6

ಕೆರೆ ತುಂಬಿಸಲು ₹ 7 ಸಾವಿರ ಕೋಟಿ ಖರ್ಚು

Published:
Updated:
ಕೆರೆ ತುಂಬಿಸಲು ₹ 7 ಸಾವಿರ ಕೋಟಿ ಖರ್ಚು

ಲಕ್ಷ್ಮೇಶ್ವರ: ‘ರಾಜಸ್ಥಾನದ ಬಳಿಕ ಅತ್ಯಂತ ಹೆಚ್ಚು ಬರಗಾಲಕ್ಕೆ ತುತ್ತಾಗುವ ರಾಜ್ಯ ಕರ್ನಾಟಕ. ಇದನ್ನು ಗಮನಿಸಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಿ ಅದಕ್ಕಾಗಿ ₹ 7 ಸಾವಿರ ಕೋಟಿ ಖರ್ಚು ಮಾಡಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಇಲ್ಲಿನ ಎಂ.ಎ. ಕಾಲೇಜು ಆವರಣದಲ್ಲಿ ಸೋಮವಾರ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ₹ 462 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ 834 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಳೆದ 16 ವರ್ಷಗಳಲ್ಲಿ 13 ವರ್ಷ ರಾಜ್ಯದಲ್ಲಿ ಬರ ಆವರಿಸಿತ್ತು. ಇದಕ್ಕಾಗಿಯೇ ನಮ್ಮ ಸರ್ಕಾರ ಕೆರೆ ತುಂಬಿಸುವ ಹಾಗೂ ಚೆಕ್‌ ಡ್ಯಾಂ, ಕೃಷಿ ಹೊಂಡಗಳನ್ನು ನಿರ್ಮಿಸುವ ಕಾರ್ಯಕ್ರಮಗಳನ್ನು ರೂಪಿಸಿತು. ಶಿರಹಟ್ಟಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 20 ಕೆರೆಗಳಿಗೆ ನೀರು ತುಂಬಿಸಿದ್ದು ₹ 140 ಕೋಟಿ ವೆಚ್ಚದಲ್ಲಿ 80 ಚೆಕ್‌ ಡ್ಯಾಂಗಳನ್ನು ನಿರ್ಮಿಸಿದೆ’ ಎಂದರು.

‘ಈ ಭಾಗದ ಜನಗಳ ಬಹುದಿನಗಳ ಬೇಡಿಕೆಯಾಗಿದ್ದ ಲಕ್ಷ್ಮೇಶ್ವರ ತಾಲ್ಲೂಕು ಕೇಂದ್ರವನ್ನಾಗಿಸುವ ಬೇಡಿಕೆಯನ್ನು ನಾವು ಈಡೇರಿಸಿದ್ದೇವೆ. ಇದೇ ಜನವರಿ 1ರಿಂದ ಹೊಸ ತಾಲ್ಲೂಕಾಗಿ ಮೇಲ್ದರ್ಜೆಗೆ ಏರಲಿದೆ’ ಎಂದು ಸಿದ್ದರಾಮಯ್ಯ ಅವರು ಕಿವಿಗಡಚಿಕ್ಕುವ ಜಯಘೋಷಗಳ ಮಧ್ಯೆಯೇ ಪ್ರಕಟಿಸಿದರು.

‘ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೆಚ್ಚು ಮಾತನಾಡುವವರಲ್ಲ. ಆದರೆ, ಹೆಚ್ಚು ಕೆಲಸ ಮಾಡಿಸಬಲ್ಲ ವ್ಯಕ್ತಿ. ಇಂದಿರಾಗಾಂಧಿ ಸಹ ಕಡಿಮೆ ಮಾತು ಹೆಚ್ಚು ಕೆಲಸ ಎಂದು ಹೇಳುತ್ತಿದ್ದರು. ಶಿರಹಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ₹ 3462 ಕೋಟಿ ರೂಪಾಯಿ ವೆಚ್ಚದ ಯೋಜನೆಗಳನ್ನು ತಂದಿದ್ದಾರೆ. ಇಷ್ಟೊಂದು ಹಣ ನನ್ನ ಕ್ಷೇತ್ರಕ್ಕೂ ಕೊಂಡೊಯ್ದಿಲ್ಲ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಅವರ ಕ್ಷೇತ್ರಕ್ಕೂ ಬಂದಿರಲಿಲ್ಲ’ ಎಂದು ಹೇಳಿ ಭಾರಿ ಕರತಾಡನ ಪಡೆದರು.

‘ಎಚ್‌.ಕೆ. ಪಾಟೀಲರ ಆಸಕ್ತಿಯಿಂದಾಗಿ ರಾಜ್ಯದಾದ್ಯಂತ ಸಾವಿರಾರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ. ಶಿರಹಟ್ಟಿ ಕ್ಷೇತ್ರದಲ್ಲಿ ಬಾಕಿ ಉಳಿದಿದ್ದ 52 ಗ್ರಾಮಗಳಿಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಮಾತನಾಡಿ, ‘₹ 1040 ಕೋಟಿಯ ಅದ್ಭುತ ಯೋಜನೆಯೊಂದನ್ನು ಸರ್ಕಾರ ರೂಪಿಸಿದ್ದು, ತುಂಗಭದ್ರಾ, ಮಲಪ್ರಭಾ ನದಿಯಿಂದ ಗದಗ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ನೀರು ಪೂರೈಕೆ ಮಾಡುವ ಈ ಯೋಜನೆ ಶೀಘ್ರವೇ ಅನುಷ್ಠಾನಗೊಳ್ಳಲಿದೆ’ ಎಂದರು.

‘ಗದಗ ನಗರದ 15 ಸಾವಿರ ಮನೆಗಳಿಗೆ ಈ ಮೊದಲು ನೀರಿನ ಸಂಪರ್ಕ ಕಲ್ಪಿಸಲಾಗಿತ್ತು. ಇದೀಗ 26 ಸಾವಿರ ಮನೆ ಬಾಗಿಲಿಗೇ ನೀರು ಪೂರೈಕೆಯಾಗುತ್ತಿದೆ. ಜಿಲ್ಲೆ ಬರಪೀಡಿತ ಎಂಬ ಹಣೆಪಟ್ಟಿಯನ್ನು ಸರ್ಕಾರದ ಪ್ರಯತ್ನದಿಂದಾಗಿ ಕಳಚಿಕೊಳ್ಳುತ್ತಿದೆ’ ಎಂದು ಹೇಳಿದರು.

‘ಧಾರವಾಡ, ಗದಗ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ರೈತರಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುವ ಮಹದಾಯಿ ಯೋಜನೆಯನ್ನು ಬಿಜೆಪಿ ತನ್ನ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದೆ. ಯಡಿಯೂರಪ್ಪನವರು ನೀರಿನ ವಿಚಾರದಲ್ಲಿ ಕ್ಷುಲ್ಲಕ ರಾಜಕೀಯ ಮಾಡಿದರು. ಅಮಿತ್‌ ಷಾ ಮಧ್ಯಸ್ಥಿಕೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರನ್ನು ಭೇಟಿ ಮಾಡಿ ಪತ್ರ ತರಿಸಿಕೊಂಡರು. ಅದರ ಬದಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೋಗಿ ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಮನವಿ ಮಾಡಿಕೊಳ್ಳಬೇಕಿತ್ತು. ರಾಜ್ಯದ ಪಾಲಿನ ನೀರು ಬಿಡುಗಡೆ ಮಾಡಲು ಪರಿಕ್ಕರ್‌ಗೆ ನಿರ್ದೇಶನ ನೀಡುವಂತೆ ಮನವಿ ಮಾಡಿಕೊಳ್ಳಬೇಕಿತ್ತು’ ಎಂದರು.

ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ‘ವರದಾ ನದಿಯಿಂದ ₹ 9 ಕೋಟಿ ವೆಚ್ಚದಲ್ಲಿ ಬಾಲೇಹೊಸೂರು ಕೆರೆಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಕ್ಷೇತ್ರದ ಎಲ್ಲ ಕೆರೆಗಳಿಗೂ ನೀರು ತುಂಬಿಸಲು ಧಾರಾಳವಾಗಿ ಹಣ ಬಿಡುಗಡೆ ಮಾಡಿದ್ದಾರೆ. ಅಂಗವಿಕಲರಿಗೆ 176 ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದೆ. ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಬಂದಿದ್ದರಿಂದ ಲಕ್ಷ್ಮೇಶ್ವರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ‘ದಶಕಗಳಿಂದ ಆಗಬೇಕಿದ್ದ ಹೊಸ ತಾಲ್ಲೂಕು ಘೋಷಣೆಯನ್ನು ಮುಖ್ಯಮಂತ್ರಿಗಳು ಅನುಷ್ಠಾನಕ್ಕೆ ತಂದಿರುವುದು ಸಂತಸದ ವಿಚಾರ’ ಎಂದರು.

ಸಚಿವ ರುದ್ರಪ್ಪ ಲಮಾಣಿ, ದೆಹಲಿ ವಿಶೇಷ ಪ್ರತಿನಿಧಿ ಸಲೀಂ ಅಹ್ಮದ್‌, ಶಾಸಕರಾದ ಬಿ.ಆರ್‌. ಯಾವಗಲ್‌, ಜಿ.ಎಸ್‌. ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ, ಉಪಾಧ್ಯಕ್ಷೆ ರೂಪಾ ಅಂಗಡಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಸದಸ್ಯ ಎಸ್‌.ಟಿ. ಬಳಿಗಾರ, ಎಪಿಎಂಸಿ ಅಧ್ಯಕ್ಷ ಎಸ್‌.ಟಿ. ಪಾಟೀಲ, ತಾ.ಪಂ. ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ, ಸದಸ್ಯ ಅಶೋಕಯ್ಯ ಮುಳಗುಂದಮಠ, ಪುರಸಭೆ ಅಧ್ಯಕ್ಷ ಎಂ.ಆರ್‌. ಪಾಟೀಲ, ಉಪಾಧ್ಯಕ್ಷ ಗುರುಪುತ್ರ ಮೆಡ್ಲೇರಿ, ಕಾಂಗ್ರೆಸ್‌ ಮುಖಂಡರಾದ ಟಿ. ಈಶ್ವರ್‌, ಎಸ್‌.ಎನ್. ಪಾಟೀಲ, ಐ.ಜಿ. ಸನದಿ, ಎ.ಎಂ. ಹಿಂಡಸಗೇರಿ, ಎಫ್‌.ಎಚ್‌. ಜಕ್ಕಪ್ಪನವರ, ಎಸ್‌.ಜಿ. ನಂಜಯ್ಯನಮಠ, ಜಿಲ್ಲಾಧಿಕಾರಿ ಮನೋಜ್ ಜೈನ್‌, ಐಜಿಪಿ ಡಾ. ಕೆ. ರಾಮಚಂದ್ರರಾವ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚೌಹಾಣ್‌ ವೇದಿಕೆಯಲ್ಲಿದ್ದರು.

ಸಭಿಕರನ್ನು ಹಿಡಿದಿಟ್ಟ ಸಿ.ಎಂ. ಹಾವಭಾವ

45 ನಿಮಿಷಕ್ಕೂ ಅಧಿಕ ಸಮಯ ಮಾತನಾಡಿದ ಸಿದ್ದರಾಮಯ್ಯ ಅವರು ತಮ್ಮ ಗಟ್ಟಿ ದನಿ ಹಾಗೂ ಹಾವಭಾವದಿಂದಾಗಿ ಸಭಿಕರನ್ನು ಹಿಡಿದಿಟ್ಟುಕೊಂಡರು. ಅದರಲ್ಲಿಯೂ ಪ್ರಧಾನಿ ಮೋದಿ ಅವರನ್ನು ವ್ಯಂಗ್ಯ ಮಾಡಿದ ಸಿದ್ದರಾಮಯ್ಯ, ‘ಮೋದಿ ಅಚ್ಛೆ ದಿನ್‌ ಆಯೇಗಾ (ಒಳ್ಳೆಯ ದಿನಗಳು ಬರುತ್ತವೆ)’ ಎನ್ನುತ್ತಿದ್ದರು. ಈಗ ಯಾರಿಗಾದರೂ ಅಚ್ಛೆ ದಿನ್‌ ಬಂದಿದೆಯೇ? ಬರುತ್ತದೆ ಎಂದು ನಿಮಗೆ ಅನಿಸಿದೆಯೇ? ಎಂದು ಹೇಳುತ್ತಿದ್ದಂತೆಯೇ ಸಭಿಕರು ಗೊಳ್ಳನೆ ನಕ್ಕರು.

‘ಮಿಸ್ಟರ್‌ ಯಡಿಯೂರಪ್ಪ ಅವರು ಮಿಷನ್‌ 150 ಎನ್ನುತ್ತಿದ್ದರು. ಆದರೆ, ಯಾವಾಗ ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಬಿಜೆಪಿ ಸೋತಿತೋ ಆಗ ಅವರು 150 ಸೀಟುಗಳನ್ನು ಪಡೆಯುವ ಆಸೆಯನ್ನೇ ಬಿಟ್ಟು ಬಿಟ್ಟಿದ್ದಾರೆ. ಬಿಜೆಪಿಯವರು ಲಜ್ಜೆಗೆಟ್ಟವರು. ಅವರಿಗೆ ಎರಡು ಮುಖ, ಎರಡು ನಾಲಿಗೆ ಇದೆ’ ಎಂದರು.

‘ಷರೀಫರಂತಹ ಸೂಫಿಗಳ ನಾಡು’

ಸಂವಿಧಾನ ಬದಲಾವಣೆ ಆಗಬೇಕು ಎಂಬ ಆರ್‌ಎಸ್‌ಎಸ್‌ ಅಜೆಂಡಾವನ್ನು ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಬಹಿರಂಗಗೊಳಿಸಿದ್ದಾರೆ. ಡಾ. ಅಂಬೇಡ್ಕರ್‌ ಅವರು ರೂಪಿಸಿದ ಈ ಸಂವಿಧಾನವನ್ನು ಬದಲಿಸಲು ಬಿಡಬಾರದು. ಅವರ ಅಜೆಂಡಾ ವಿಫಲಗೊಳಿಸಬೇಕೆಂದರೆ ಜನರು ಬಿಜೆಪಿಗೆ ಅಪ್ಪಿ ತಪ್ಪಿಯೂ ಅಧಿಕಾರ ಕೊಡಬಾರದು ಎಂದು ಮನವಿ ಮಾಡಿದ ಸಿದ್ದರಾಮಯ್ಯ, ‘ಕರ್ನಾಟಕವು ಬಸವಣ್ಣ, ಕನಕದಾಸರು, ಕುವೆಂಪು, ಶಿಶುನಾಳ ಷರೀಫರಂತಹ ಸೂಫಿ ಸಂತರು ಹಾಗೂ ಮಾನವತಾವಾದಿಗಳ ತವರು. ಇಲ್ಲಿ ಕೋಮು ವಿಷಬೀಜ ಬಿತ್ತಲು, ಜನರನ್ನು ಒಡೆಯಲು ಯಾರೂ ಅವಕಾಶ ಕೊಡಬಾರದು’ ಎಂದರು.

ಕಿಕ್ಕಿರಿದ ಜನಸ್ತೋಮ

ಸಾಧನಾ ಸಮಾವೇಶದ ಯಶಸ್ಸಿಗಾಗಿ ತಿಂಗಳಿಂದಲೇ ಸಿದ್ಧತೆ ನಡೆಸಿದ್ದ ಜಿಲ್ಲಾಡಳಿತ ಹಾಗೂ ಶಾಸಕ ರಾಮಕೃಷ್ಣ ದೊಡ್ಡಮನಿ ಸಮಾವೇಶಕ್ಕೆ ಸುಮಾರು 25 ಸಾವಿರಕ್ಕೂ ಅಧಿಕ ಜನರನ್ನು ಕರೆತಂದಿದ್ದರು. ಬೆಳಿಗ್ಗೆ 11ಕ್ಕೆ ಸಮಾವೇಶ ಆರಂಭವಾಗಬೇಕಿದ್ದರೂ ಎರಡು ಗಂಟೆ ತಡವಾಗಿ ಶುರುವಾಯಿತು. ಮುಖ್ಯಮಂತ್ರಿಗಳು ಭಾಷಣ ಮುಗಿಸುವ ವೇಳೆಗೆ ಸಂಜೆ 4 ಗಂಟೆಯಾಗಿತ್ತು. ಸಿದ್ದರಾಮಯ್ಯ ಅವರ ಭಾಷಣ ಕೇಳಿದ ಬಳಿಕವೇ ಜನರು ಸಮಾವೇಶ ಸ್ಥಳದಿಂದ ಕದಲಿದರು

ಮಿಂಚಿದ ಶಾಸಕ ದೊಡ್ಡಮನಿ

ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇರಿದ್ದ ಸಹಸ್ರಾರು ಜನರೆದುರು ತಾವು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ರಾಮಕೃಷ್ಣ ದೊಡ್ಡಮನಿ ಪರಿಣಾಮಕಾರಿಯಾಗಿಯೇ ತಲುಪಿಸಿದರು. ಕ್ಷೇತ್ರದಲ್ಲಿ ಕೈಗೊಂಡ ಕಾಮಗಾರಿಗಳ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಅಲ್ಲದೇ, ದೊಡ್ಡಮನಿ ಅವರನ್ನು ಕೇಂದ್ರವಾಗಿಟ್ಟುಕೊಂಡು ರಚಿಸಲಾದ ಭಾವಗೀತೆಯ ಧ್ವನಿಸುರುಳಿಯನ್ನು ನಿರಂತರವಾಗಿ ಪ್ರಸಾರ ಮಾಡಲಾಯಿತು.

ಅಂತಿಮವಾಗಿ ಸಿದ್ದರಾಮಯ್ಯ ಅವರೂ, ಶಾಸಕ ರಾಮಕೃಷ್ಣ ಇಲ್ಲಿ ಸಾಕಷ್ಟು ಕೆಲಸ ಮಾಡಿಸಿದ್ದಾರೆ. ಮಾಡಿದ ಕೆಲಸಕ್ಕೆ ನಾವು ಕೂಲಿಯನ್ನು ಕೇಳುತ್ತಿದ್ದೇವೆ ಎಂದು ಪರೋಕ್ಷವಾಗಿ ಮತಯಾಚನೆಯನ್ನೂ ಮಾಡಿದರು!

ಏಯ್ ಈಶ್ವರ್‌!

ಶಿರಹಟ್ಟಿ ಹಾಗೂ ಮುಂಡರಗಿ ತಾಲ್ಲೂಕಿನ ಗ್ರಾಮಗಳಿಗೆ ತುಂಗಭದ್ರಾ ಹಾಗೂ ಮಲಪ್ರಭಾ ನದಿಯಿಂದ ನೀರು ಪೂರೈಸಲು ರೂಪಿಸಲಾದ ₹ 1080 ಕೋಟಿ ಯೋಜನೆಯ ಬಗ್ಗೆ ಸಚಿವ ಎಚ್‌.ಕೆ. ಪಾಟೀಲ ಮಾಹಿತಿ ನೀಡುತ್ತಿದ್ದರು. ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿಗಳು ದಿನಾಂಕ ಕೊಡಬೇಕು ಎಂದು ತಮ್ಮ ಭಾಷಣದಲ್ಲಿ ಮನವಿ ಮಾಡಿ ಸಿದ್ದರಾಮಯ್ಯ ಅವರತ್ತ ನೋಡಿದರು. ಟಿ. ಈಶ್ವರ್‌ ಅವರು ಮುಖ್ಯಮಂತ್ರಿ ಅವರ ಎದುರು ನಿಂತು ಮಾತುಕತೆಯಲ್ಲಿ ತೊಡಗಿದ್ದರು. ಇದರಿಂದ ಕಿರಿಕಿರಿಯಾದಂತಾಗಿ ಏಯ್‌ ಈಶ್ವರ್‌ ಎಂದು ಎಚ್‌.ಕೆ. ಪಾಟೀಲ ಕೂಗಿದರು. ನಂತರ ಮುಖ್ಯಮಂತ್ರಿಗಳು ಸನ್ನೆ ಮಾಡಿ ಈಶ್ವರ್‌ ಅವರನ್ನು ಸ್ವಸ್ಥಾನಕ್ಕೆ ಹೋಗಿ ಕುಳಿತುಕೊಳ್ಳುವಂತೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry