7

ವಿದ್ಯುತ್‌ಚಾಲಿತ ರೈಲಿನಿಂದ ಶೇ 50ರಷ್ಟು ಹಣ ಉಳಿತಾಯ

Published:
Updated:
ವಿದ್ಯುತ್‌ಚಾಲಿತ ರೈಲಿನಿಂದ ಶೇ 50ರಷ್ಟು ಹಣ ಉಳಿತಾಯ

1925ರ ಫೆಬ್ರುವರಿ 3, ರೈಲ್ವೆ ಇತಿಹಾಸದಲ್ಲೇ ಮರೆಯಲಾರದ ದಿನ. ಬಾಂಬೆ ವಿ.ಟಿ ಮತ್ತು ಕುರ್ಲಾ ನಡುವೆ ಮೊದಲ ವಿದ್ಯುತ್‌ಚಾಲಿತ ಪ್ಯಾಸೆಂಜರ್‌ ರೈಲು ಸಂಚರಿಸಿದ ದಿನ. 16 ಕಿ.ಮೀ. ಉದ್ದದ ಈ ಮಾರ್ಗವನ್ನು ಅಂದು ಬ್ರಿಟಿಷರು ದೇಶಕ್ಕೆ ಸಮರ್ಪಿಸಿದರು. ಅದರ ನಂತರ ರೈಲು ಮಾರ್ಗಗಳ ವಿದ್ಯುದೀಕರಣ ಯೋಜನೆಗೆ ವೇಗ ಸಿಕ್ಕಿದ್ದು 60ರ ದಶಕದಲ್ಲಿ. ಇಂದಿರಾ ಗಾಂಧಿ ಪ್ರಧಾನಿಯಾದ ನಂತರ ಅದು ಮತ್ತಷ್ಟು ಹೆಚ್ಚಾಯಿತು.

ಇಷ್ಟಾದರೂ ಪೂರ್ಣ ಪ್ರಮಾಣದಲ್ಲಿ ರೈಲು ಮಾರ್ಗಗಳ ವಿದ್ಯುದೀಕರಣ ಆಗಲಿಲ್ಲ. ರಾಷ್ಟ್ರೀಯ ಸರಾಸರಿಯೇ ಶೇ 45ರಷ್ಟು ಇದೆ. ಇದರಲ್ಲಿ ಕರ್ನಾಟಕದ್ದು ಶೇ 19.26ರಷ್ಟು. ನೆರೆಯ ಚಿಕ್ಕ ರಾಜ್ಯ ಕೇರಳದಲ್ಲಿ ಅತಿ ಹೆಚ್ಚು ಅಂದರೆ ಶೇ 83.54ರಷ್ಟು ರೈಲು ಮಾರ್ಗ ವಿದ್ಯುದೀಕರಣ ಆಗಿದೆ!

1992ರ ಮೇ 16ರಂದು ರಾಜ್ಯದಲ್ಲಿ ಮೊದಲ ವಿದ್ಯುತ್‌ಚಾಲಿತ ರೈಲು (ಬೆಂಗಳೂರು–ಚೆನ್ನೈ) ಸಂಚಾರ ಆರಂಭಿಸಿತು. ಅದರ ನಂತರವೂ ರಾಜ್ಯದಲ್ಲಿ ವಿದ್ಯುದೀಕರಣಕ್ಕೆ ಹೆಚ್ಚು ಒತ್ತು ಸಿಗಲಿಲ್ಲ. ಹೀಗಾಗಿ ರಾಷ್ಟ್ರೀಯ ಸರಾಸರಿಯಲ್ಲೂ ಕರ್ನಾಟಕ ಹಿಂದೆ ಬಿದ್ದಿದೆ. ಇತ್ತೀಚೆಗೆ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌, ‘ಮುಂದಿನ ದಿನಗಳಲ್ಲಿ ದೇಶದಲ್ಲಿನ ಎಲ್ಲ ಮಾರ್ಗಗಳನ್ನು ವಿದ್ಯುದೀಕರಣ ಮಾಡಬೇಕಾದ ಅಗತ್ಯ ಇದೆ’ ಎಂದು ಹೇಳಿದ್ದಾರೆ. ಎಲ್ಲ ಮಾರ್ಗಗಳು ವಿದ್ಯುದೀಕರಣ ಆದರೆ, ವಾರ್ಷಿಕ ಸರಾಸರಿ ₹10 ಸಾವಿರ ಕೋಟಿ ಉಳಿಸಬಹುದು ಎನ್ನುವ ಲೆಕ್ಕಾಚಾರ ರೈಲ್ವೆ ಮಂಡಳಿಯದು.

* ದೇಶದಲ್ಲಿ ಎಷ್ಟು ಉದ್ದದ ರೈಲು ಮಾರ್ಗ ಇದೆ?

ಒಟ್ಟು 60 ಸಾವಿರ ಕಿ.ಮೀ. ಉದ್ದದ ರೈಲು ಮಾರ್ಗ ಇದ್ದು, ಅದರಲ್ಲಿ 30,012 ಕಿ.ಮೀ. ಮಾರ್ಗ

ವನ್ನು ವಿದ್ಯುದೀಕರಣ ಮಾಡಲಾಗಿದೆ. ಏಳೆಂಟು ವರ್ಷಗಳಲ್ಲಿಯೇ ಸುಮಾರು 10 ಸಾವಿರ ಕಿ.ಮೀ. ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ.

* ರಾಜ್ಯದಲ್ಲಿನ ರೈಲು ಮಾರ್ಗದ ಒಟ್ಟು ಉದ್ದ ಎಷ್ಟು?

ಒಟ್ಟು 3,559 ಕಿ.ಮೀ. ಉದ್ದದ ರೈಲು ಮಾರ್ಗ ಇದೆ. ಕೆಲವು ಯೋಜನೆಗಳು ಭೂ ಸ್ವಾಧೀನ ಸಮಸ್ಯೆಯಿಂದಾಗಿ ಟೇಕ್‌ಆಫ್‌ ಆಗಿಲ್ಲ. ಹೀಗಾಗಿ ಯೋಜನೆಗಳು ಕುಂಟುತ್ತಾ ಸಾಗಿವೆ.

* ರಾಜ್ಯದಲ್ಲಿ ಎಷ್ಟು ಕಿ.ಮೀ. ಉದ್ದದ ವಿದ್ಯುದೀಕರಣ ಮಾರ್ಗ ಇದೆ?

ಒಟ್ಟು 632 ಕಿ.ಮೀ. ಉದ್ದದ ವಿದ್ಯುದೀಕರಣದ ರೈಲು ಮಾರ್ಗ ಇದೆ.

* ವಿದ್ಯುತ್‌ಚಾಲಿತ ರೈಲಿನಿಂದ ಆನುಕೂಲ ಏನು?

ಪರಿಸರಸ್ನೇಹಿ. ವಿದ್ಯುತ್‌ನಿಂದ ಎಂಜಿನ್‌ ಚಾಲು ಆಗುವ ಕಾರಣ ಮಾಲಿನ್ಯ ಪ್ರಮಾಣ ಸೊನ್ನೆ ಎಂದೇ ಹೇಳಬಹುದು. ಆದರೆ, ಡೀಸೆಲ್‌ ಎಂಜಿನ್‌ನಿಂದ ಪರಿಸರದ ಮೇಲೆ ಅಗಾಧವಾದ ಪರಿಣಾಮ ಉಂಟಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಮಾತ್ರವಲ್ಲ, ರೈಲು ಸಂಚರಿಸುವ ಮಾರ್ಗದ ಅಕ್ಕಪಕ್ಕದ ಪ್ರದೇಶಗಳಲ್ಲಿಯೂ ಮಾಲಿನ್ಯ ಉಂಟಾಗುತ್ತದೆ. ಡೀಸೆಲ್‌ ಎಂಜಿನ್‌ಗೆ ಹೋಲಿಸಿದರೆ, ಎಲೆಕ್ಟ್ರಿಕ್ ಎಂಜಿನ್‌ ಸದ್ದು ಮಾಡುವುದು ಕಡಿಮೆ. ಮಾರ್ಗದ ಸಾಮರ್ಥ್ಯ ಒಳ್ಳೆಯದಿದ್ದರೆ ಎಲೆಕ್ಟ್ರಿಕ್‌ ರೈಲು ವೇಗವಾಗಿಯೇ ಓಡುತ್ತದೆ. ತಕ್ಷಣದ ಪಿಕ್‌ಅಪ್‌ ಅಂತೂ ಜಾಸ್ತಿಯೇ.

* ವಿದ್ಯುತ್‌ಚಾಲಿತ ರೈಲಿನಿಂದಾಗಿ ಹಣ ಉಳಿಸಬಹುದೇ?

22 ಬೋಗಿಯ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರು– ಮೈಸೂರು ನಡುವೆ ಒಮ್ಮೆ ಹೋಗಿ ಬರಲು ಕನಿಷ್ಠ 1,300 ಲೀಟರ್‌ ಹೈಸ್ಪೀಡ್‌ ಡೀಸೆಲ್‌ ಬೇಕಾಗುತ್ತದೆ. 1 ಲೀಟರ್‌ ಡೀಸೆಲ್‌ಗೆ ₹57.20 ಪ್ರಕಾರ ಲೆಕ್ಕ ಹಾಕಿದರೂ ₹74,360 ಆಗುತ್ತದೆ. ಆದರೆ, ಇಷ್ಟೇ ಸಂಖ್ಯೆಯ ಬೋಗಿಯ ರೈಲನ್ನು ವಿದ್ಯುತ್‌ಚಾಲಿತ ಎಂಜಿನ್ ಮೂಲಕ ಓಡಿಸಿದರೆ ಬೇಕಾಗುವುದು ಕೇವಲ 4,000 ಯೂನಿಟ್‌ ವಿದ್ಯುತ್‌. ಇದಕ್ಕೆ ಈಗಿನ ದರದ ಪ್ರಕಾರ ಲೆಕ್ಕ ಹಾಕಿದರೆ ₹30ರಿಂದ 35 ಸಾವಿರ ಆಗುತ್ತದೆ. ಅಂದರೆ ಕನಿಷ್ಠ ಶೇ 50ರಷ್ಟು ಹಣವನ್ನು ಕೇವಲ ಒಂದು ರೈಲಿನ ಓಡಾಟ

ದಿಂದಲೇ ಉಳಿಸಬಹುದು. ಡೀಸೆಲ್‌ ಎಂಜಿನ್‌ನ ನಿರ್ವಹಣಾ ವೆಚ್ಚ ಜಾಸ್ತಿ. ವಿದ್ಯುತ್‌

ಎಂಜಿನ್‌ ರೈಲನ್ನು ಕಡಿಮೆ ಖರ್ಚಿನಲ್ಲೇ ಓಡಿಸಬಹುದು.

* ಒಂದು ಕಿ.ಮೀ. ಉದ್ದದ ವಿದ್ಯುದೀಕರಣ ಯೋಜನೆಗೆ ಖರ್ಚಾಗುವ ವೆಚ್ಚ ಎಷ್ಟು?

₹1.2ರಿಂದ 1.3 ಕೋಟಿ ಖರ್ಚಾಗುತ್ತದೆ.

* ವಿದ್ಯುತ್‌ ಮತ್ತು ಡೀಸೆಲ್‌ ಎಂಜಿನ್‌ ಬೆಲೆ ಎಷ್ಟು?

ಹಳೇ ಮಾದರಿಯ ವಿದ್ಯುತ್‌ ಎಂಜಿನ್‌ ಬೆಲೆ ₹6ರಿಂದ ₹8.5 ಕೋಟಿ. ಇತ್ತೀಚಿನ ಅಂದರೆ 6,100 ಎಚ್‌ಪಿ ಸಾಮರ್ಥ್ಯದ ಎಂಜಿನ್‌ ಬೆಲೆ ₹12.5ರಿಂದ ₹16.5 ಕೋಟಿ ಆಗಲಿದೆ. ಡೀಸೆಲ್‌ ಎಂಜಿನ್‌ಗಳ ಬೆಲೆ ₹13.5ರಿಂದ ₹16.5 ಕೋಟಿ ಆಗಲಿದೆ.

* ನೈರುತ್ಯ ರೈಲ್ವೆ ಎಷ್ಟು ವಿದ್ಯುತ್‌ ಎಂಜಿನ್‌ಗಳನ್ನು ಹೊಂದಿದೆ?

ಒಂದೇ ಒಂದೂ ಇಲ್ಲ. ಬೇರೆ ವಲಯಗಳ ಎಂಜಿನ್‌ಗಳೇ ರಾಜ್ಯದಲ್ಲಿ ಓಡಾಡುತ್ತಿವೆ. ಅವಕ್ಕೆ ಬಾಡಿಗೆ ಕೂಡ ಕೊಡುತ್ತದೆ. ಡೀಸೆಲ್‌ ಎಂಜಿನ್ ಮಾತ್ರ 359 ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry