5

ಪರೇಶ್ ಕುಟುಂಬಕ್ಕೆ ಪರಿಹಾರ ನೀಡಲು ಬಿಜೆಪಿ ಆಗ್ರಹ

Published:
Updated:
ಪರೇಶ್ ಕುಟುಂಬಕ್ಕೆ ಪರಿಹಾರ ನೀಡಲು ಬಿಜೆಪಿ ಆಗ್ರಹ

ಕಾರವಾರ: ‘ಹೊನ್ನಾವರ ಗಲಭೆಯಲ್ಲಿ ಮೃತಪಟ್ಟ ಪರೇಶ್‌ ಮೇಸ್ತನ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಇದೇ 29ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಹೊನ್ನಾವರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಕೈಬಿಡಬೇಕು. ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಅಮಾಯಕ ಹಿಂದೂಗಳನ್ನು ಬಿಡುಗಡೆ ಮಾಡಬೇಕು ಹಾಗೂ ಅವರ ಮೇಲೆ ಹಾಕಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಸಹಜ ಸಾವಲ್ಲ: ‘ಡಿ.6ರಂದು ನಡೆದ ಹೊನ್ನಾವರ ಗಲಭೆಯಲ್ಲಿ ಯುವಕ ಪರೇಶ್‌ ಮೇಸ್ತ ಹತ್ಯೆಯಾಗಿದ್ದು, ಡಿ.8ರಂದು ಆತನ ಮೃತದೇಹ ದೊರೆತಿದೆ. ಮೇಲ್ನೋಟಕ್ಕೆ ಇದು ಹತ್ಯೆ ಎಂದು ಬಹುತೇಕ ಮಂದಿ ಅಭಿಪ್ರಾಯಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬರುವ ಮುನ್ನವೇ ಪರೇಶನದು ಸಹಜ ಸಾವು ಎಂಬುದಾಗಿ ರಾಜ್ಯ ಸರ್ಕಾರ ಬಿಂಬಿಸಲು ಹೊರಟಿರುವುದು ಖಂಡನೀಯ. ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಅವರು ಪರೇಶ್‌ ಕುಟುಂಬಕ್ಕೆ ₹ 1 ಲಕ್ಷ ಕೊಟ್ಟು ಬಲಿಯಾದ ಜೀವಕ್ಕೆ ಬೆಲೆ ಕಟ್ಟಿದ್ದಾರೆ. ಆದರೆ ಈ ಹಣವನ್ನು ಪರೇಶ್‌ ತಂದೆ ಕಮಲಾಕರ ಅವರು ವಾಪಸ್‌ ನೀಡಿದ್ದು, ಮಗನ ಸಾವಿಗೆ ನಾಯ್ಯ ಸಿಗಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ’ ಎಂದು ಹೇಳಿದರು.

ಪ್ರತಿಭಟನೆ ಹತ್ತಿಕುವ ಪ್ರಯತ್ನ: ‘ಚಂದಾವರ ಗಲಭೆಯಲ್ಲಿ ಮುಸ್ಲಿಮರು ಮಾರಕಾಸ್ತ್ರಗಳನ್ನು ಹಿಡಿದು ಹಿಂದೂ ಜನರ ವಾಹನಗಳಿಗೆ ಹಾನಿಗೊಳಿಸಿದ್ದಾರೆ. ಇಷ್ಟಾದರೂ ಪೊಲೀಸರು ಈ ಪ್ರಕರಣದಲ್ಲಿ ಮುಸ್ಲಿಮರನ್ನು ಬಿಟ್ಟು ಹಿಂದೂಗಳನ್ನು ಮಾತ್ರ ಬಂಧಿಸಿದ್ದಾರೆ. ಸರ್ಕಾರ ಆಗಲೇ ಎಚ್ಚೆತ್ತುಕೊಂಡು ಸಿಪಿಐ ಕುಮಾರಸ್ವಾಮಿ ಅವರನ್ನು ಅಮಾನತುಗೊಳಿಸಿ, ನಿಜವಾದ ಆರೋಪಿಗಳನ್ನು ಬಂಧಿಸಿದ್ದರೆ ಕುಮಟಾ ಹಾಗೂ ಶಿರಸಿಯಲ್ಲಿ ಹಿಂಸಾಚಾರ ನಡೆಯುತ್ತಿರಲಿಲ್ಲ. ಹಿಂದೂಗಳ ರಕ್ಷಣೆ ಮಾಡದ ಸರ್ಕಾರವು ನ್ಯಾಯಯುತವಾದ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ’ ಎಂದು ಟೀಕಿಸಿದರು.

ಮಳಿಗೆ ನೀಡಬೇಕು: ‘ಭಟ್ಕಳ ಪುರಸಭೆ ಮಳಿಗೆ ಹರಾಜು ಪ್ರಕರಣದಲ್ಲಿ ವರ್ತಕ ರಾಮಚಂದ್ರ ನಾಯ್ಕ ಆತ್ಮಹತ್ಯೆ ಮಾಡಿಕೊಳ್ಳಲು ಮುಖ್ಯಾಧಿಕಾರಿ ಪ್ರೇರಣೆ ನೀಡಿದ್ದಾರೆಂದು ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೆ ಈ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ. ಅಂಗಡಿ ಕಳೆದುಕೊಂಡವರಿಗೆ ಮತ್ತೆ ಮಳಿಗೆಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಬದಲಾವಣೆ ಅಲ್ಲ, ತಿದ್ದುಪಡಿ: ‘ಅನಂತಕುಮಾರ ಹೆಗಡೆ ಅವರು ಸಂವಿಧಾನವನ್ನು ಬದಲಾಯಿಸಬೇಕು ಎಂದು ಹೇಳಿಕೆ ನೀಡಿಲ್ಲ. ಅವರು ಸಂವಿಧಾನಕ್ಕೆ ತಿದ್ದುಪಡಿ ಆಗಬೇಕು ಎಂದಷ್ಟೇ ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ. ಪಾಕಿಸ್ತಾನವನ್ನು ಯಾರು ಬೆಂಬಲಿಸುತ್ತಾರೋ ಅಥವಾ ದೇಶದ್ರೋಹಿ ಚಟುವಟಿಕೆಯಲ್ಲಿ ಯಾರೂ ಪಾಲ್ಗೊಂಡಿದ್ದಾರೋ ಅಂತಹ ದುಷ್ಟಶಕ್ತಿಯನ್ನು ನಾವು ವಿರೋಧಿಸುತ್ತೇವೆ’ ಎಂದು ಅವರು ಹೇಳಿದರು.

ಬಿಜೆಪಿ ಮುಖಂಡರಾದ ಸುನೀಲ್ ಹೆಗಡೆ, ವಿ.ಎಸ್.ಪಾಟೀಲ್, ಜೆ.ಡಿ.ನಾಯ್ಕ, ಶಿವಾನಂದ ನಾಯ್ಕ, ಜಿಲ್ಲಾ ವಕ್ತಾರ ರಾಜೇಶ ನಾಯಕ, ಶಾರದಾ ನಾಯ್ಕ, ರೂಪಾಲಿ ನಾಯ್ಕ, ನಾಗರಾಜ ಜೋಶಿ ಹಾಜರಿದ್ದರು. ಆರ್‌ವಿಡಿ ವಿರುದ್ಧ ದೂರು ದಾಖಲಿಸಲಿ ‘ಆರೋಪಿಗಳ ಕೈ ಮುರಿಯಬೇಕು ಎಂದು ಆರ್‌.ವಿ.ದೇಶಪಾಂಡೆ ಅವರು ಸಿದ್ದಾಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ವಿರುದ್ಧವೇ ಪೊಲೀಸರು ದೂರು ದಾಖಲಿಸಬೇಕು. 1985–86ರಲ್ಲೇ ಹಳಿಯಾಳದಲ್ಲಿ ಹಿಂದೂ ಮುಸ್ಲಿಂ ನಡುವೆ ಗಲಭೆ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋದ ಕಡೆಗಳಲ್ಲಿ ಗಲಾಟೆಗಳು ನಡೆಯುತ್ತಿವೆ’ ಎಂದು ಸುನೀಲ್‌ ಹೆಗಡೆ ದೂರಿದರು.

ಪರಿಸ್ಥಿತಿ ತಿಳಿಯಾದ ಮೇಲೆ ಮರಳುತ್ತಾರೆ..

ಬಿಜೆಪಿ ಶಿರಸಿ ಅಲ್ಪಸಂಖ್ಯಾತ ಘಟಕದ ಇಬ್ಬರು ಮುಸ್ಲಿಂ ಸದಸ್ಯರು ರಾಜೀನಾಮೆ ನೀಡಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆ.ಜಿ.ನಾಯ್ಕ, ‘ಸಮಾಜದವರು ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದ ಕಾರಣ ಅವರು ರಾಜೀನಾಮೆ ನೀಡಿದ್ದಾರೆ. ವಾತಾವರಣ ತಿಳಿಯಾದ ಬಳಿಕ ಮರಳಿ ಬರಲಿದ್ದಾರೆ’ ಎಂದರು. ‘ಪ್ರಮೋದ್ ಮುತಾಲಿಕ್ ಬಿಜೆಪಿ ಸೇರಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದರು. ಅದು ವಿಫಲವಾದ ನಿಮಿತ್ತ ಈಗ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಆರೋಪಿಸಿದರು.

* * 

ಹಿಂದೂಗಳ ರಕ್ಷಣೆ ಮಾಡುವ ಕೆಲಸ ರಾಜ್ಯ ಸರ್ಕಾರದಿಂದ ಆಗುತ್ತಿಲ್ಲ. ನಮ್ಮ ಬೇಡಿಕೆಗಳು ಈಡೇರದಿದ್ದರೆ ಜನವರಿಯಲ್ಲಿ ಬೇರೆ ಬೇರೆ ಹಂತದಲ್ಲಿ ಹೋರಾಟ ನಡೆಸಲಾಗುವುದು.

ಕೆ.ಜಿ.ನಾಯ್ಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry