ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಲು ದಾರಿಗೆ ‘ಕಪ್ಪು–ಬಿಳುಪು’ ತಿರುವು!

Last Updated 26 ಡಿಸೆಂಬರ್ 2017, 14:08 IST
ಅಕ್ಷರ ಗಾತ್ರ

ಹೇಮಂತ್‌ ರಾವ್‌ ನಿರ್ದೇಶನದ ’ಕವಲು ದಾರಿ’ ಆರಂಭದ ಹಂತದಿಂದಲೂ ಸುದ್ದಿ ಮಾಡುತ್ತಲೇ ಇದೆ. ಆಗಾಗ ಒಂದೊಂದೇ ಪಾತ್ರಗಳ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುತ್ತಾ ಚಿತ್ರದ ಬಗ್ಗೆ ಕುತೂಹಲ ಮೂಡಿಸುವ ಕೆಲಸವನ್ನೂ ಮಾಡುತ್ತಿದೆ. ಈ ಮೊದಲು ಚಿತ್ರದ ಶೀರ್ಷಿಕೆಯೊಟ್ಟಿಗೆ ನಾಯಕ ರಿಷಿಯ ಪೋಸ್ಟರ್‌, ನಂತರ ಅನಂತ್‌ ನಾಗ್‌ ಅವರ ಪೋಸ್ಟರ್‌ ಮೂಲಕ ಸುದ್ದಿ ಮಾಡಿತ್ತು. ಇತ್ತೀಚೆಗೆ ಮೈಸೂರಿನಲ್ಲಿ ಮೊದಲ ಹಂತದ ಶೆಡ್ಯೂಲ್‌ ಮುಗಿಸಿ ಅದರ ಟ್ರೇಲರ್ ಅನ್ನೂ ಚಿತ್ರತಂಡ ಬಿಡುಗಡೆ ಮಾಡಿತ್ತು.

ಇದೀಗ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆಗಳು ಆರಂಭವಾಗುತ್ತಿವೆ. ಇದರ ಜತೆಗೇ ಇನ್ನೆರಡು ಪಾತ್ರಗಳ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗಿದೆ. ‘ಮಿಸ್ಟರ್‌ ಆ್ಯಂಡ್‌ ಮಿಸಸ್ ನಾಯ್ಡು’ ಅವರ ಕಪ್ಪುಬಿಳುಪು ಚಿತ್ರ ಕುತೂಹಲ ಹುಟ್ಟಿಸುವಂತಿದೆ.

‘ಕವಲು ದಾರಿ’ ಒಂದು ಕೊಲೆ ರಹಸ್ಯದ ಕಥೆಯುಳ್ಳ ಚಿತ್ರ ಎಂಬುದು ಮೊದಲೇ ಸುದ್ದಿಯಾಗಿತ್ತು. ಆದರೆ ಆ ಕಥೆ ಎಪ್ಪತ್ತದ ದಶಕಕ್ಕೂ ಒಮ್ಮೆ ಹಿಂಜಿಗಿತ ಪಡೆದುಕೊಳ್ಳುತ್ತದೆ ಎಂಬ ಸಂಗತಿಯನ್ನು ಹೊಸ ಪಾತ್ರಗಳೇ ಹೇಳುತ್ತಿವೆ. ಇದನ್ನು ಸ್ವತಃ ನಿರ್ದೇಶಕ ಹೇಮಂತ್‌ ಅವರೂ ಸ್ಪಷ್ಟಪಡಿಸುತ್ತಾರೆ.

‘ಚಿತ್ರದಲ್ಲಿ ಎಪ್ಪತ್ತರ ದಶಕದಲ್ಲಿ ನಡೆಯುವ ಒಂದು ಪ್ರಸಂಗ ಇದೆ. ಮಿಸ್ಟರ್‌ ಆ್ಯಂಡ್‌ ಮಿಸಸ್ ನಾಯ್ಡು ಅಂತ ಸರ್ಕಾರಿ ಅಧಿಕಾರಿಗಳು ಇರುತ್ತಾರೆ. ಅವರು ಒಂದು ಅಪರಾಧದಲ್ಲಿ ಪಾಲ್ಗೊಂಡಿರುತ್ತಾರೆ. ಆ ಅಪರಾಧಕ್ಕೂ ಇಂದು ನಡೆಯುತ್ತಿರುವ ಸಿನಿಮಾ ಕಥೆಗೂ ಸಂಬಂಧ ಇದೆ. ಅದರ ವಿಚಾರಣೆಯ ಸುತ್ತಲೇ ಚಿತ್ರ ಬೆಳೆಯುತ್ತ ಹೋಗುತ್ತದೆ’ ಎನ್ನುತ್ತಾರೆ ನಿರ್ದೇಶಕರು.

‘ಶುದ್ಧಿ’ ಸಿನಿಮಾದಲ್ಲಿ ಗಮನಸೆಳೆದಿದ್ದ ಸಿದ್ಧಾರ್ಥ್‌ ಮಾಧ್ಯಮಿಕ ಮಿ. ನಾಯ್ಡು ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪತ್ನಿಯಾಗಿ ಸಮನ್ವಿತಾ ಶೆಟ್ಟಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿಯೇ ಸಿದ್ಧಾರ್ಥ ಹದಿನೈದು ಕೆ.ಜಿ. ದಪ್ಪ ಆಗಿದ್ದಾರೆ.

ಸುಮ್ಮನೇ ತೋರಿಕೆಗಾಗಿ ಕಥೆಯನ್ನು ಹಳೆಯ ಕಾಲಕ್ಕೆ ಜೋಡಿಸುವುದು ಹೇಮಂತ್‌ಗೆ ಇಷ್ಟವಿಲ್ಲ. ನಾವು ತೆರೆಯ ಮೇಲೆ ತೋರಿಸಿದ್ದು ಅಧಿಕೃತ ಅನಿಸಬೇಕು ಎನ್ನುವುದು ಅವರ ಅಭಿಲಾಷೆ.

‘ಸಾಮಾನ್ಯವಾಗಿ ಹೀಗೆ ಹಳೆಯ ಕಾಲವನ್ನು ತೋರಿಸುವಾಗ ಸುಮ್ಮನೆ ಬೆಲ್‌ ಬಾಟಮ್‌ ಪ್ಯಾಂಟ್‌ ಮತ್ತು ಷರ್ಟ್‌ ಇಟ್ಟುಬಿಡುತ್ತಾರೆ. ಆದರೆ ನಮಗೆ ಹಾಗೆ ಮಾಡುವುದು ಇಷ್ಟ ಇರಲಿಲ್ಲ. ಅದನ್ನು ನೋಡಿದ ತಕ್ಷಣ ಆ ಕಾಲದ್ದು ಎಂದು ಅಥೆಂಟಿಕ್‌ ಆಗಿ ಅನಿಸಬೇಕು. ಇದಕ್ಕಾಗಿ ವಸ್ತ್ರ ವಿನ್ಯಾಸಕಿಯರಾದ ಇಂಚರಾ ಮತ್ತು ವಿನಯಾ ಇಬ್ಬರೂ ತುಂಬ ಸಂಶೋಧನೆ ಮಾಡಿ ರೂಪಿಸಿದ್ದಾರೆ’ ಎಂದು ವಿವರಿಸುತ್ತಾರೆ ಹೇಮಂತ್‌.

ಇಡೀ ಚಿತ್ರದಲ್ಲಿ ಎಪ್ಪತ್ತರ ದಶಕದ ಕಥೆ ಸುಮಾರು ಅರ್ಧಗಂಟೆ ಬರಲಿದೆಯಂತೆ. ಆದರೆ ಇಡೀ ಚಿತ್ರದ ಕಥೆಯೇ ಆ ಅರ್ಧಗಂಟೆಯ ಸುತ್ತ ಸುತ್ತುತ್ತದಂತೆ. ಪ್ರತಿಯೊಂದು ಹಂತದಲ್ಲಿಯೂ ನಿರೀಕ್ಷೆಯನ್ನು ಹೆಚ್ಚಿಸುತ್ತಲೇ ಹೋಗುತ್ತಿರುವ ‘ಕವಲು ದಾರಿ’ ಸಿನಿಮಾವನ್ನು ನಟ ಪುನೀತ್‌ ರಾಜ್‌ಕುಮಾರ್ ನಿರ್ಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT