7

ಸಚಿವ ಅನಂತ್‌ ರಾಜೀನಾಮೆಗೆ ಒತ್ತಾಯ

Published:
Updated:

ರಾಮನಗರ: ‘ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಮತಾ ಸೈನಿಕ ದಳದ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಐಜೂರು ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಸಚಿವ ಹೆಗಡೆ ಅವರ ಅಣಕು ಶವಯಾತ್ರೆ ನಡೆಸಿ, ಪ್ರತಿಕೃತಿ ದಹಿಸಿದರು. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಕೆಲಹೊತ್ತು ವಾಹನ ಸಂಚಾರ ತಡೆದರು.

ಪಕ್ಷದ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ಜಿಲ್ಲಾ ಅಧ್ಯಕ್ಷ ರಾಂಪುರ ನಾಗೇಶ್‌ ಮಾತನಾಡಿ ‘ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅಡಿಯಲ್ಲಿ ಹೆಗಡೆ ಅವರು ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇರುವ ಅವರೇ ಇಂತಹ ಹೇಳಿಕೆ ನೀಡುವುದು ನಾಚಿಕೆಗೇಡು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಾತ್ಯತೀತರು, ಪ್ರಗತಿಪರರ ರಕ್ತ ಯಾವುದೆಂದು ಅವರಿಗೇಗೊತ್ತಿಲ್ಲ ಎಂಬುದಾಗಿ ತುಚ್ಛವಾಗಿ ಮಾತನಾಡಿರುವುದು ಇಡೀ ಸಮಾಜಕ್ಕೆ ಮಾಡಿದ ಅವಮಾನವಾಗಿದೆ. ಇದು ಕೇವಲ ಹೆಗಡೆ ಒಬ್ಬರ ಹೇಳಿಕೆಯಲ್ಲ. ಸಂಘ ಪರಿವಾರ, ಬಿಜೆಪಿಯು ಸಂವಿಧಾನ ವಿರೋಧಿ ನೀತಿ ಹೊಂದಿರುವುದನ್ನುತೋರಿಸುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆಗಡೆ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೆಪಿಸಿಸಿ ರಾಮನಗರ ಉಸ್ತುವಾರಿ ಟಿ.ಶಿವಕುಮಾರ್, ಲಿಂಗರಾಜ ತುಮಕೂರು, ಮಲ್ಲಿಕಾರ್ಜುನ, ಶಿವಲಿಂಗಮೂರ್ತಿ, ಶಿವಲಿಂಗಯ್ಯ, ಮಾರುತಿ, ನಲ್ಲಹಳ್ಳಿ ಶಿವು, ಆರ್.ಸಿ.ಮರಿಯಪ್ಪ, ನಿಂಗೇಶ್, ವೆಂಕಟಸ್ವಾಮಿ, ಶಿವಕುಮಾರಸ್ವಾಮಿ ಇದ್ದರು. ಸಮತಾ ಸೈನಿಕ ದಳ: ಸಚಿವ ಅನಂತಕುಮಾರ ಹೆಗಡೆ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಸಮತಾ ಸೈನಿಕ ದಳದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಜಿ. ಗೋವಿಂದಯ್ಯ ಮಾತನಾಡಿ ‘ಹೆಗಡೆ ಅವರು ಕೇಂದ್ರ ಸಚಿವ ಸ್ಥಾನದಂತಹ ಜವಾಬ್ದಾರಿ ಹುದ್ದೆಯಲ್ಲಿದ್ದುಕೊಂಡು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಇಷ್ಟಾಗಿಯೂ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದನ್ನು ನೋಡಿದರೆ ಅವರ ಹೇಳಿಕೆಗೆ ಸಹಮತ ಇರುವಂತೆ ಕಾಣುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನಪ್ರತಿನಿಧಿಯಾಗಿ, ಕೇಂದ್ರ ಸಚಿವರಾಗಿ ಸಂವಿಧಾನವನ್ನು ಗೌರವಿಸುವುದು ಹೆಗಡೆ ಅವರ ಕರ್ತವ್ಯ. ಆದರೆ, ಸಂವಿಧಾನ ಹಾಗೂ ಇಡೀ ಜಾತ್ಯತೀತ ವ್ಯವಸ್ಥೆಯನ್ನೇ ಅವಮಾನಿಸಿರುವ ಅವರು ಸಚಿವ ಸ್ಥಾನದಲ್ಲಿ ಮುಂದುವರೆಯಲು ಅನರ್ಹರು. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಲಕ್ಷ್ಮಣ್, ಚಂದ್ರು, ಕಾಳರಾಜು, ಮುತ್ತುರಾಜು, ಬೈರಾಜು, ಹೇಮಂತ್, ಕಿರಣ್, ಶಿವಣ್ಣ, ಶಿವಲಿಂಗಯ್ಯ, ಗೋಪಾಲ್ ಸುರೇಶ್, ಪುಟ್ಟಸ್ವಾಮಿ, ಸುರೇಶ್, ಶ್ರೀಕಂಠ, ಸಂಜೀವ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry