ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಮಟ್ಟ ಕುಸಿತ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ

Last Updated 26 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಅಂತರ್ಜಲ ಎನ್ನುವುದು ಬ್ಯಾಂಕ್‌ನ ಉಳಿತಾಯ ಖಾತೆ ಇದ್ದಂತೆ. ಆಗಾಗ ಹಣ ಜಮಾ ಮಾಡುತ್ತಿದ್ದರೆ ಮಾತ್ರ ಖಾತೆಯಿಂದ ಹಣ ಹಿಂತೆಗೆದುಕೊಳ್ಳಬಹುದು. ಖಾತೆಯೇ ಖಾಲಿಯಾದರೆ? ಇದೂ ಹಾಗೆ. ನಾವೀಗ ಅಂತರ್ಜಲ ಎಂಬ ಖಾತೆಯನ್ನು ಬರಿದು ಮಾಡುವುದರಲ್ಲಿ ನಿರತರಾಗಿದ್ದೇವೆ. ಮರುಪೂರಣದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಸಿಕೊಂಡಿದ್ದೇವೆ, ಈಗಲೂ ಬಳಸಿಕೊಳ್ಳುತ್ತಿದ್ದೇವೆ. ಅದರ ಕಹಿ ಫಲಗಳು ನಮ್ಮೆಲ್ಲರ ಅನುಭವಕ್ಕೆ ಬರುತ್ತಿವೆ. 40–50 ವರ್ಷಗಳ ಹಿಂದೆ ಭೂಮಿಯನ್ನು ಸ್ವಲ್ಪ ಅಗೆದರೂ ಸಾಕಿತ್ತು. ನೀರು ಉಕ್ಕಿ ಬರುತ್ತಿತ್ತು. ಬಿರು ಬೇಸಿಗೆಯಲ್ಲೂ ನೀರಿಗೆ ತತ್ವಾರ ಇರುತ್ತಿರಲಿಲ್ಲ.

ನಂತರ, ತೆರೆದ ಬಾವಿಗಳ ಬದಲು ಕೊಳವೆ ಬಾವಿಗಳು ಚಾಲ್ತಿಗೆ ಬಂದವು. 80ರ ಉತ್ತರಾರ್ಧದಲ್ಲಿ ನಮ್ಮ ರಾಜ್ಯದ ಬಹುಪಾಲು ಹಳ್ಳಿಗಳಿಗೆ ಕೊಳವೆ ಬಾವಿಗಳಿಂದಲೇ ಕುಡಿಯುವ ನೀರು ಪೂರೈಕೆ ಆಗುತ್ತಿತ್ತು. ನೀರೆತ್ತಲು ಕೈ ಪಂಪ್‌ಗಳೇ ಸಾಕಾಗುತ್ತಿದ್ದವು. ಯಾವಾಗ ಬೇಕಾದರೂ, ಎಷ್ಟು ಹೊತ್ತು ಬೇಕಾದರೂ ನೀರು ಪಡೆಯಬಹುದಾಗಿತ್ತು. ನೀರಾವರಿ ಉದ್ದೇಶದ ಕೊಳವೆ ಬಾವಿಗಳೂ ಅಷ್ಟೇ. 100–150 ಅಡಿ ಕೊರೆದರೆ ಅದೇ ದೊಡ್ಡದು. 8–10 ತಾಸು ನಿರಂತರವಾಗಿ ನೀರು ಮೇಲೆತ್ತಿದ್ದರೂ ಕೊರತೆ ಕಾಣುತ್ತಿರಲಿಲ್ಲ. ಆದರೆ ನಮ್ಮ ದುರಾಸೆ ಹೆಚ್ಚಾದಂತೆ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ದಿನ ಕಳೆದಂತೆ ಭಯಾನಕ ಭವಿಷ್ಯ ಎದುರಾಗುತ್ತಿದೆ.

ಅಂತರ್ಜಲದ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಎಷ್ಟೋ ಕಡೆ ಈಗ 1 ಸಾವಿರ ಅಡಿಗಳಷ್ಟು ಕೊರೆದರೂ ನೀರು ಸಿಗುತ್ತಿಲ್ಲ ಅಥವಾ ಸಿಗುವ ನೀರು ಸಾಲುತ್ತಿಲ್ಲ. ನೆಲದಾಳಕ್ಕೆ ಹೋದಂತೆ ನೀರಿನ ಗುಣಮಟ್ಟ ಕೂಡ ವಿಷಮಿಸುತ್ತಿದೆ. ಕುಡಿಯಲು ಮತ್ತು ಬಳಸಲು ಯೋಗ್ಯವಲ್ಲದ ನೀರಿನಿಂದ ಅಪಾಯವೇ ಹೆಚ್ಚು. ಫ್ಲೋರೈಡ್‌ ಸಮಸ್ಯೆಯೊಂದೇ ಸಾಕು; ಅದನ್ನು ನಿರ್ವಹಿಸಲು ಈಗಲೂ ಏದುಸಿರು ಪಡುತ್ತಿದ್ದೇವೆ. ತೆರೆದ ಬಾವಿಯ ಅಥವಾ ಕೊಳವೆ ಬಾವಿಯ ನೀರನ್ನು ನೇರವಾಗಿ ಕುಡಿಯುವ ದಿನಗಳು ಹೋದವು. ಈಗ ಬಾಟಲಿ ನೀರನ್ನೂ ಕುದಿಸಿ ಬಳಸುವ ಸ್ಥಿತಿ ಬಂದಿದೆ.

ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಈಚೆಗೆ ಬಿಡುಗಡೆ ಮಾಡಿದ ಸಣ್ಣ ನೀರಾವರಿ ಸಮೀಕ್ಷಾ ವರದಿಯಂತೂ ಅನಾಹುತದ ಚಿತ್ರಣವನ್ನೇ ನಮ್ಮೆದುರು ತೆರೆದಿಟ್ಟಿದೆ. ಅಂತರ್ಜಲ ಪರಿಸ್ಥಿತಿ ಅಪಾಯಕಾರಿ ಮಟ್ಟ ತಲುಪಿರುವ ರಾಜ್ಯಗಳಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ ಎಂದು ಅದು ಹೇಳಿರುವುದು ಚಿಂತೆಗೆ ಗುರಿ ಮಾಡಿರುವ ವಿಷಯ. ನಮ್ಮ ರಾಜ್ಯದಲ್ಲಿ ‘70 ಮೀಟರ್‌ಗಿಂತಲೂ ಹೆಚ್ಚು ಆಳ ಕೊರೆದಿರುವ 1.18 ಲಕ್ಷ ಕೊಳವೆ ಬಾವಿಗಳಿವೆ. ಈ ಪೈಕಿ 40,186 ಕೊಳವೆ ಬಾವಿಗಳು 150 ಮೀಟರ್‌ಗಿಂತಲೂ ಹೆಚ್ಚು ಆಳವಾಗಿವೆ’ ಎಂದು ವರದಿ ಹೇಳಿದೆ.

ಆದರೆ ವಾಸ್ತವವಾಗಿ ಕೊಳವೆ ಬಾವಿಗಳ ಸಂಖ್ಯೆ ಇದಕ್ಕಿಂತ ಹಲವು ಪಟ್ಟು ಹೆಚ್ಚು. ಸರ್ಕಾರವೇ ನೀಡಿದ ಅಂಕಿಅಂಶಗಳ ಪ್ರಕಾರ ಪ್ರಸ್ತುತ 10 ಅಶ್ವಶಕ್ತಿ ವರೆಗಿನ ನೀರಾವರಿ ಪಂಪ್‌ಸೆಟ್‌ಗಳ ಸಂಖ್ಯೆಯೇ 19.51 ಲಕ್ಷ. ಗೃಹ ಬಳಕೆ ಮತ್ತು ಕುಡಿಯುವ ನೀರಿನ ಕೊಳವೆ ಬಾವಿಗಳನ್ನು ಇಲ್ಲಿ ಲೆಕ್ಕಕ್ಕೆ ಹಿಡಿದಿಲ್ಲ. ನೀರಾವರಿ ಕೊಳವೆ ಬಾವಿಗಳನ್ನು 500–600 ಅಡಿವರೆಗೆ ಕೊರೆಸುವುದಂತೂ ಸರ್ವೇಸಾಮಾನ್ಯ. ಕೋಲಾರ ಮತ್ತು ಅದರ ಸುತ್ತಲಿನ ಜಿಲ್ಲೆಗಳಲ್ಲಿ 1 ಸಾವಿರ ಅಡಿಗಳಷ್ಟು ಕೊರೆದರೂ ನೀರು ಸಿಗುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನಲ್ಲಿ ಕೆಲವೇ ವಾರಗಳ ಹಿಂದೆ ನೀರಿಗಾಗಿ 700 ಅಡಿಗಳಷ್ಟು ಕೊರೆದದ್ದು ದಾಖಲೆ ಎನಿಸಿಕೊಂಡಿದೆ. ವರ್ಷಕ್ಕೆ 3400 ಮಿ.ಮೀ. ಮಳೆ ಸುರಿಯುವ ಕರಾವಳಿಯಲ್ಲೇ ಈ ಸ್ಥಿತಿ.

ಅಂತರ್ಜಲ ಮರುಭರ್ತಿಯ ಅಗತ್ಯ, ಅನಿವಾರ್ಯ ಇತ್ತೀಚಿನ ವರ್ಷಗಳಲ್ಲಿ ಜನರಿಗೆ ಮನವರಿಕೆ ಆಗುತ್ತಿದೆ ಎನ್ನುವುದು ಒಳ್ಳೆಯ ಬೆಳವಣಿಗೆ. 2012ರ ರಾಷ್ಟ್ರೀಯ ಜಲ ನೀತಿ ಕೂಡ ಜಲ ಸಂಪನ್ಮೂಲದ ರಕ್ಷಣೆ, ಅಭಿವೃದ್ಧಿ, ಸಮರ್ಪಕ ಬಳಕೆಗೆ ಒತ್ತು ಕೊಟ್ಟಿದೆ. ಕೇಂದ್ರ ಸರ್ಕಾರ ಪ್ರಾರಂಭಿಸಿರುವ ‘ಜಲ ಕ್ರಾಂತಿ ಅಭಿಯಾನ’ವು ಜಲಮೂಲಗಳ ರಕ್ಷಣೆಯನ್ನು ಜನಾಂದೋಲನವಾಗಿ ಬೆಳೆಸುವ ಒಂದು ಸ್ವಾಗತಾರ್ಹ ಪ್ರಯತ್ನ. ಆದರೆ ಒಂದು ಮಾತು. ಈಗಾಗಲೇ ನಾವು ಅಂತರ್ಜಲವನ್ನು ವಿವೇಚನೆ ಇಲ್ಲದಂತೆ ಬಳಸಿದ್ದೇವೆ. ಅದಕ್ಕೆ ಕ್ಷಮೆಯೇ ಇಲ್ಲ. ಇನ್ನಾದರೂ ಅದಕ್ಕೊಂದು ಕಡಿವಾಣ ಹಾಕಿಕೊಳ್ಳಬೇಕು. ಅಂತರ್ಜಲದ ಮರುಭರ್ತಿ ನಿತ್ಯ ಬದುಕಿನ ಒಂದು ಭಾಗವಾಗಬೇಕು. ಇಲ್ಲದೇ ಹೋದರೆ ಪಾತಾಳಕ್ಕಿಳಿದರೂ ನೀರು ಸಿಗದ ಪರಿಸ್ಥಿತಿ ಎದುರಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT