7

ಜಾನುವಾರು ರಕ್ಷಣೆಗೆ ಎಪಿಎಂಸಿ ಬದ್ಧ

Published:
Updated:

ಹಾವೇರಿ: ‘ಜಾನುವಾರುಗಳು ಕೃಷಿ ಬದುಕಿನ ಭಾಗವಾಗಿದ್ದು, ಅವುಗಳ ಪೋಷಣೆ ಹಾಗೂ ನಿರ್ವಹಣೆ ಕುರಿತು ರೈತರಿಗೆ ಸಂಪೂರ್ಣ ನೆರವು ನೀಡಲು ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬದ್ಧವಾಗಿದೆ’ ಎಂದು ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಹೇಳಿದರು.

ನಗರದ ಹುಕ್ಕೇರಿಮಠದ ನಮ್ಮೂರ ಜಾತ್ರೆ ಅಂಗವಾಗಿ ನಗರದ ಶಿವಬಸವೇಶ್ವರ ಜಾನುವಾರು ಮಾರುಕಟ್ಟೆಯಲ್ಲಿ ನಡೆದ ಜಾನುವಾರು ಜಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನಮ್ಮ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ಜಾನುವಾರು ಮಾರುಕಟ್ಟೆಯಲ್ಲಿ ಶೆಡ್‌ಗಳನ್ನು ಹಾಗೂ ಮೇವಿನ ರಕ್ಷಣೆಗಾಗಿ ಘಟಕ ನಿರ್ಮಿಸುವ ನಿರ್ಧಾರ ಕೈಗೊಂಡಿದೆ’ ಎಂದರು.

‘ಜಾನುವಾರು ಮಾರುಕಟ್ಟೆ ನಿರ್ವಹಣೆಗೆ ಪ್ರತಿವರ್ಷ ₹ 6 ಲಕ್ಷ ವೆಚ್ಚವಾಗುತ್ತಿದೆ. ಆದರೆ ಆದಾಯ ಕಡಿಮೆ ಇದೆ. ಅದಕ್ಕಾಗಿ ಮಾರುಕಟ್ಟೆ ಮಂದೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ರಸ್ತೆ ಮತ್ತು ಚರಂಡಿ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ’ ಎಂದರು. ಉದ್ಯಮಿ ಪಿ.ಡಿ ಶಿರೂರ ಮಾತನಾಡಿ, ಸರ್ಕಾರವು ಗೋಶಾಲೆ ತೆರೆಯಲು ಅಗತ್ಯ ಅನುದಾನವನ್ನು ಒದಗಿಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ರೈತರು ಕೃಷಿ ಕೆಲಸಕ್ಕೆ ಯಂತ್ರೋಪಕರಣಗಳನ್ನು ಹೆಚ್ಚು ಬಳಸುತ್ತಿದ್ದು, ಮನೆಯಲ್ಲಿ ಜಾನುವಾರುಗಳನ್ನು ಸಾಕುವುದು ಕಡಿಮೆಯಾಗಿದೆ. ಆದರೆ, ಜಾನುವಾರುಗಳ ಗೊಬ್ಬರವು ಉತ್ಕೃಷ್ಟವಾಗಿದ್ದು, ಸಾವಯವ ಕೃಷಿಗೆ ಸಹಾಯಕವಾಗುತ್ತದೆ. ಇದರಿಂದ ಬರುವ ಕೃಷಿ ಉತ್ಪನ್ನಗಳು ಆರೋಗ್ಯದ ದೃಷ್ಟಿಯಿಂದಳು ಉತ್ತಮ’ ಎಂದರು.

ಎಪಿಎಂಸಿ ಉಪಾಧ್ಯಕೆ ವನಜಾಕ್ಷಿ ಬ್ಯಾಳಿ, ಸದಸ್ಯ ರುದ್ರೇಶ ಚಿನ್ನಣ್ಣನವರ, ಮೂಲೆಗದ್ದೆಯ ಸ್ವಾಮೀಜಿ, ಮಾದನಹಿಪ್ಪರಗಿಯ ಶ್ರೀಕಂಠ ದೇವರು, ಎಪಿಎಂಸಿ ಉಪಕಾರ್ಯದರ್ಶಿ ಮನೋಹರ ಬಾರ್ಕಿ. ಶಿವಯೋಗಿ ವಾಲಿಶೆಟ್ಟರ್, ಶಿವಕುಮಾರ ಮುದಗಲ್ಲ, ಪ್ರಭು ಹಿಟ್ನಳ್ಳಿ, ನಿವೃತ್ತ ಪ್ರಾಚಾರ್ಯ ಬಿ. ಬಸವರಾಜ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry