ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಮೇಲ್ಸೇತುವೆ ವಿಳಂಬಕ್ಕೆ ಸರ್ಕಾರ ಕಾರಣ

Last Updated 26 ಡಿಸೆಂಬರ್ 2017, 9:09 IST
ಅಕ್ಷರ ಗಾತ್ರ

ಹಾಸನ: ನಗರದ ಹೊಸ ಬಸ್‌ ನಿಲ್ದಾಣ ಬಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಶಾಸಕ ಎಚ್‌.ಎಸ್‌.ಪ್ರಕಾಶ್‌ ಆರೋಪಿಸಿದರು. ರೈಲ್ವೆ ಮೇಲ್ಸೇತುವೆ ಕಾಮಗಾರಿ ಇನ್ನೇನು ಆರಂಭಗೊಳ್ಳಲಿದೆ ಎಂದು ಹಲವು ವರ್ಷಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹೇಳಿಕೊಂಡು ಬಂದಿದ್ದಾರೆ. ಯಾವುದೇ ಕೆಲಸ ಮಾಡಬೇಕಾದರೂ ಇಚ್ಛಾಶಕ್ತಿ ಇರಬೇಕು. ರಾಜ್ಯ ಸರ್ಕಾರ ತನ್ನ ಪಾಲಿನ ₹ 38 ಕೋಟಿ ಹಣವನ್ನು ಕೇಂದ್ರಕ್ಕೆ ಪಾವತಿಸಿಲ್ಲ. ಹಾಗಾಗಿ ಯೋಜನೆ ವಿಳಂಬವಾಗುತ್ತಿದೆ. ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಆದರೆ ಅವರು ಆಸಕ್ತಿ ತೋರುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದು ಯೋಜನೆ ಕೈಗೆತ್ತಿಗೊಳ್ಳಲಿದೆ ಎಂದು ಪ್ರಕಾಶ್‌ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಅಮೃತ್ ಯೋಜನೆಯಲ್ಲಿ ಕುಡಿಯುವ ನೀರಿಗೆ ನಗರದ ಸಭೆಯಿಂದ ₹ 600 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ₹ 117 ಕೋಟಿಗೆ ಅನುಮೋದನೆ ನೀಡಲಾಗಿದೆ. 26 ಕಿ.ಮೀ. ಪೈಪ್‌ಲೈನ್‌‌ ಕಾಮಗಾರಿಯಲ್ಲಿ 8 ಕಿ.ಮೀ. ಮಾತ್ರ ಬಾಕಿ ಇದೆ. ಯೋಜನೆಯನ್ನು ನಗರ ಸುತ್ತಲಿನ 6 ಕಿ.ಮೀ. ವ್ಯಾಪ್ತಿಗೆ ವಿಸ್ತರಿಸಲು ₹ 216 ಕೋಟಿ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕರ್ನಾಟಕ ರಸ್ತೆ ನಿಗಮ ಮಾಡುತ್ತಿರುವ ಕಾಮಗಾರಿ ಕಳಪೆಯಾಗಿದೆ. ಈ ಬಗ್ಗೆ ಪ್ರತಿಭಟನೆ ನಡೆಸಿ ಸಚಿವರ ಗಮನಕ್ಕೂ ತಂದರು ಪ್ರಯೋಜವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬ್ರಮ್ಮದೇವರಹಳ್ಳಿ ಯಿಂದ ಪುರದಮ್ಮವರೆಗೆ 7 ಕಿ.ಮೀ. ರಸ್ತೆಗೆ ₹ 3 ಕೋಟಿ, ಶಂಖ ಕ್ರಾಸ್‌ನಿಂದ ಬೇಲೂರು ರಸ್ತೆ ಸಂಪರ್ಕಿಸುವ 2 ಕಿ.ಮೀ. ರಸ್ತೆಗೆ ₹ 4 ಕೋಟಿ, ದೊಡ್ಡಕೊಂಡಗೋಳ ದಿಂದ ಹಳೆಕೊಪ್ಪಲವರೆಗೆ 1 ಕಿ.ಮೀ. ರಸ್ತೆಗೆ ₹ 50 ಲಕ್ಷ, ಒಟ್ಟು ₹ 10 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವದ್ಧಿ ಯೋಜನೆಯಡಿ ₹ 2 ಕೋಟಿ ವೆಚ್ಚದ 15 ಕಿ.ಮೀ. ರಸ್ತೆ ಡಾಂಬರೀಕರಣ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ₹ 16 ಕೋಟಿ ವೆಚ್ಚದ 20 ಕಿ.ಮೀ. ರಸ್ತೆ ಅಭಿವದ್ಧಿ ಕಾಮಗಾರಿ ನಡೆಯುತ್ತಿದೆ ಎಂದರು.

ನಗರದ ಡೇರಿ ವೃತ್ತದಿಂದ ಬೇಲೂರು ರಸ್ತೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರ ₹ 15 ಕೋಟಿ ಪರಿಹಾರ ಹಣ ನಿಗದಿ ಮಾಡಿದೆ. ಸರ್ಕಾರ ಅನುಮತಿ ನೀಡುತ್ತಿದ್ದಂತೆ ಉದ್ದೂರು ರೈತರಿಗೆ ಪರಿಹಾರ ನೀಡಲಾಗುವುದು. ಹುಡಾ ಲೋಕೋಪಯೋಗಿ ಇಲಾಖೆಗೆ ಕಾಮಗಾರಿ ಹಸ್ತಾಂತರಿಸುವ ಮುನ್ನ ಅತಿಕ್ರಮಣ ತೆರವು ಮಾಡಿಕೊಡಬೇಕು ಎಂದು ಸಲಹೆ ನೀಡಿದರು. ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸತೀಶ್ ಇದ್ದರು.

* * 

ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಮನಸ್ಸು ಮಾಡಿದ್ದರೆ ರೈಲ್ವೆ ಮೇಲ್ಸೆತುವೆ ಯೋಜನೆಗೆ ಚಾಲನೆ ದೊರಕುತ್ತಿತ್ತು.
ಎಚ್‌.ಎಸ್‌.ಪ್ರಕಾಶ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT