7

ಪರಿವರ್ತನಾ ಯಾತ್ರೆ: ಜನಮನ ಸೆಳೆದ ಬೈಕ್ ರ‍್ಯಾಲಿ

Published:
Updated:

ಮಲೇಬೆನ್ನೂರು: ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪರಿವರ್ತನಾ ಯಾತ್ರೆ ಅಂಗವಾಗಿ ಸೋಮವಾರ ಬೈಕ್ ರ‍್ಯಾಲಿ ನಡೆಸಿದರು. ಹೋಬಳಿ ವ್ಯಾಪ್ತಿಯ ದೊಡ್ಡ ಗ್ರಾಮಗಳಾದ ಭಾನುವಳ್ಳಿ, ಕುಣಿಬೆಳೆಕೆರೆ, ಹರಳಹಳ್ಳಿ, ಕುಂಬಳೂರು, ಹಾಲಿವಾಣ, ಕೊಮಾರನಹಳ್ಳಿ, ಜಿಗಳಿ, ಹೊಳೆಸಿರಿಗೆರೆ, ವಾಸನ, ನಂದಿಗುಡಿ, ಗೋವಿನಹಾಳು ಹಾಗೂ ಕೊಕ್ಕನೂರಿನಿಂದ 1500ಕ್ಕೂ ಹೆಚ್ಚು ಬೈಕ್‌ಗಳ ಮೇಲೆ ಕಾರ್ಯಕರ್ತರು ಬಂದಿದ್ದರು.

ಬೈಕ್ ರ‍್ಯಾಲಿ ಆರಂಭಕ್ಕೂ ಮುನ್ನ ಮಾಜಿ ಶಾಸಕ ಬಿ.ಪಿ. ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿವರ್ತನಾ ಯಾತ್ರೆಯ ಉದ್ದೇಶ ತಿಳಿಸಿದರು. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಹುಟ್ಟುಹಬ್ಬದ ಪ್ರಯುಕ್ತ ಸಿಹಿ ವಿತರಣೆ ಮಾಡಿ ಬೈಕ್ ರ‍್ಯಾಲಿಗೆ ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಚಾಲನೆ ನೀಡಿದರು.

ಕೇಸರಿ ಬಣ್ಣದ ರುಮಾಲು ಧರಿಸಿದ ಯುವಕರ ‘ಭಾರತ್ ಮಾತಾ ಕಿ ಜೈ’ ಘೋಷಣೆ ಮುಗಿಲು ಮುಟ್ಟಿತ್ತು. ಪೊಲೀಸರು ಸಂಚಾರ ನಿಯಮ ಪಾಲಿಸುವಂತೆ ಧ್ವನಿವರ್ಧಕದ ಮೂಲಕ ಮನವಿ ಮಾಡಿದರು.

ಬಿಜೆಪಿ ಮುಖಂಡರಾದ ಹನಗವಾಡಿ ವೀರೇಶ್, ಪುರಸಭಾ ಉಪಾಧ್ಯಕ್ಷ ಬಿ.ಎಂ.ಚನ್ನೇಶ, ಮುದೇಗೌಡ್ರ ತಿಪ್ಪೇಶ್, ಗೋವಿನಹಾಳ್ ರಾಜು, ಚಿದಾನಂದ್, ಕೆ.ಜಿ. ವೀರನಗೌಡ, ಪುರಸಭೆ ಬಿಜೆಪಿ ಸದಸ್ಯರು, ವಿವಿಧ ವಿಭಾಗದ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಇದ್ದರು. ಬೈಕ್ ರ‍್ಯಾಲಿ ವೇಳೆ ವಾಹನಗಳ ಸಂಚಾರ ಕೆಲಕಾಲ ವ್ಯತ್ಯಯಗೊಂಡಿತ್ತು. ಪೊಲೀಸರು ಭದ್ರತೆ ಒದಗಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry