7

ರೈತರ ರಾಷ್ಟ್ರೀಕೃತ ಬ್ಯಾಂಕ್‌ ಸಾಲ ಮನ್ನಾಕ್ಕೆ ಚಿಂತನೆ

Published:
Updated:

ಬೇಲೂರು: ‘ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನೂ ಮನ್ನಾ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ತಿಳಿಸಿದರು.

ತಾಲ್ಲೂಕಿನ ಕಣದೂರು ಗ್ರಾಮದ ವೀರಭದ್ರೇಶ್ವರ ದೇವಾಲಯದಲ್ಲಿ ನಾಗೇನಹಳ್ಳಿ ಮತ್ತು ಹುನುಗನಹಳ್ಳಿ ಗ್ರಾಮಸ್ಥರು ಸೋಮವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹುನುಗನಹಳ್ಳಿ ಮತ್ತು ನಾಗೇನಹಳ್ಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಸುಮಾರು 700 ಅಡಿಗಳಷ್ಟು ಆಳದವರೆಗೆ ಕೊಳವೆ ಬಾವಿ ಕೊರೆದರೂ ನೀರು ಬರುತ್ತಿಲ್ಲ. ಈ ಕಾರಣ ಯಗಚಿ ಜಲಾಶಯದಿಂದ ಬಹುಗ್ರಾಮದ ಯೋಜನೆಯಡಿ ಕುಡಿಯುವ ನೀರು ಒದಗಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಭಾಗದ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿ ಶಾಸಕರೊಂದಿಗೆ ಮಾತುಕತೆ ನಡೆಸಲಾಗುವುದು’ ಎಂದು ಹೇಳಿದರು.

ವಿಶೇಷ ಪ್ಯಾಕೇಜ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ. 4ರಂದು ಬೇಲೂರಿಗೆ ಭೇಟಿ ನೀಡಿ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ವೇಳೆ ಪ್ರವಾಸಿ ಕೇಂದ್ರವಾದ ಬೇಲೂರು ಮತ್ತು ಹಳೇಬೀಡುಗಳ ಅಭಿವೃದ್ಧಿಗೆ ಸಂಬಂಧಿಸಿ ವಿಶೇಷ ಪ್ಯಾಕೇಜ್‌ ಪ್ರಕಟಿಸಲಿದ್ದಾರೆ. ಇದರ ಜೊತೆಗೆ ಬೇಲೂರು ತಾಲ್ಲೂಕಿನಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಹೊಸ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ. ಮುಖ್ಯಮಂತ್ರಿಗಳ ನವಕರ್ನಾಟಕ ನಿರ್ಮಾಣ ಯಾತ್ರೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ’ ಎಂದು ಶಿವರಾಂ ಹೇಳಿದರು.

ಡಣಾಯಕನಹಳ್ಳಿ ಗ್ರಾಮಸ್ಥರು ರುದ್ರಭೂಮಿಗೆ ಕೇಳಿರುವ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿ ನೀಡಿಲ್ಲ. ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ತಪ್ಪು ಗ್ರಹಿಕೆಯಿಂದಾಗಿ ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಸಮಸ್ಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಲೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಹರಿಸಲಾಗುವುದು ಎಂದರು.

ಮಾಜಿ ಮಂಡಲ ಪ್ರಧಾನ ಎಚ್‌.ಎ.ಪ್ರಸನ್ನಗೌಡ ಅವರು ಬಿ.ಶಿವರಾಂ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಚನ್ನಕೇಶವ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಟಿ.ದಾಮೋದರ್‌, ಕಾಂಗ್ರೆಸ್‌ ಕಿಸಾನ್‌ ಘಟಕದ ಮೈಸೂರು ವಿಭಾಗದ ಅಧ್ಯಕ್ಷ ತುಳಸೀದಾಸ್‌, ಜಿ.ಪಂ. ಸದಸ್ಯ ಸೈಯ್ಯದ್‌ ತೌಫಿಕ್‌, ತಾಲ್ಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಪುನೀತ್‌ಗೌಡ, ಹುನುಗನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ರೇಖಾ ಬಿಂದುಸಾರ, ಚೀಕನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ್‌, ಪೂರ್ಣೇಶ್‌, ಪ್ರಮುಖರಾದ ಶ್ರೀನಿವಾಸ್‌, ವಸಂತ, ಸುರೇಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry