7

ಮುಗಿಯದ ರಾಜ್ಯ ಹೆದ್ದಾರಿ ಕಾಮಗಾರಿ

Published:
Updated:
ಮುಗಿಯದ ರಾಜ್ಯ ಹೆದ್ದಾರಿ ಕಾಮಗಾರಿ

ಕಾಳಗಿ: ‘ಕರ್ನಾಟಕದ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಹಾಗೂ ರುದ್ರಮುನೀಶ್ವರ ಸಂಸ್ಥಾನ ಹಿರೇಮಠಕ್ಕೆ ಹೆಸರಾದ ಸುಗೂರ ಕೆ. ಗ್ರಾಮ, ಕೆಲ ಸೌಲಭ್ಯಗಳಿದ್ದರೂ ಹಲವು ಸೌಲಭ್ಯಗಳಿಂದ ದೂರ ಉಳಿದುಕೊಂಡಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಊರು, ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿಗೆ ಸೇರಿಕೊಂಡಿದ್ದರೂ ಚಿಂಚೋಳಿ ವಿಧಾನಸಭಾ ಹಾಗೂ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ್ದು, ಗೋಟೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಕನಿಷ್ಠ 550ಮನೆಗಳು, 3,600 ಜನಸಂಖ್ಯೆ ಹೊಂದಿರುವ ಇದು, ಅಕ್ಕಪಕ್ಕದ ತಾಂಡಾ ಮತ್ತು ಬುದ್ಧನಗರ ನಿವಾಸಿಗಳ ಸಂಪರ್ಕ ನಿರಂತರವಾಗಿ ಇಟ್ಟುಕೊಂಡಿದೆ.

ಅದರಂತೆ ಇಲ್ಲಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಮತ್ತು ರುದ್ರಮುನೀಶ್ವರ ಸಂಸ್ಥಾನ ಹಿರೇಮಠಕ್ಕೆ ದೂರದ ಅದೆಷ್ಟೋ ಭಕ್ತರು ನಿತ್ಯ ಬಂದುಹೋಗುತ್ತಾರೆ. ಅಷ್ಟೇ ಅಲ್ಲದೆ, ಕಲಬುರ್ಗಿ, ಸೇಡಂ, ಚಿತ್ತಾಪುರ, ಯಾದಗಿರಿ ಜನರು ಶ್ರೀಕ್ಷೇತ್ರ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡಕ್ಕೆ ಹೋಗಲು ಈ ಮಾರ್ಗವೇ ಸೂಕ್ತವಾಗುವುದರಿಂದ ‘ಸುಗೂರ ಕೆ. ಗ್ರಾಮ’ ಯಾವತ್ತೂ ಜನನಿಭಿಡ ಪ್ರದೇಶವಾಗಿ ಕಂಡುಬರುತ್ತದೆ.

ಆದರೆ, ‘ಜನ ಸಂಚಾರದ ಸುಗೂರ ಕೆ. – ಕಾಳಗಿ ನಡುವಿನ ಶಹಾಪುರ–ಶಿವರಾಂಪುರ್ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ವರ್ಷಗಳೇ ಕಳೆದರೂ ಪೂರ್ಣಗೊಳ್ಳದೆ ಹೆದ್ದಾರಿಯ ಎಲ್ಲೆಂದರಲ್ಲಿ ಜಲ್ಲಿಕಲ್ಲಿನ ರಾಶಿ ಬಿದ್ದು ವಾಹನ ಓಡಾಟಕ್ಕೆ ಅಡಚಣೆ ಉಂಟಾಗುತ್ತಿದೆ. ಈ ನಡುವೆ ಕೆಲವರು ಪ್ರಾಣ ಕಳೆದುಕೊಂಡು, ಅನೇಕರು ಕೈ ಕಾಲು ಮುರಿದುಕೊಂಡು ನರಳಾಡುತ್ತಿರುವ ಉದಾಹರಣೆ ಸಾಕಷ್ಟಿವೆ’ ಎಂದು ಕರಿಕಲ್‌ ತಾಂಡಾದ ನಿವಾಸಿ ಠಾಕ್ರು ಜಾಧವ್ ತಿಳಿಸಿದರು.

‘ಜನರು ಶುದ್ಧ ನೀರು ಕುಡಿಯಲೆಂದು ಕ್ಷೇತ್ರದ ಶಾಸಕ ಡಾ.ಉಮೇಶ ಜಾಧವ್ ತೀವ್ರ ಕಾಳಜಿವಹಿಸಿ ಮಂಜೂರು ಮಾಡಿಸಿದ ‘ಕುಡಿಯುವ ಶುದ್ಧ ನೀರಿನ ಘಟಕ’ ವಾರಸುದಾರರಿಲ್ಲದೆ ಹಾಳುಬಿದ್ದಿದೆ. ಇದನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರೆ ನಾವು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ’ ಎಂದು ಮುಖಂಡ ಮಾಣಿಕರಾವ ಪೊಲೀಸ್ ಪಾಟೀಲ ಹೇಳುತ್ತಾರೆ.

‘ಸರ್ಕಾರದ ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ತಲೆಯೆತ್ತಿರುವ ಆರೋಗ್ಯ ಉಪಕೇಂದ್ರದ ಕಟ್ಟಡ ಯಾವೊಬ್ಬ ಸಿಬ್ಬಂದಿ ಕಾಣದೆ ಉದ್ಘಾಟನೆಯ ಮುಂಚೆಯೆ ಅನಾರೋಗ್ಯಕ್ಕೆ ತುತ್ತಾಗಿದೆ. ಇದರಿಂದ ಚಿಕಿತ್ಸೆಗಾಗಿ ಜನರು ಕಾಳಗಿಗೆ ಹೋಗಿಬರುವುದು ಅನಿವಾರ್ಯವಾಗಿದೆ.

ಹತ್ತಿರದಲ್ಲೇ ಕಾಳಗಿ ಬಸ್ ಘಟಕ ಇದ್ದರೂ ಬಸ್ ಸಂಚಾರದ ತೀವ್ರ ಸಮಸ್ಯೆ ಜನರಿಗೆ ಕಾಡತೊಡಗಿ ಹೊರ ಹೋಗುವ ಶಾಲಾ–ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಶಿಕ್ಷಕರ ತೀವ್ರ ನಿರ್ಲಕ್ಷ್ಯಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಗಳು ಹಾಳುಕೊಂಪೆಯಾಗಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಮಾರಕವಾಗಿವೆ. ಸರ್ಕಾರಿ ಪ್ರೌಢಶಾಲೆಗೆ ಆವರಣಗೋಡೆ ಇಲ್ಲದಾಗಿ ದನಕರು ಓಡಾಡಿಕೊಂಡಿವೆ. ಪಶು ಚಿಕಿತ್ಸಾಲಯ ಕೊರತೆಗೆ ರೈತರು ಜಾನುವಾರುಗಳ ಆರೋಗ್ಯ ರಕ್ಷಣೆಯಲ್ಲಿ ಪರದಾಡುತ್ತಿದ್ದಾರೆ’ ಎಂದು ಯುವಕ ಜಗದೀಶ ಗಡ್ಡಿ ಹೇಳಿದರು.

‘ಶವದ ಅಂತ್ಯಕ್ರಿಯೆಯ ಸ್ಮಶಾನದ ದಾರಿ ತೀವ್ರ ಕೆಟ್ಟುಹೋಗಿದ್ದರಿಂದ ಜನರಿಗೆ ಮಳೆಗಾಲದಲ್ಲಿ ಬಹಳಷ್ಟು ಸಮಸ್ಯೆಯಿದೆ. ಹನುಮಾನ ಗುಡಿ–ಅಗಸಿ ಮತ್ತು ಮುಖ್ಯರಸ್ತೆ–ಅಗಸಿ ನಡುವಿನ ದಾರಿಯು ಎತ್ತಿನಬಂಡಿಯ ಓಡಾಟಕ್ಕೂ ತೊಂದರೆ ನೀಡುವಷ್ಟು ಕೆಟ್ಟುಹೋಗಿದೆ.

ಫಕೀರಯ್ಯ–ಶಾಮರಾವ ಒಡೆಯರ್ ಮನೆ ಮಧ್ಯೆ ಸಿಮೆಂಟ್ ರಸ್ತೆಯ ಅಗತ್ಯವಿದೆ. ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊಂದಿಕೊಂಡು ಅಂಗನವಾಡಿ ಕೇಂದ್ರದ ಅವಶ್ಯಕತೆಯಿದೆ. ವಾಹನಗಳಿಗೆ ಕಾಯುವ ಪ್ರಯಾಣಿಕರ ತಾತ್ಕಾಲಿಕ ನಿಲ್ಲುಗಡೆಗೆ ತಂಗುದಾಣ ನಿರ್ಮಿಸುವುದು ಜರೂರಿದೆ’ ಎಂದು ಯುವ ಮುಖಂಡ ಸಿದ್ದುಕೇಶ್ವರ ತಿಳಿಸಿದರು.

‘ಈ ಗ್ರಾಮ ಕೆಲ ವರ್ಷಗಳ ಹಿಂದೆ ಸುವರ್ಣ ಗ್ರಾಮ ಯೋಜನೆಗೆ ಒಳಪಟ್ಟಿತು. ಒಳರಸ್ತೆಯ ಕೆಲಕಡೆ ಸಿಮೆಂಟ್ ಕಾಂಕ್ರಿಟ್ ಆಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಯಾತ್ರಿನಿವಾಸ ನಿರ್ಮಾಣಗೊಂಡಿದೆ. ಬಸವೇಶ್ವರ ಗುಡಿಗೆ ಹೋಗಿಬರಲು ರಸ್ತೆ, ಮಹಿಳೆಯರಿಗೆ ಶೌಚಾಲಯ, ಚರಂಡಿ ಸೇರಿದಂತೆ ನಮ್ಮೂರಿಗೆ ಇನ್ನೂ ಅನೇಕ ಸೌಕರ್ಯಗಳ ಅಗತ್ಯವಿದೆ. ಈ ದಿಸೆಯಲ್ಲಿ ಜನಪ್ರತಿನಿಧಿಗಳು ಆಸಕ್ತಿವಹಿಸಿ ಅನುಕೂಲತೆ ಒದಗಿಸಿಕೊಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

* * 

ಸುಗೂರ ಕೆ. ಗ್ರಾಮಕ್ಕೆ ಇನ್ನೂ ಅನೇಕ ಸೌಲಭ್ಯಗಳ ಅವಶ್ಯಕತೆ ಇದೆ. ಜನಪ್ರತಿನಿಧಿಗಳು ಮನಸ್ಸು ಮಾಡಿ ಜನತೆಗೆ ಅನುಕೂಲ ಮಾಡಿಕೊಡುವ ಅಗತ್ಯವಿದೆ.

ಸಿದ್ದುಕೇಶ್ವರ, ಯುವ ಮುಖಂಡ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry