ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಆಗರ ಹುಡಗಿ ಗ್ರಾಮ

Last Updated 26 ಡಿಸೆಂಬರ್ 2017, 7:05 IST
ಅಕ್ಷರ ಗಾತ್ರ

ಹುಮನಾಬಾದ್‌: ಸರ್ಕಾರಿ ಆಸ್ಪತ್ರೆಗಳ ಆಸುಪಾಸು ಸಂಗ್ರಹಗೊಂಡಿರುವ ತ್ಯಾಜ್ಯ. ನಂದಗಾಂವ್‌ ಮಾರ್ಗದಲ್ಲಿ ಮಹಿಳೆಯರ ಬಯಲು ಶೌಚ. ಹಂದಿಗಳ ತಾಣವಾಗಿರುವ ಸರ್ಕಾರಿ ಶಾಲೆ ಅಕ್ಕಪಕ್ಕದ ಸ್ಥಳ. ರಸ್ತೆಯ ಮೇಲೆ ಹರಿಯುವ ಚರಂಡಿ ನೀರು. ಬಸ್‌ ನಿಲ್ದಾಣ ತೆರವುಗೊಳಿಸಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಬಳಿ ನಿಲ್ಲುವ ವಿದ್ಯಾರ್ಥಿ ಹಾಗೂ ಪ್ರಯಾಣಿಕರು. ಇದು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ಹುಡಗಿ ಗ್ರಾಮಸ್ಥರು ಅನುಭವಿಸುತ್ತಿರುವ ಸಮಸ್ಯೆಗಳ ಚಿತ್ರಣ.

ತಾಲ್ಲೂಕು ಕೇಂದ್ರದಿಂದ 5 ಕಿ.ಮೀ ಅಂತರದಲ್ಲಿರುವ ಈ ಗ್ರಾಮ ಪವಾಡ ಪುರುಷ ದಿಗಂಬರ ಕರಿಬಸವೇಶ್ವರರು ನೆಲೆಸಿದ ಪುಣ್ಯಭೂಮಿ. ತರಕಾರಿ ಬೇಸಾಯ, ಸಾವಯವ ಕೃಷಿ ಮೂಲಕ ಜಿಲ್ಲೆ ಗಮನಸೆಳೆದ ಮಾದರಿ ಕೃಷಿಕರು ಇಲ್ಲಿದ್ದಾರೆ. ಹುಡಗಿ ಗ್ರಾಮವನ್ನು ಒಂದೊಮ್ಮೆ ರಾಜ್ಯಕ್ಕೆ ಮಾದರಿ ಗ್ರಾಮವಾಗಿಸಲು ಪಣತೊಟ್ಟು ಹಗಲಿರುಳು ಶ್ರಮಿಸಿದ ಗ್ರಾಮ ಶಿಲ್ಪಿಗಳ ಖ್ಯಾತಿ ಇದೆ.

‘ಬದಲಾದ ದಿನದಲ್ಲಿ ಗ್ರಾಮದಲ್ಲಿ ಸರ್ವಾಂಗೀಣ ಅಭಿವೃದ್ಧಿಗಾಗಿ ನಿಸ್ವಾರ್ಥವಾಗಿ ಶ್ರಮಿಸುವ ಮನಸ್ಸುಗಳಿಲ್ಲ. ಗ್ರಾಮ ಶಿಲ್ಪಿ ಖ್ಯಾತಿ ಹೊಂದಿದ್ದ ದೇವೀಂದ್ರ ಪಂಚಾಳ, ಕಾಶಿನಾಥರಾವ ಪಾಟೀಲ ಅಂಥ ವ್ಯಕ್ತಿಗಳು ಈಗ ನೆನಪು ಮಾತ್ರ. ಅವರ ಜತೆಗೆ ಕೈಜೋಡಿಸಿದ್ದ ಕಂಟೆಪ್ಪಾ ದಾನಾ ಅವರು ಅವರ ಆದರ್ಶವನ್ನು ಮುಂದುವರಿಸಿಕೊಂಡು ಬರುತ್ತಿರುವುದು ನೆಮ್ಮದಿ ವಿಷಯ’ ಎಂದು ಗ್ರಾಮಸ್ಥರು ತಿಳಿಸುತ್ತಾರೆ.

‘ಸರ್ಕಾರಿ ಆಸ್ಪತ್ರೆಯಿಂದ ಸರ್ಕಾರಿ ಆಯುರ್ವೇದ ಆಸ್ಪತ್ರೆವರೆಗಿನ ₹16 ಲಕ್ಷದ ರಸ್ತೆ ಅಭಿವೃದ್ಧಿಗೆ ಶಾಸಕ ರಾಜಶೇಖರ ಬಿ.ಪಾಟೀಲ ಅವರು ಭೂಮಿಪೂಜೆ ನೆರವೇರಿಸಿದ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ. ವರ್ಷದ ಹಿಂದೆ ಕೈಗೊಂಡ ಸಿಂಧನಕೇರಾ ರಸ್ತೆ ಹದಗೆಟ್ಟಿದೆ. ವಾರ್ಡ್‌ ಸಂಖ್ಯೆ– 1 ಮತ್ತು 8ರಲ್ಲಿ ಶೌಚಾಲಯ ಸೌಲಭ್ಯವಿಲ್ಲದ ಕಾರಣ ಮಹಿಳೆಯರು ಈಗಲೂ ಬಯಲು ಶೌಚಕ್ಕೆ ಹೋಗುತ್ತಾರೆ’ ಎನ್ನುತ್ತಾರೆ ದಶರಥ ಬುಟ್ಟಿ.

‘ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಜನತಾನಗರದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ನೀಡಿದ ಪ್ರಾಮುಖ್ಯತೆ ಚರಂಡಿಗೆ ನೀಡದ ಕಾರಣ ರಸ್ತೆ ಮಧ್ಯೆ ಗಲೀಜು ನೀರು ಹರಿಯುತ್ತದೆ’ ಎನ್ನುತ್ತಾರೆ ಸಂದೀಪ ಸೋಲಪುರೆ, ಸಚ್ಚಿದಾನಂದ ಹಿರೇನಾಗಾಂವ್‌.

‘ದಶಕ ಹಿಂದೆ ಅಸ್ತಿತ್ವಕ್ಕೆ ಬಂದ ಪಂಚಾಯಿತಿ ವ್ಯಾಪ್ತಿಯ ರಾಮನಗರ ನಿವಾಸಿಗಳು ರಸ್ತೆ, ಚರಂಡಿ, ವಿದ್ಯುತ್‌ ಸಂಪರ್ಕ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಖಾಸಗಿ ವ್ಯಕ್ತಿಗಳ ಬಳಿ ಜಮೀನು ಖರೀದಿಸಿ ಮನೆ ನಿರ್ಮಿಸಿಕೊಂಡಿದ್ದು, ತೆರಿಗೆಯನ್ನು ಪಾವತಿಸುತ್ತಿದ್ದೇವೆ. ಆದರೆ, ನಮ್ಮ ಹೆಸರು ಪಂಚಾಯಿತಿ ದಾಖಲಾಗಿಲ್ಲ. ಆ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಬೇಕು’ ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸುತ್ತಾರೆ.

‘ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ₹1 ಕೋಟಿ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ ಶಾಸಕ ಪಾಟೀಲರು ತಿಳಿಸಿದ್ದಾರೆ. ಗ್ರಾಮದ ಸಮಸ್ಯೆಗಳೂ ಬಗೆಹರಿಸಲಾಗುವುದು’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಭು ಮಾಳನಾಯಕ.

* * 

ರಾಷ್ಟ್ರೀಯ ಹೆದ್ದಾರಿ 9ಕ್ಕೆ ಹೊಂದಿಕೊಂಡ ಗ್ರಾಮದಲ್ಲಿ ಬಸ್‌ ನಿಲ್ದಾಣ ಸೌಲಭ್ಯ ಇಲ್ಲ ಬಸ್‌ ನಿಲ್ದಾಣ ನಿರ್ಮಿಸಬೇಕು
ಸೋಮನಾಥ ವಿ.ಪಾಟೀಲ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT