವಾಗಿ ಯೇಸುವಿನ ಸಂದೇಶ ನೀಡಿದರು. ‘ಮಾನವನ ಪಾಪಗಳನ್ನು ಕಳೆಯಲೆಂದೇ ಯೇಸು ಜನಿಸಿದ್ದಾನೆ. ಆತನಲ್ಲಿ ವಿಶ್ವಾಸವಿಟ್ಟು ಆದರ್ಶಗಳನ್ನು ಪಾಲಿಸಿದರೆ ಬದುಕಿನಲ್ಲಿ ನೆಮ್ಮದಿ ಕಾಣಬಹುದು’ ಎಂದರು.

‘ಯೇಸು ಜನಿಸಿದ ಈ ದಿನವನ್ನು ಪವಿತ್ರ ಕ್ರಿಸ್‌ಮಸ್ ಅನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದಯಾಮಯನಾದ ಯೇಸುವಿನ ಬದುಕು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಯೇಸುವಿನ ಸಂದೇಶ ಗಳು ಜಗತ್ತಿಗೆ ಬೆಳಕು ನೀಡುವ ದಾರಿ ದೀಪಗಳಾಗಿವೆ’ ಎಂದು ಹೇಳಿದರು.

‘ಇಂದು ನಮ್ಮ ಬದುಕಿನಲ್ಲಿ ದ್ವೇಷ, ಅಸೂಯೆ ಹೆಚ್ಚಿದೆ. ಪ್ರೀತಿಯಿಂದ ನೋಡುವುದನ್ನು ಮರೆತ್ತಿದ್ದೇವೆ. ಜಾತಿ, ಮತ, ಧರ್ಮಗಳ ಮೂಲಕ ಮನುಷ್ಯರ ನಡುವೆ ಗೋಡೆಗಳನ್ನು ಕಟ್ಟಿಕೊಂಡಿದ್ದೇವೆ. ಇಂತಹ ಗೋಡೆ ಗಳನ್ನು ಯೇಸುವಿನ ಬೋಧನೆಗಳು ಒಡೆದು ಜನರನ್ನು ಬೆಸೆಯುವ ಕೆಲಸ ಮಾಡುತ್ತವೆ’ ಎಂದು ವಿವರಿಸಿದರು.

‘ಯೇಸುವಿನ ತತ್ವ, ಆದರ್ಶಗಳು ಯುವಜನರಿಗೆ ದಾರಿ ದೀಪವಾಗಿದ್ದು, ಅವುಗಳನ್ನು ಅಳವಡಿಸಿಕೊಂಡು ಜಗತ್ತಿಗೆ ಮಾದರಿ ಕ್ರೈಸ್ತರಾಗಿ ಬಾಳಬೇಕು. ಅಂದಾಗ ಮಾತ್ರ ಕ್ರಿಸ್‌ಮಸ್ ಹಬ್ಬಕ್ಕೆ ಅರ್ಥ ಬರುತ್ತದೆ’ ಎಂದರು.

ಸಹಾಯಕ ಸಭಾಪಾಲಕ ರೆವರೆಂಡ್ ಸುಂದರಾಜ ಸಾಮ್ಯುವೇಲ್ ಮಾತನಾಡಿ, ‘ಕ್ರಿಸ್‌ಮಸ್ ಶಾಂತಿ ಸೌಹಾರ್ದತೆ ಸಾರುವ ಹಬ್ಬವಾಗಿದೆ. ದೇವರು ನಮ್ಮನ್ನು ಸೃಷ್ಟಿಸಿ ಸಹೋದರತ್ವದ ಬಾಂಧವ್ಯದಲ್ಲಿ ಬೆಸೆದಿದ್ದಾರೆ. ಕ್ರಿಸ್ತನ ಸಂದೇಶವನ್ನು ಪತ್ರಿಯೊಬ್ಬರೂ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ. ಯೇಸುಕ್ರಿಸ್ತನ ಪ್ರೀತಿಯ ಜ್ಯೋತಿ ಎಲ್ಲಾ ಕಡೆ ಪ್ರಜ್ವಲಿಸಬೇಕಾದರೆ ನಾವು ಕ್ರಿಯಾಶೀಲತೆ, ತ್ಯಾಗ, ಸೇವಾ ಮನೋಭಾವ ರೂಢಿಸಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

ಕ್ರಿಸ್‌ಮಸ್‌ ಅಂಗವಾಗಿ ವಿಶೇಷವಾಗಿ ತಯಾರಿಸಿದ್ದ ಕೇಕ್ ಅನ್ನು ಯೇಸುವಿನ ಜನ್ಮದಿನದ ಸುಭಾಶಯಗಳೊಂದಿಗೆ ಕತ್ತರಿಸಿ ನೆರೆದವರಿಗೆ ಹಂಚಲಾಯಿತು. ಪರಸ್ಪರ ಕ್ರಿಸ್‌ಮಸ್‌ ಸುಭಾಶಯ ವಿನಿಮಯ ನಡೆಯಿತು.

ನಿವೃತ್ತ ಪೊಲೀಸ್ ಅಧಿಕಾರಿ ವೈ.ಎಸ್.ಸಾಮ್ಯುವೇಲ್, ಬಿ.ಟಿ.ಸೈಮನ್, ಡಾ.ರೆಡ್‌ಸನ್, ಸುನೀಲ್ ರೆಡ್‌ಸನ್, ಬಿ.ಸಾಮ್ಯುವೇಲ್, ರಾಜು ದೊಡ್ಡಮನಿ, ಉದಯಕುಮಾರ ದೊಡ್ಡ ಮನಿ, ಜಾನ್‌ಸನ್ ತಂಗಡಗಿ, ವಿಜಯ ಕುಮಾರ ದೇಸುವಾಸ್, ಸುಮಿತ್ರಾ, ಯಶವಂತ ಮುಳ್ಳಅಗಸಿ, ಎಸ್.ಕೆ.ವಿಜಯಕುಮಾರ್, ಪ್ರಸಾದ ಮಿತ್ರಾ, ಜಿಮ್ಮಿ ರೋನಾಲ್ಡ್, ಸಭಾಪತಿ ಇದ್ದರು. ಕ್ರಿಸ್‌ಮಸ್ ಅಂಗವಾಗಿ ನಗರದಲ್ಲಿ ವಿವಿಧ ಚರ್ಚ್‌ಗಳಲ್ಲಿ ಸಾವಿರಾರು ಕೈಸ್ತರು ಪ್ರಾರ್ಥನೆ ಸಲ್ಲಿಸಿದರು.

* * 

ನಮ್ಮಗಳ ನಡುವೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಂತರ, ಅಡ್ಡಗೋಡೆ, ಕಂದಕಗಳು ಕಡಿಮೆಯಾಗಬೇಕಾದರೆ ಸರ್ವಧರ್ಮಗಳನ್ನು ಗೌರವಿಸಬೇಕು.
ರೆವರೆಂಡ್ ನಂದಕುಮಾರ
ಮೆಥೋಡಿಸ್ಟ್ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT