7

ವಲಸೆ ಪ್ರವೃತ್ತಿಯಿಂದ ನೆಲದ ಸಂಸ್ಕೃತಿ ಕಣ್ಮರೆ

Published:
Updated:

ಸೋಮವಾರಪೇಟೆ: ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದರು. ಇಲ್ಲಿನ ಕೊಡವ ಸಮಾಜದ ವತಿಯಿಂದ ಸೋಮವಾರ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಪುತ್ತರಿ ಊರೋರ್ಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಕರು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಶಿಕ್ಷಣದ ಅವಧಿಯಲ್ಲಿ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕಿದೆ. ಸಮಾಜದ ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ವೀರ ಸೈನಿಕರ ಸಾಧನೆಗಳನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ತಿಳಿ ಹೇಳಬೇಕಿದೆ. ಐಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗೇರಲು ಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂದು ಕರೆ ನೀಡಿದರು.

‘ಕೊಡಗಿನಲ್ಲಿ ಸಮಾಜದವರು ಕೃಷಿಯಿಂದ ನಷ್ಟ ಹಾಗೂ ಬೇರಾವುದೇ ಕಾರಣ ನೀಡಿ ತಮ್ಮ ಕೃಷಿ ಭೂಮಿಯನ್ನು ಅನ್ಯರಿಗೆ ಮಾರಾಟ ಮಾಡಿ ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದರಿಂದ ನಮ್ಮ ಮೂಲ ಸಂಸ್ಕೃತಿ ನಾಶವಾಗುತ್ತಿದೆ. ಆಸ್ತಿಯನ್ನು ಯಾವುದೇ ಕಾರಣಕ್ಕೂ ಹೊರ ಜಿಲ್ಲೆ ಹಾಗೂ ರಾಜ್ಯದವರಿಗೆ ಮಾರಾಟ ಮಾಡಬಾರದು. ಆದಾಯ ಕಡಿಮೆ ಇದ್ದರೂ ಸ್ವಂತ ದುಡಿಮೆಯಿಂದ ಆಸ್ತಿಯನ್ನು ಉಳಿಸಿಕೊಳ್ಳಲು ಎಲ್ಲರೂ ಮುಂದಾಗಬೇಕು’ ಎಂದು ಮನವಿ ಮಾಡಿದರು.

ಸೋಮವಾರಪೇಟೆ ಕೊಡವ ಸಮಾಜದ ಅಭಿವೃದ್ಧಿಗೆ ₹ 2.5 ಲಕ್ಷ ಅನುದಾನ ಹಾಗೂ ಸಮಾಜದ ವಿದ್ಯಾನಿಧಿಗೆ ವೈಯಕ್ತಿಕವಾಗಿ ₹ 25 ಸಾವಿರ ಧನ ಸಹಾಯ ನೀಡುವ ಭರವಸೆ ನೀಡಿದರು.

ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಮಾತನಾಡಿ, ಕೊಡವ ಭಾಷಿಕರು ಕಡಿಮೆ ಆಗುತ್ತಿರುವುದರಿಂದ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲ ಕೊಡವ ಸಮಾಜಗಳು ಹಾಗೂ ಒಕ್ಕೂಟಗಳು ಒಗ್ಗಟ್ಟಿನಿಂದ ಹೋರಾಡಬೇಕು ಎಂದರು.

ಮಹಿಳಾ ಘಟಕದ ಅಧ್ಯಕ್ಷೆ ಬಾಚಿನಾಡಂಡ ರೀಟಾ ಕುಶಾಲಪ್ಪ ಉಪಸ್ಥಿತರಿದ್ದರು. ಸಮಾಜದ ಹಿರಿಯ ಸದಸ್ಯರಾದ ಕೆ. ಅಯ್ಯಪ್ಪ ಮತ್ತು ಕಲ್ಲೇಂಗಡ ಅಪ್ಪಚ್ಚು ಅವರನ್ನು ಸನ್ಮಾನಿಸಲಾಯಿತು.

ಎಸ್ಎಸ್ಎಲ್‌ಸಿ, ಪಿಯುಸಿ, ಪದವಿ, ತಾಂತ್ರಿಕ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಅತ್ಯಧಿಕ ಅಂಕಗಳಿಸಿದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.

ಗರ್ವಾಲೆಯ ಬೊಟ್ಲಪ್ಪ ಯುವಕ ಸಂಘದ ಬೊಳಕ್ಕಾಟ್, ಕೋಲಾಟ ಉಮ್ಮತ್ತಾಟ್, ಪರೆಯಕಳಿ ಹಾಗೂ ಸೋಮವಾರಪೇಟೆ ಕೊಡವ ಸಮಾಜದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry