ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಮ್ಮೆ ಮಾಡಿ ನೋಡಿ; ಹುಡುಗರು ಫಿದಾ ಆಗ್ದಿದ್ರೆ ಕೇಳಿ

Last Updated 26 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬಯಸುವ ಹುಡುಗಿಯನ್ನು ಮೆಚ್ಚಿಸಲು ಏನು ಮಾಡಬೇಕು ಎಂಬುದರ ಕುರಿತಾಗಿಯೇ ಇಪ್ಪತ್ನಾಲ್ಕು ಗಂಟೆಯೂ ಯೋಚಿಸುವ ಬಡಪಾಯಿ ಹುಡುಗರಿಗೆ ನಾನು ಅವಳಿಂದ ಏನನ್ನು ಬಯಸುತ್ತಿದ್ದೇನೆ ಎಂಬ ಪ್ರಶ್ನೆ ಕೇಳಿಕೊಳ್ಳಲು ಸಮಯವೇ ಸಿಗುವುದಿಲ್ಲ. ‘ಹುಡುಗ ಅಂದರೆ ಕೊಡುವವನು, ಹುಡುಗಿ ಅಂದರೆ ಪಡೆದುಕೊಳ್ಳುವವಳು’ ಎಂಬ ಜನಪ್ರಿಯ ಆದರೆ ತಪ್ಪು ವ್ಯಾಖ್ಯಾನವೊಂದು ನಮ್ಮ ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿದೆ.

ಹುಡುಗರ ಈ ‘ಮೆಚ್ಚಿಸುವ’ ಲಗಾಟಿ ಕಸರತ್ತುಗಳಿಗೆ ಅರ್ಧವಿರಾಮ ಸಿಗುವುದು ಹುಡುಗಿ ಪ್ರೀತಿಯನ್ನು ಒಪ್ಪಿಕೊಂಡ ಮೇಲೆ. ತನ್ನೊಟ್ಟಿಗೆ ಬದುಕು ಹೆಣೆದುಕೊಳ್ಳುವ ಹುಡುಗಿ ಹೇಗಿರಬೇಕು ಎಂಬ ಬಗ್ಗೆ ಅವರಿಗೆ ಯೋಚಿಸಲು ಪುರಸೊತ್ತು ಸಿಗುವುದೂ ಆಗಲೇ. ಆಗ ಅವರಿಗೆ ಗೊತ್ತಿಲ್ಲದೆಯೇ ಮನಸ್ಸಿನಲ್ಲಿ ಇಷ್ಟಾನಿಷ್ಟಗಳ ಒಂದು ಪಟ್ಟಿ ಸಿದ್ಧವಾಗಿಬಿಟ್ಟಿರುತ್ತದೆ. ಸಾಮಾನ್ಯವಾಗಿ ಆ ಪಟ್ಟಿಯ ಮುಖ್ಯಾಂಶಗಳು ಹೇಗಿರುತ್ತವೆ?

* ಸತ್ಯವನ್ನೇ ಹೇಳಿ: ತಾನು ಮೆಚ್ಚುವ ಹುಡುಗಿ ನನ್ನನ್ನು ಸಂಪೂರ್ಣ ನಂಬುತ್ತಾಳೆ. ಅವಳು ನನ್ನ ಮೇಲೆ ಪೂರ್ತಿ ಅವಲಂಬಿತಳಾಗಿದ್ದಾಳೆ ಎಂಬ ಭಾವನೆಯನ್ನು ಬಹುತೇಕ ಎಲ್ಲ ಹುಡುಗರೂ ಹೆಮ್ಮೆಯಿಂದ ಅನುಭವಿಸುತ್ತಾರೆ. ಸಣ್ಣ ಸುಳ್ಳು ಹೇಳಿದರೂ ಅವರಿಗದು ದ್ರೋಹವಾಗಿ ಕಾಣುತ್ತದೆ. ಆದ್ದರಿಂದ ಸತ್ಯವನ್ನೇ ಹೇಳಿ ಅಥವಾ ಹುಡುಗರಿಗೆ ಸತ್ಯ ಎಂದೇ ಅನಿಸುವಂಥ ಸುಳ್ಳುಗಳನ್ನು ಹೇಳಿ.

* ಕುಟುಂಬದ ಭಾಗವಾಗುವ ಭರವಸೆ ನೀಡಿ: ಹುಡುಗರಿಗೆ ತಮ್ಮ ಪ್ರೇಯಸಿಯ ಬಗ್ಗೆ ಇರುವ ಒಂದು ದೊಡ್ಡ ಹೆದರಿಕೆ ‘ನಮ್ ಮನೆಯವರ ಜತೆ ಹೊಂದಿಕೊಳ್ತಾಳೋ ಇಲ್ವೋ’ ಎನ್ನುವುದು. ತನ್ನ ಮನೆಯವರೊಟ್ಟಗೆ ಮನೆಯವಳಾಗಿ, ಅಪ್ಪ–ಅಮ್ಮ, ಸಹೋದರರ ಪ್ರೀತಿ ಗಳಿಸಿಕೊಳ್ಳಬಲ್ಲಳು, ಕುಟುಂಬದ ಕಷ್ಟಕ್ಕೆ ಮಿಡಿಯಬಲ್ಲಳು ಎಂದು ಮನವರಿಕೆಯಾದರೆ ಅವರು ಯಾವಾಗಲೂ ಕೃತಜ್ಞರಾಗಿರುತ್ತಾರೆ.

* ಪೋಲಿ ಮಾತಿಗೆ ನಕ್ಕು ಸುಮ್ಮನಿರಿ: ಪ್ರೇಮದ ಸಲಿಗೆಯಲ್ಲಿ ಪೋಲಿ ಮಾತಾಡುವುದರಲ್ಲಿ ಗಂಡುಮಕ್ಕಳೇ ಮುಂದು. ತಾನು ಆಡುವ ಪೋಲಿ ಮತ್ತು ದ್ವಂದ್ವಾರ್ಥದ ಮಾತುಗಳು ಒಂದೇ ಏಟಿಗೆ ತನ್ನ ಗೆಳತಿಗೆ ಅರ್ಥವಾಗುವುದಿಲ್ಲ ಎನ್ನುವುದೂ ಹುಡುಗರಿಗೆ ಒಳಗೊಳಗೇ ಖುಷಿಕೊಡುತ್ತದೆ. ಅಂಥ ಮಾತನ್ನು ಕೇಳಿ ಅವಳು ನಾಚಿಕೊಳ್ಳುವುದನ್ನು ನೋಡುವುದೇ ಅವರಿಗೆ ಸಂಭ್ರಮ. ಹಾಗಂತ ಅಂಥದ್ದೇ ಒಂದೆರಡು ಪೋಲಿ ಮಾತನ್ನು ಹುಡುಗಿಯೂ ಆಡಿಬಿಟ್ಟಳೋ, ಅಲ್ಲಿಗೆ ಮುಗೀತು. ಹುಡುಗನಿಗೆ ಒಳಗೊಳಗೇ ಸಂಕಟ ಶುರು. ಇವೆಲ್ಲ ಇವಳು ಎಲ್ಲಿ ಕಲಿತಳು? ಯಾರ ಜತೆ ಹೀಗೆ ಮಾತಾಡುತ್ತಾಳೆ? ಎಂಬೆಲ್ಲ ಅನುಮಾನಗಳು ಮನಸ್ಸಿನ ಹುತ್ತದಲ್ಲಿ ಹೆಡೆಯಾಡಿಸಲು ಶುರು ಮಾಡುತ್ತವೆ. ನಂತರದ ಪರಿಸ್ಥಿತಿ ಹೇಳಬೇಕಿಲ್ಲವಲ್ಲ.

* ಉಡುಗೊರೆಯನ್ನು ಒಮ್ಮೆಲೇ ತೆಗೆದುಕೊಳ್ಳಬೇಡಿ: ಸಾಮಾನ್ಯವಾಗಿ ನಿಮ್ಮ ಇನಿಯ ಯಾವುದಾದರೂ ಉಡುಗೊರೆಯನ್ನು ತಂದುಕೊಟ್ಟರೆ ಅದಕ್ಕಾಗಿಯೇ ಕಾದಿದ್ದವರಂತೆ ಗಬಕ್ಕನೆ ತೆಗೆದುಕೊಂಡುಬಿಡಬೇಡಿ. ಕೊಂಚ ತಾಳಿ. ‘ಛೇ, ಇದೆಲ್ಲ ಯಾಕೋ ತಂದೆ? ನಾನೇನು ಕೇಳಿದ್ನಾ? ಎಷ್ಟೊಂದು ಹಣ ಖರ್ಚು?’ ಅಂತೆಲ್ಲ ಒಂಚೂರು ಬಿನ್ನಾಣದ ಮಾತುಗಳನ್ನು ಆಡಿದ ನಂತರವೇ ತೆಗೆದುಕೊಳ್ಳಿ.

* ಆಗೀಗ ನೀವೂ ಒಂದೊಂದು ಉಡುಗೊರೆ ಕೊಡಿ: ಆಗೀಗ ನೀವೂ ಚಿಕ್ಕಪುಟ್ಟ ಉಡುಗೊರೆ ಕೊಡುತ್ತಿರಿ. ಅದು ಚಿಕ್ಕದೇ ಆದರೂ ನೀವು ಅವರನ್ನು ಇಷ್ಟಪಡುತ್ತಿದ್ದೀರಿ ಎಂಬುದನ್ನು ಮನವರಿಕೆ ಮಾಡಲು ಅದು ತುಂಬ ಅವಶ್ಯ.

* ಹೊತ್ತಲ್ಲದ ಹೊತ್ತಲ್ಲಿ ಫೋನ್‌ ಮಾಡಿ ಸ್ವಲ್ಪ ಕಾಡಿ: ಸಾಮಾನ್ಯವಾಗಿ ದಿನವೂ ಫೋನ್‌ನಲ್ಲಿ ಮಾತಾಡುತ್ತಿರುವುದು, ಚಾಟ್‌ ಮಾಡುವುದು ಇದ್ದೇ ಇರುತ್ತದೆ. ಆದರೆ ಅದನ್ನು ಮೀರಿ ಹೊತ್ತಲ್ಲದ ಹೊತ್ತಿನಲ್ಲಿ ಅಚಾನಕ್‌ ಆಗಿ ಫೋನ್‌ ಮಾಡಿ ‘ನಿನ್ನ ನೆನಪಾಗ್ತಿದೆ ಕಣೋ’ ‘ಈಗಿಂದಿಗ್ಲೇ ನಿನ್ನ ನೋಡಬೇಕು ಅನಿಸ್ತಿದೆ’ ಎಂದೆಲ್ಲ ಅಲವತ್ತುಕೊಳ್ಳಿ. ಹುಡುಗರಿಗೆ ಅದು ಇಷ್ಟವಾಗುತ್ತೆ.

* ಸ್ಮೈಲ್‌ ಆಯುಧ: ಸುಮ್ಮನೆ ಇಷ್ಟೆಲ್ಲ ಕಸರತ್ತು ಮಾಡುವ ಬದಲು ನಿಮ್ಮ ಹಿಂದಿಂದೆ ಬರುತ್ತಿರುವ ಹುಡುಗರತ್ತ ಸುಮ್ಮನೆ ತಿರುಗಿ ಹೌದೋ ಅಲ್ವೋ ಅಂತ ಸ್ಪಷ್ಟವಾಗಿ ಗೊತ್ತಾಗದಂತೆ ಒಂದು ಸಣ್ಣ ಸ್ಮೈಲ್‌ ಬಿಸಾಕಿ. ತಪಕ್ಕನೇ ಇಂಪ್ರೆಸ್‌ ಆಗಿ ದುಡುಂ ಎಂದು ನೀವು ಹೇಳಿದ ಗುಂಡಿಗೆ ಹಾರಲು ಸಿದ್ಧರಾಗುತ್ತಾರೆ ಹುಡುಗರು. ಹುಡುಗರ ಪಾಲಿಗೆ ಹುಡುಗಿಯರ ಸ್ಮೈಲೇ ಮಾರಣಾಂತಿಕ ಆಯುಧ. ಗುಂಪಿನಲ್ಲಿದ್ದ ಹುಡುಗನತ್ತ ಸ್ಮೈಲ್‌ ಮಾಡುವಾಗ ಸ್ವಲ್ಪ ಹುಶಾರು. ಒಬ್ಬರಿಗೆ ಕೊಟ್ಟ ಸ್ಮೈಲನ್ನು ಹಲವು ಹುಡುಗರು ಎದೆಗೆ ನೆಟ್ಟುಕೊಂಡು ಸಂತ್ರಸ್ತರಾಗಿ ಪರಿಹಾರಕ್ಕಾಗಿ ನಿಮ್ಮ ಹಿಂದೆ ಬೀಳುವ ಅಪಾಯವಿರುತ್ತದೆ.

––: ಟಿಪ್ಪು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT