7

‘ಶಿಕ್ಷಣ ಕ್ಷೇತ್ರವನ್ನು ಮುಕ್ತವಾಗಿ ಬಳಸಿಕೊಳ್ಳಲು ಅವಕಾಶ ನೀಡಿ’

Published:
Updated:

ಶಿರಸಿ: ‘ಸರ್ಕಾರವು ತನ್ನ ಮೇಲೆ ಹೊರೆಯಾಗಿಸಿಕೊಂಡು ಸೇವಾ ವಲಯದಲ್ಲಿ ಶಿಕ್ಷಣ ನೀಡುವುದು ಸರಿಯಲ್ಲ. ಬದಲಾಗಿ ಶಿಕ್ಷಣ ಕ್ಷೇತ್ರವನ್ನು ಮುಕ್ತವಾಗಿ ಬಳಸಿಕೊಳ್ಳಲು ಅವಕಾಶ ನೀಡಬೇಕು’ ಎಂದು ಸಾಮಾಜಿಕ ಧುರೀಣ ಶಶಿಭೂಷಣ ಹೆಗಡೆ ಅಭಿಪ್ರಾಯಪಟ್ಟರು.

ಗೋಳಿಯ ಸಿದ್ಧಿವಿನಾಯಕ ಪ್ರೌಢಶಾಲೆ ಸುವರ್ಣ ಮಹೋತ್ಸವದ ಅಂಗವಾಗಿ ನೂತನ ಕ್ರೀಡಾಂಗಣ ಉದ್ಘಾಟಿಸಿ ಅವರು ಮಾತನಾಡಿದರು. ‘ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಆ ಸಂಸ್ಥೆಯ ಹಿನ್ನೋಟ ಹಾಗೂ ಮುನ್ನೋಟಗಳ ಪರಾಮರ್ಶೆ ಆಗಬೇಕು. ಸಮಾಜ ಮಾಡಲಾಗದ ಕೆಲಸವನ್ನು ಸರ್ಕಾರ ಮಾಡುವುದು ಸೂಕ್ತ; ಹೊರತು ಸಮಾಜದಲ್ಲಾಗುವ ಕೆಲಸಗಳಿಗೆ ಸರ್ಕಾರ ಮೂಗು ತೂರಿಸುವ ಕೆಲಸ ಆಗಬಾರದು’ ಎಂದರು.

‘ಸರ್ಕಾರವು ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು. ಖಾಸಗಿಯವರ ಜತೆ ಪೈಪೋಟಿಗಿಳಿದು ವ್ಯವಸ್ಥೆ ಹಾಳುಗೆಡಗುವ ಕಾರ್ಯಕ್ಕೆ ಇಳಿಯಬಾರದು. ಅವರಿಗೂ ಅವಕಾಶ ಕಲ್ಪಿಸಿ, ಗುಣಮಟ್ಟಕ್ಕೆ ಆದ್ಯತೆ ನೀಡಿದರೆ ಇನ್ನಷ್ಟು ಶೈಕ್ಷಣಿಕ ಪ್ರಗತಿ ಸಾಧ್ಯ. ಸಾಂಪ್ರದಾಯಿಕ ಶಿಕ್ಷಣವೊಂದೇ ಅಲ್ಲದೇ ಕೌಶಲಾಭಿವೃದ್ಧಿ, ಮಹಿಳಾ ಶಿಕ್ಷಣ, ಅಸಂಪ್ರದಾಯಿಕ ಕೋರ್ಸ್‌ಗಳನ್ನು ಅಳವಡಿಸಿಕೊಳ್ಳುವ ಕಾರ್ಯವಾಗಬೇಕು’ ಎಂದರು.

ಸನ್ಮಾನ: ಸಂಸ್ಥೆಯ ಮಾಜಿ ಅಧ್ಯಕ್ಷ ಕೇಶವ ಹೆಗಡೆ ಬಪ್ಪನಳ್ಳಿ, ಶಿಕ್ಷಣ ಪ್ರೇಮಿ ಎಂ.ವಿ.ಹೆಗಡೆ ಭತ್ತಗುತ್ತಿಗೆ ಹಾಗೂ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರವೀಂದ್ರ ಭಟ್ಟ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪತ್ರಕರ್ತ ವಿಶ್ವೇಶ್ವರ ಭಟ್ಟ ನೂತನ ಸಭಾಭವನವನ್ನು ಉದ್ಘಾಟಿಸಿದರು. ಎಂ.ಇ.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಹವ್ಯಕ ಮಹಾಸಭಾದ ಸದಸ್ಯ ಎಂ.ಎನ್.ಹೆಗಡೆ, ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಶ್ವನಾಥ ಶರ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry