4
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಅತ್ಯಾಚಾರ ಖಂಡನೆ: ಮೂಡಿಗೆರೆ ಬಂದ್‌ ಯಶಸ್ವಿ

Published:
Updated:
ಅತ್ಯಾಚಾರ ಖಂಡನೆ: ಮೂಡಿಗೆರೆ ಬಂದ್‌ ಯಶಸ್ವಿ

ಮೂಡಿಗೆರೆ: ವಿಜಯಪುರದಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಘಟನೆಯನ್ನು ಖಂಡಿಸಿ, ವಿವಿಧ ದಲಿತಪರ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.

ಪರಿಶಿಷ್ಟಜಾತಿ ಹಾಗೂ ಪಂಗಡ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ರಾಜ್ಯರೈತ ಸಂಘ, ಪೀಸ್‌ಅಂಡ್‌ ಅವೆರ್‌ನೆಸ್‌ ಸಂಸ್ಥೆ, ಜೆಡಿಎಸ್‌ ಅಲ್ಪಸಂಖ್ಯಾತರ ಘಟಕ, ವಿವಿಧ ಆಟೋ ಸಂಘಟನೆಗಳು, ಕಾಂಗ್ರೆಸ್‌ನ ವಿವಿಧ ಘಟಕಗಳು, ಬಿಎಸ್‌ಪಿ ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವನ್ನು ಒಕ್ಕೊರಲಿನಿಂದ ಖಂಡಿಸಿ, ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ

ಮೂಡಿಗೆರೆ: ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವ ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗುವಂತೆ ಕಾನೂನು ರೂಪಿಸಬೇಕು ಎಂದು ಬಹುಜನ ಸಮಾಜ ಪಕ್ಷ ಜಿಲ್ಲಾ ಕಾರ್ಯದರ್ಶಿ ಲೋಕವಳ್ಳಿ ರಮೇಶ್‌ ಆಗ್ರಹಿಸಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡ ಹಿತರಕ್ಷಣಾ ಸಮಿತಿ ಪಟ್ಟಣದಲ್ಲಿ ಸೋಮವಾರ ಕರೆ ನೀಡಿದ್ದ ತಾಲ್ಲೂಕು ಬಂದ್‌ನ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ‘ದೇಶದಲ್ಲಿ ಅತ್ಯಾಚಾರಿಗಳಿಗೆ ಭಯವಿಲ್ಲದಂತಾಗಿದ್ದು, ಇದರಿಂದಾಗಿ ಪ್ರತಿನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿವೆ. ಅತ್ಯಾಚಾರ ಪ್ರಮಾಣವನ್ನು ತಗ್ಗಿಸಲು ಕಾನೂನು ಮಾರ್ಪಾಡಾಗಬೇಕಿದೆ’ ಎಂದರು. ದಲಿತರ ಮೇಲೆ ಕೈ ಮಾಡಿದರೆ, ಕೈ ಮಾಡಿದ ವ್ಯಕ್ತಿ ಎಷ್ಟೇ ದೊಡ್ಡವ್ಯಕ್ತಿಯಾಗಿದ್ದರೂ ಸೂಕ್ತ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಎಸ್‌ಪಿ ಮುಖಂಡ ಯು.ಬಿ. ಮಂಜಯ್ಯ ಮಾತನಾಡಿ, ‘ರಾಜ್ಯದಲ್ಲಿ ದನಗಳ್ಳರ ಕುರಿತು ಕೈ ಕಡಿಯಿರಿ, ತಲೆ ಕಡಿಯಿರಿ ಎಂದು ಬೊಬ್ಬೆಯಿಡುವ ಬಿಜೆಪಿಯ ಈಶ್ವರಪ್ಪ, ರಾಜ್ಯದಲ್ಲಿ ಇಂತಹ ದೊಡ್ಡ ದುರಂತ ನಡೆದರೂ ತುಟಿ ಬಿಚ್ಚದಿರುವುದು, ಇವರ ಮುಖವಾಡದ ರಾಜಕೀಯವನ್ನು ತೋರಿಸುತ್ತದೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರೆಲ್ಲರೂ ಒಂದಾಗಿ, ಸಮಾಜದಲ್ಲಿ ಶೋಷಿತ ಜನಾಂಗದ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಕೂಡಲೇ ಹತ್ತಿಕ್ಕಲು ಮುಂದಾಗಬೇಕು’ ಎಂದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಂಜುನಾಥಗೌಡ ಮಾತನಾಡಿ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹಗಲು ವೇಳೆಯಲ್ಲಿಯೇ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆಯಂತಹ ಘಟನೆಗಳು ನಡೆಯುತ್ತಿರುವುದು ನಾವು ಯಾವ ರಾಜ್ಯದಲ್ಲಿದ್ದೇವೆ ಎಂಬ ಅನುಮಾನ ಮೂಡಿಸುವಂತಾಗಿದ್ದು, ಕೂಡಲೇ ದೇಶದಲ್ಲಿ ಕಾನೂನನ್ನು ಬಿಗಿಗೊಳಿಸಿ, ಅಮಾಯಕ ಹೆಣ್ಣುಮಕ್ಕಳನ್ನು ರಕ್ಷಿಸಬೇಕಿದೆ’ ಎಂದರು.

ದಲಿತ ಮುಖಂಡ ಕಿರುಗುಂದ ರಾಮಯ್ಯ ಮಾತನಾಡಿ ‘ದೇಶದಲ್ಲಿ ಕಾನೂನನ್ನು ಅಧಿಕಾರಿಗಳು ತಮಗೆ ಬೇಕಾದಂತೆ ತಿರುಚುವ ಕೆಲಸ ಮಾಡು ತ್ತಿದ್ದಾರೆ. ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಕಾರು ಚಲಾಯಿಸಿ ಘಟನೆ ಇದಕ್ಕೆ ಸಾಕ್ಷಿಯಾಗಿದ್ದು, ಕಾನೂನುಗಳೆಲ್ಲವೂ ಶೋಷಿತರ ವಿರುದ್ಧವಾಗಿಯೇ ಬಳಸುವಂತಹ ಸ್ಥಿತಿ ಉಂಟಾಗಿರುವುದು ಶೋಚನೀಯ’ ಎಂದರು.

ಪ್ರತಿಭಟನೆಯ ಅಂಗವಾಗಿ ಪ್ರವಾಸಿ ಮಂದಿರದಿಂದ ಮರವಣಿಗೆ ಹೊರಟು, ಅತ್ಯಾಚಾರಿಗಳ ವಿರುದ್ಧ ಘೋಷಣೆ ಕೂಗುತ್ತಾ, ಬೇಲೂರು ರಸ್ತೆ. ಎಂ.ಜಿ. ರಸ್ತೆ, ಕೆ.ಎಂ. ರಸ್ತೆಯಲ್ಲಿ ಸಾಗಿ ಲಯನ್ಸ್‌ ವೃತ್ತದಲ್ಲಿ ಸಮಾವೇಶಗೊಳ್ಳಲಾಯಿತು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

* * 

ದೇಶದಲ್ಲಿ ಅತ್ಯಾಚಾರ ಘಟನೆಗಳನ್ನು ಶೀಘ್ರವಾಗಿ ತನಿಖೆ ನಡೆಸಿ ಶಿಕ್ಷೆ ಪ್ರಕಟಿಸಬೇಕು

ಮಂಜುನಾಥಗೌಡ

ರಾಜ್ಯರೈತ ಸಂಘದ ಉಪಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry