ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗಿಣಾ ನದಿ: ಹಗಲು ರಾತ್ರಿ ಅಕ್ರಮ ಮರಳು ಸಾಗಾಟ

Last Updated 26 ಡಿಸೆಂಬರ್ 2017, 9:16 IST
ಅಕ್ಷರ ಗಾತ್ರ

ಚಿತ್ತಾಪುರ: ತಾಲ್ಲೂಕಿನ ಕದ್ದರಗಿ, ಭಾಗೋಡಿ, ಇವಣಿ, ಮುಡಬೂಳ ಮತ್ತು ದಂಡೋತಿ ಬಳಿ ಅಕ್ರಮ ಮರಳು ಸಾಗಾಟ ದಂಧೆ ಹಗಲು–ರಾತ್ರಿ ನಡೆಯುತ್ತಿದೆ. ಮರಳು ಸಾಗಾಟ ತಡೆಗೆ ವಿವಿಧ ಇಲಾಖೆಗಳ ತಾಲ್ಲೂಕುಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಿದ ಮರಳು ಉಸ್ತುವಾರಿ ಸಮಿತಿ ಅಧಿಕಾರಿಗಳು ಮಾತ್ರ ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ.

ಕಾಳಗಿ ಲೋಕೋಪಯೋಗಿ ಇಲಾಖೆ ಉಸ್ತುವಾರಿಯಲ್ಲಿ ದಂಡೋತಿ ಕಂದಾಯ ವ್ಯಾಪ್ತಿಯಲ್ಲಿ ಕಾಗಿಣಾ ನದಿಯಿಂದ ಮೂರು ಸ್ಥಳದಿಂದ ಮರಳು ಎತ್ತುವುದಕ್ಕೆ ಟೆಂಡರ್ ಮೂಲಕ ಅನುಮತಿ ನೀಡಲಾಗಿದೆ. ನದಿಯಿಂದ ಎತ್ತಿ ತಂದ ಮರಳು ಇಲಾಖೆ ಗುರುತು ಮಾಡಿದ ಸ್ಥಳದಲ್ಲಿ ಸಂಗ್ರಹ ಮಾಡಲಾಗುತ್ತದೆ. ಈ ರಾಯಲ್ಟಿ ನೆರಳಿಲ್ಲಿಯೆ ಅಕ್ರಮ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಂಡೋತಿ, ಮುಡಬೂಳ, ಇವಣಿ, ಭಾಗೋಡಿ, ಕದ್ದರಗಿ –ಹೀಗೆ ವಿವಿಧ ಗ್ರಾಮಗಳಲ್ಲಿ ಹಗಲು–ರಾತ್ರಿ ಟ್ರ್ಯಾಕ್ಟರ್ ಮೂಲಕ ಅಕ್ರಮ ಮರಳು ಸಾಗಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿ, ಚಿತ್ತಾಪುರ ಮತ್ತು ಮಾಡಬೂಳ ಠಾಣೆಯ ಪೊಲೀಸ್ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮರಳು ಸಾಗಾಟ ನಡೆಯುವ ಸ್ಥಳ ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ನೆಪ ಹೇಳಿ ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಆಡಳಿತ ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಬಿಜೆಪಿ ಆರೋಪ ಮಾಡುತ್ತಲೆ ಬಂದಿದೆ. ಅದನ್ನು ಕಾಂಗ್ರೆಸ್ ತಳ್ಳಿ ಹಾಕುತ್ತಲೆ ಸಾಗಿದೆ. ಆದರೆ, ಮರಳು ದಂಧೆ ಮಾತ್ರ ಯಾವುದೇ ಅಡೆತಡೆ ಇಲ್ಲದೆ ನಿರ್ಭಯವಾಗಿ ಅಧಿಕಾರಿಗಳ ಅಭಯದಲ್ಲಿ ನಡೆಯುತ್ತಿದೆ ಎನ್ನುವುದು ಕಟುಸತ್ಯ. ಮರಳು ದಂಧೆಕೋರರು ಮತ್ತು ಅಧಿಕಾರಿಗಳ ನಡುವೆ ಅಪವಿತ್ರ ಮೈತ್ರಿಯೇ ಇದಕ್ಕೆಲ್ಲ ಕಾರಣ ಎನ್ನುತ್ತಾರೆ ಜನರು.

ದಂಡೋತಿ ಕಂದಾಯ ವ್ಯಾಪ್ತಿಯ ಮುಡಬೂಳ ಸಮೀಪ ಹಾಗೂ ಇತರೆ ಕಡೆಗೆ 10 ಜನರ ಕೂಲಿಕಾರ್ಮಿಕರ ವಿವಿಧ ತಂಡಗಳು ಪ್ರತಿ ಟ್ರ್ಯಾಕ್ಟರ್‌ಗೆ ₹500 ಹಣ ಪಡೆದು ಮರಳು ತುಂಬುವ ಕೆಲಸ ಮಾಡುತ್ತಿದ್ದಾರೆ. ಒಂದೊಂದು ತಂಡ ಹಗಲಿನಲ್ಲಿ 30ರಿಂದ 40 ಟ್ರ್ಯಾಕ್ಟರ್ ಮರಳು ತುಂಬುತ್ತಿದ್ದಾರೆ. ಒಬ್ಬ ಕೂಲಿಕಾರ್ಮಿಕ ದಿನವೂ ₹1,200ರಿಂದ ₹1,500 ಹಣ ಸಂಪಾದಿಸುತ್ತಿದ್ದಾರೆ. ಹೀಗಾಗಿ, ತೊಗರಿ ರಾಶಿ ಮಾಡಲು ರೈತರಿಗೆ ಕೂಲಿಕಾರ್ಮಿಕರ ಸಮಸ್ಯೆಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಮರಳು ತುಂಬುವ ಕೆಲಸ ಮಾಡುವ ಕಾರ್ಮಿಕರೊಬ್ಬರು ತಿಳಿಸಿದರು.

ಮರಳಿಗಾಗಿ ಗ್ರಾಮಗಳಲ್ಲಿ ಜನರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಮರಳು ದಂಧೆಕೋರರು ಒಂದೊಂದು ಕೂಲಿಕಾರ್ಮಿಕರ ತಂಡ ರಚಿಸಿಕೊಂಡಿದ್ದಾರೆ. ಹಗಲಿನಲ್ಲಿ ನದಿಯಿಂದ ಮರಳು ತಂದು ಗ್ರಾಮಗಳ ಸುತ್ತ ಯಾರ ಕಣ್ಣಿಗೂ ಬೀಳದ ಸ್ಥಳದಲ್ಲಿ ಸಂಗ್ರಹ ಮಾಡುತ್ತಾರೆ. ಇಡೀ ರಾತ್ರಿ ಟಿಪ್ಪರ್ ಮೂಲಕ ಮರಳು ಸಾಗಾಟ ನಡೆಯುತ್ತಿದೆ. ನದಿಯಲ್ಲಿ ಮರಳು ತುಂಬುವ ಕೂಲಿಕಾರ್ಮಿಕರು ಮತ್ತು ರಾತ್ರಿಯಲ್ಲಿ ಮರಳು ತುಂಬುವ ಕೂಲಿಕಾರ್ಮಿಕರು ಪಾಳಿಯಂತೆ ಕೆಲಸ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಮರಳು ಸಾಗಾಟದ ಕುರಿತು ರೋಸಿಹೋದ ಜನರು ಕಂದಾಯ ಮತ್ತು ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಕಂದಾಯ ಮತ್ತು ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಾಹಿತಿ ನೀಡಿದವರ ಹೆಸರುಗಳು ಮರಳು ದಂಧೆಕೋರರಿಗೆ ರವಾನೆ ಮಾಡುತ್ತಿದ್ದಾರೆ. ರಾತ್ರಿ ಪೊಲೀಸರು ಮತ್ತು ಮರಳು ದಂಧೆಕೋರರು ಒಂದೆಡೆ ಸೇರುತ್ತಾರೆ. ಗ್ರಾಮಗಳಲ್ಲಿ ದ್ವೇಷ ವಾತಾವರಣ ಸೃಷ್ಟಿಯಾಗುತ್ತಿದೆ. ಅಕ್ರಮ ಮರಳು ಕುರಿತು ಪೊಲೀಸರಿಗೆ ಮಾಹಿತಿ ನೀಡಲು ಜನರು ಹೆದರುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
‘ಮರಳು ಸಾಗಾಟ ಮಾಡುವ ಮುಡಬೂಳ ಬಳಿಯ ನದಿಯ ಸ್ಥಳ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದು ಚಿತ್ತಾಪುರ ಠಾಣೆ ವ್ಯಾಪ್ತಿಗೆ ಬರುತ್ತದೆ. ದಂಡೋತಿ ಬಳಿ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎನ್ನುವ ಮಾಹಿತಿಯಿದೆ. ಅದನ್ನು ತಡೆಯಲು ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಮಾಡಬೂಳ ಪೊಲೀಸ್ ಠಾಣೆಯ ಪಿಎಸ್ಐ ಹುಸೇನ್ ಬಾಷಾ ಹೇಳಿದ್ದಾರೆ.

‘ಕಳೆದ ಎರಡು ವರ್ಷಗಳಲ್ಲಿ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ವಿವಿಧೆಡೆ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು 2,000 ಕ್ಯೂಬಿಕ್ ಮೀಟರ್ ಮರಳು ಜಪ್ತಿ ಮಾಡಿಕೊಂಡು ನಮ್ಮ ವಶಕ್ಕೆ ಒಪ್ಪಿಸಿದ್ದಾರೆ. ಅದನ್ನು ಬೇಡಿಕೆಯಂತೆ ರಾಯಲ್ಟಿ ಆಧಾರದಲ್ಲಿ ಮಾರಾಟ ಮಾಡಿದ್ದೇವೆ’ ಎಂದು ಚಿತ್ತಾಪುರ ಲೋಕೋಪಯೋಗಿ ಇಲಾಖೆ ಎಇಇ ಹಣಮಂತರೆಡ್ಡಿ ಹೇಳಿದರು.

* * 

ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ರಚಿಸಿದ ಉಸ್ತುವಾರಿ ತಂಡದಲ್ಲಿ ಕಂದಾಯ, ಪೊಲೀಸ್ ಅಧಿಕಾರಿಗಳು ಮಾತ್ರ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ನಿಷ್ಕ್ರಿಯತೆ ಇದೆ.
ಮಲ್ಲೇಶಾ ತಂಗಾ, ತಹಶೀಲ್ದಾರ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT