3

‘ಮನ, ಮನೆಯಲ್ಲಿ ಯೇಸು ಜನಿಸಲಿ’

Published:
Updated:

ಧಾರವಾಡ: ‘ಗೋದಲಿಯಲ್ಲಿ ಜನಿಸಿದ ಯೇಸುಕ್ರಿಸ್ತ್‌ ನಮ್ಮ ಮನೆ ಹಾಗೂ ಮನದೊಳಗೆ ಜನಿಸುವಂತಾದರೆ ಕ್ರಿಸ್‌ಮಸ್‌ ಆಚರಣೆಗೆ ಅರ್ಥ ಬರಲಿದೆ’ ಎಂದು ಬಿಷಪ್‌ ರೈಟ್‌ ರೆವರೆಂಡ್‌ ರವಿಕುಮಾರ ನಿರಂಜನ ಹೇಳಿದರು. ನಗರದ ಹೆಬಿಕ್‌ ಸ್ಮಾರಕ ದೇವಾಲಯದಲ್ಲಿ ಭಾನುವಾರ ಬೆಳಿಗ್ಗೆ ಕ್ರಿಸ್‌ಮಸ್‌ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಕ್ರಿಸ್‌ಮಸ್‌ ಆಚರಣೆ ಕೇವಲ ಆಡಂಬರವಾಗಬಾರದು. ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಅದರಂತೆಯೇ ಬದುಕಿ ಇತರರಿಗೆ ಮಾದರಿಯಾದಲ್ಲಿ ನಿಜವಾದ ಕ್ರಿಸ್‌ಮಸ್ ಆಚರಣೆಗೆ ಅರ್ಥ ಬರಲಿದೆ’ ಎಂದರು.

‘ಕ್ರಿಸ್‌ಮಸ್‌ ಎಲ್ಲರಿಗೂ ಸಂತೋಷವನ್ನು ಹಂಚುವ ಹಬ್ಬ. ದುಃಖ, ಕಣ್ಣೀರು, ವೇದನೆ, ಸಮಸ್ಯೆ, ಬಡತನ ಇರುವವರೊಟ್ಟಿಗೆ ಈ ಹಬ್ಬವನ್ನು ಆಚರಿಸುವಂತಾಗಬೇಕು. ಆ ಮೂಲಕ ಕ್ರಿಸ್‌ಮಸ್‌ ಹಬ್ಬಕ್ಕೆ ನಿಜವಾದ ಅರ್ಥ ತಂದುಕೊಡಬೇಕು’ ಎಂದರು.

ಬೆಳಿಗ್ಗೆಯೇ ಹೊಸ ಉಡುಪು ಧರಿಸಿ ಹಿರಿಯರು, ಕಿರಿಯರು ಚರ್ಚ್‌ನತ್ತ ಧಾವಿಸಿದರು. ಯೇಸುವನ್ನು ಧ್ಯಾನಿಸುವ ಸುಮಧುರ ಗೀತೆ ಚರ್ಚ್‌ ಆವರಣದಲ್ಲಿ ಅನುರಣಿಸಿತು. ನಂತರ ಜಿ.ನಂದಕುಮಾರ್ ಅವರಿಂದ ಪ್ರಾರ್ಥನೆ ನಡೆಯಿತು. ರೆವರೆಂಡ್‌ ಎಸ್‌.ಎಸ್‌.ಸಕ್ರಿ ಅವರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ನೆರೆದ ಭಕ್ತರು ಕ್ರಿಸ್ತನ ಕುರಿತ ವಿಶೇಷ ಗೀತೆಗಳನ್ನು ಹಾಡಿದರು.

ನಂತರ ಪ್ರತಿಯೊಬ್ಬರಿಗೂ ಕೇಕ್‌ ಹಂಚಲಾಯಿತು. ಚರ್ಚ್‌ನ ಹೊರಭಾಗದಲ್ಲಿ ಪ್ರತಿಯೊಬ್ಬರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಉಳಿದಂತೆ ನಗರದ ಶತಮಾನ ಕಂಡ ಆಲ್‌ಸೈಂಟ್‌ ಚರ್ಚ್‌, ಹೋಲಿ ಕ್ರಾಸ್‌ ಚರ್ಚ್‌ ಹಾಗೂ ನಿರ್ಮಲ ನಗರದಲ್ಲಿರುವ ಪರ್ಪೇಚ್ಯುಯಲ್‌ ಸಾಕರ್‌ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.

ಕ್ಯಾಥೋಲಿಕ್‌ ಹಾಗೂ ಪ್ರೊಟೆಸ್ಟೆಂಟ್‌ ಕ್ರೈಸ್ತ ಧರ್ಮೀಯರು ಯೇಸು ಕ್ರಿಸ್ತನ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದರು. ಚರ್ಚ್‌ನ ಕಾಯರ್‌ಗಳು ವಿಶೇಷ ಪ್ರಾರ್ಥನೆ ಗೀತೆಗಳನ್ನು ಹಾಡಿದರು. ಧರ್ಮಗುರುಗಳು ಪ್ರಾರ್ಥನೆ ಬೋಧಿಸಿದರು. ನಂತರ ಪ್ರತಿಯೊಬ್ಬರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಾರ್ಥನೆ ನಂತರ ತಮ್ಮ ಮನೆಯಲ್ಲಿ ವಿಶೇಷ ಅಡುಗೆ ತಯಾರಿಸಿ, ಸ್ನೇಹಿತರು ಹಾಗೂ ನೆಂಟರಿಷ್ಟರೊಂದಿಗೆ ಕ್ರಿಸ್‌ಮಸ್‌ ಆಚರಿಸಿದರು. ತಮ್ಮ ನೆರೆಹೊರೆಯ ಅನ್ಯ ಧರ್ಮೀಯರಿಗೆ ಕೇಕ್‌, ಸಿಹಿತಿನಿಸು ಹಂಚಿಕೊಂಡು ಸಂಭ್ರಮಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry