7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಜಿಲ್ಲೆಯ ವಿವಿಧೆಡೆ ಶಾಂತಿದೂತನ ಸ್ಮರಣೆ

Published:
Updated:

ಕೋಲಾರ: ಕ್ರೈಸ್ತ ಸಮುದಾಯದವರು ನಗರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ  ಕ್ರಿಸ್‌ಮಸ್‌ ಅನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆಯಿಂದಲೇ ಚರ್ಚ್‌ಗಳಿಗೆ ಕುಟುಂಬ ಸಮೇತ ತೆರಳಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿದರು. ಮೆಥೋಡಿಸ್ಟ್ ಹಾಗೂ ಮೇರಿಯಮ್ಮ ಚರ್ಚ್ ಆವರಣದಲ್ಲಿ ನಿರ್ಮಿಸಿರುವ ಕಣ್ಮನ ಸೆಳೆಯುವ ಗೋದಲಿಯ ದೀಪಾಲಂಕಾರ ವೀಕ್ಷಿಸಲು ಬೇರೆಬೇರೆ ಸಮುದಾಯಗಳ ಜನರು ಬರುತ್ತಿರುವುದು ಕಂಡುಬಂತು.

ಮಕ್ಕಳು, ಯುವಕ, ಯುವತಿಯರು ಹೊಸ ಬಟ್ಟೆ ಧರಿಸಿ ಚರ್ಚ್‌ಗಳಿಗೆ ಬಂದಿದ್ದರು. ಇಟಿಸಿಎಂ ಕಾಲೇಜಿನ ವಿದ್ಯಾರ್ಥಿಗಳು ಸಹ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಂಜೆ ನಗರದ ಚರ್ಚ್‌ಗಳಲ್ಲಿ ಸೌಹಾರ್ದ ಮಿಲನ ಮತ್ತು ಜನಪದ ನೃತ್ಯ ಕಾರ್ಯಕ್ರಮ

ನಡೆಯಿತು.

ಕ್ರೈಸ್ತರ ಮನೆಗಳಲ್ಲಿ ಬಾಲ ಯೇಸುವಿನ ಜನ್ಮ ವೃತ್ತಾಂತ ಸಾರುವ ಗೋದಲಿ ನಿರ್ಮಿಸಿದ್ದರು. ವಿದ್ಯುತ್‌ ದೀಪಾಲಂಕಾರ ಮಾಡಿದ್ದರು. ಪ್ರತಿ ಮನೆಯಲ್ಲೂ ಹಬ್ಬದ ಸಂಭ್ರಮದ ಕಳೆಕಟ್ಟಿತ್ತು. ಮೆಥೋಡಿಸ್ಟ್‌ ಚರ್ಚ್‌ನ ಫಾದರ್ ರೆವಡೆಂಟ್ ಮೇಷಕ್ ಮಾತನಾಡಿ, ‘ಆಚರಣೆ ವಿಭಿನ್ನವಾದರೂ ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ’ ಎಂದು ಹೇಳಿದರು.

ಯೇಸು ಜಗತ್ತಿಗೆ ಶಾಂತಿ ಸಂದೇಶ ನೀಡಿದರು. ಮನುಷ್ಯ ಧರ್ಮ ದೊಡ್ಡದು. ಮನುಷ್ಯ–ಮನುಷ್ಯರ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಇರಬೇಕು. ಮನುಷ್ಯನಿಗೆ ದ್ರೋಹ ಮಾಡುವುದು ದೇವರಿಗೆ ದ್ರೋಹ ಮಾಡಿದಂತೆ ಎಂಬ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.

ಧರ್ಮದ ಅರ್ಥ ಬಹಳ ವಿಶಾಲವಾಗಿದೆ. ಮಾನವೀಯ ಮೌಲ್ಯ ಇರುವ ಕಡೆ ಧರ್ಮ ಇರುತ್ತದೆ. ಧರ್ಮ ಸನ್ಮಾರ್ಗ ಕಲಿಸಿಕೊಡುತ್ತದೆ ಹೊರತು ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ ಎಂದು ತಿಳಿಸಿದರು.

ಮನುಷ್ಯನಲ್ಲಿ ಕ್ಷಮಾಗುಣ ಇರಬೇಕು. ಧರ್ಮಗಳ ವಿಚಾರದಲ್ಲಿ ಸಂಕುಚಿತ ಮನೋಭಾವ ಇರಬಾರದು. ಎಲ್ಲ ಧರ್ಮಗಳನ್ನು ಗೌರವದಿಂದ ಕಾಣಬೇಕು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಸಲಹೆ ನೀಡಿದರು.

ಸಂಜೆ ಚರ್ಚ್‌ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ತಾಲ್ಲೂಕಿನ ಈಲಂ, ಬೆತ್ತನಿ, ನಡುಪಲ್ಲಿ, ವೇಮಗಲ್ ಗ್ರಾಮಗಳಲ್ಲೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಎಲ್ಲೆಡೆ ಕ್ರಿಸ್‌ಮಸ್ ಟ್ರೀಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಕಳ್ಳತನಕ್ಕೆ ಯತ್ನ: ವಿಫಲ

ನಗರದ ಟಮಕ ಕೆಯುಡಿಎ ಬಡಾವಣೆಯಲ್ಲಿರುವ ಇಮ್ಯಾನ್ಯುಯಲ್ ಫೆಲೋಶಿಪ್ ಚರ್ಚ್‌ನ ಕಿಟಕಿ ಗಾಜು ಒಡೆದು, ಬಾಗಿಲು ಮುರಿಯಲು ಯತ್ನಿಸಿದ್ದಾರೆ. 3 ದಿನಗಳಿಂದಲೂ ಚರ್ಚ್‌ನ ಸ್ವಚ್ಛತೆ ಮತ್ತಿತರ ಕಾರ್ಯಗಳನ್ನು ಮಾಡಿಕೊಂಡಿದ್ದ ಇಲ್ಲಿನ ಸಿಬ್ಬಂದಿ ಭಾನುವಾರ ರಾತ್ರಿ 8 ಗಂಟೆಗೆ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದಾರೆ.

ಬಳಿಕ ದುಷ್ಕರ್ಮಿಗಳು ತಡರಾತ್ರಿಯಲ್ಲಿ ಬಂದು ಚರ್ಚ್‍ನ ಕಿಟಕಿ ಗಾಜುಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ. ಬಾಗಿಲು ಮುರಿಯಲು ನಡೆಸಿದ ಯತ್ನ ವಿಫಲವಾಗಿದೆ. ಹೀಗಾಗಿ ಹೊರಗಿದ್ದ ವಿದ್ಯುತ್ ಮೀಟರ್‌ ಹಾನಿಗೊಳಿಸಿ ಪರಾರಿಯಾಗಿದ್ದಾರೆ.

ಚರ್ಚ್‌ನಲ್ಲಿ ಕಳ್ಳತನ ಮಾಡಲು ಯತ್ನಿಸಿರುವ ದುಷ್ಕರ್ಮಿಗಳು ಪ್ರಯತ್ನ ವಿಫಲವಾಗಿರುವ ಕಾರಣ ಕಿಟಿಕಿ ಗಾಜು ಒಡೆದು ಕೃತ್ಯ ಎಸಗಲಾಗಿದೆ ಎಂದು ಗಲ್‌ಪೇಟೆ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry