7

ಚಳಿಗಾಲದಲ್ಲೇ ದಾಳಿ ಇಟ್ಟ ಮಂಗನಕಾಯಿಲೆ

Published:
Updated:
ಚಳಿಗಾಲದಲ್ಲೇ ದಾಳಿ ಇಟ್ಟ ಮಂಗನಕಾಯಿಲೆ

ಶಿವಮೊಗ್ಗ: ಆರು ದಶಕಗಳಲ್ಲಿ 790 ಜನರನ್ನು ಬಲಿ ಪಡೆದ ಮಂಗನಕಾಯಿಲೆ (ಕೆಎಫ್‌ಡಿ– ಕ್ಯಾಸನೂರು ಫಾರೆಸ್ಟ್ ಡಿಸೀಸ್) ಈ ಬಾರಿ ಚಳಿಗಾಲದಲ್ಲೇ ಹರಡುತ್ತಿದೆ. ಮಲೆನಾಡು ಭಾಗದಲ್ಲಿ ಈ ಕಾಯಿಲೆ ಸಾಮಾನ್ಯವಾಗಿ ಬೇಸಿಗೆ ಆರಂಭದಲ್ಲಿ (ಮಾರ್ಚ್‌, ಏಪ್ರಿಲ್‌) ಕಾಣಿಸಿಕೊಂಡು ಮಳೆ ಆರಂಭವಾಗುತ್ತಿದ್ದಂತೆ ಕಡಿಮೆಯಾಗುತ್ತಿತ್ತು. ಆದರೆ, ಈ ಬಾರಿ ತೀರ್ಥಹಳ್ಳಿ ತಾಲ್ಲೂಕು ಗಂಟೆಜನಗಲ್ಲು, ದೇವರಕೊಪ್ಪ, ಸುವರ್ಣಕೊಪ್ಪ, ಸುರುವಿನ ಮನೆ ಗ್ರಾಮಗಳ 21 ಜನರಲ್ಲಿ ಡಿಸೆಂಬರ್ ಆರಂಭದಲ್ಲೇ ಮಂಗನಕಾಯಿಲೆಯ ಲಕ್ಷಣ ಕಾಣಿಸಿಕೊಂಡಿದೆ.

ನಾಲ್ಕು ದಿನಗಳ ಹಿಂದೆ ಬಾಂಡ್ಯ–ಕುಕ್ಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಎಲ್ಲರ ರಕ್ತದ ಮಾದರಿ ಪರೀಕ್ಷಿಸಿದ ಮಣಿಪಾಲ ಆಸ್ಪತ್ರೆ ವೈದ್ಯರು ಐವರಲ್ಲಿ ರೋಗ ಲಕ್ಷಣ ಇರುವುದನ್ನು ದೃಢಪಡಿಸಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಅಲ್ಲಿನ ಜನರು ಸಣ್ಣ ಜ್ವರ ಕಾಣಿಸಿಕೊಂಡರೂ ಆಸ್ಪತ್ರೆಗೆ ಬಂದು ದಾಖಲಾಗುತ್ತಿದ್ದಾರೆ.

ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಡುವ ಬಳಿ ಮಂಗಳವಾರ (ಡಿ. 26) ಸತ್ತ ಮಂಗ ಪತ್ತೆಯಾಗಿರುವುದು ಆ ಭಾಗದ ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಕಳೆದ ವರ್ಷ ಈ ಕಾಯಿಲೆಗೆ ಚಿಡುವ ಭಾಗದಲ್ಲಿ ಮೂವರು ಮೃತಪಟ್ಟಿದ್ದರು.

ಪ್ರಸಕ್ತ ತಿಂಗಳು ಸತ್ತ ಮಂಗಗಳು ಪತ್ತೆಯಾದ ಬೆಟ್ಟಬಸರವಾನಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 127 ಕುಟುಂಬಗಳು ವಾಸಿಸುತ್ತಿವೆ. 501 ಜನಸಂಖ್ಯೆ ಇದೆ. ಅವರಲ್ಲಿ 354 ಜನರಿಗೆ ಎರಡು ತಿಂಗಳ ಹಿಂದೆಯೇ ಕೆಎಫ್‌ಡಿ ರೋಗ ನಿರೋಧಕ ಚುಚ್ಚುಮದ್ದು ಹಾಕಲಾಗಿದೆ. ರೋಗ ನಿರೋಧಕ ಚುಚ್ಚುಮದ್ದು ಹಾಕಿಸಿಕೊಂಡವರಲ್ಲೂ ರೋಗ ಕಾಣಿಸಿಕೊಂಡಿದೆ.

ಕಾಯಿಲೆಗೆ ಇದುವರೆಗೂ ನಿರ್ದಿಷ್ಟ ಔಷಧ ಕಂಡುಹಿಡಿದಿಲ್ಲ. ಕಾಯಿಲೆಗೆ ಕಾರಣವಾಗುವ ಈ ವೈರಸ್‌ ಝೈಕಾ ಮತ್ತು ಡೆಂಗಿ ಪ್ರಭೇದಕ್ಕೆ ಸೇರಿದೆ. ಈ ಆಧಾರದ ಮೇಲೆ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪ್ರಯೋಗಾಲಯದಲ್ಲಿ ಕೆಎಫ್‌ಡಿ ನಿರೋಧಕ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಇದೇ ಲಸಿಕೆಯನ್ನು ಮಲೆನಾಡು ಭಾಗದ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿದೆ.

ಈ ರೋಗ ನಿಯಂತ್ರಣಕ್ಕೆ ನಾಲ್ಕು ವಾರಗಳ ಅಂತರದಲ್ಲಿ ಎರಡು ರೋಗ ನಿರೋಧಕ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು. ನಂತರ 6ರಿಂದ 9 ತಿಂಗಳ ಅಂತರದಲ್ಲಿ ಮತ್ತೊಂದು ಚುಚ್ಚುಮದ್ದು ಹಾಕಿಸಿಕೊಳ್ಳಬೇಕು.

6 ವರ್ಷದ ಕೆಳಗಿನ ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದು ನಿಷಿದ್ಧ. ಒಂದು ಬಾರಿ ತೆಗೆದುಕೊಂಡರೆ ಅವರಲ್ಲಿ ರೋಗ ನಿರೋಧಕಶಕ್ತಿ ವೃದ್ಧಿಸಲು ಕನಿಷ್ಠ 60 ದಿನ ಬೇಕು. ಅಷ್ಟರ ಒಳಗೆ ಸತ್ತ ಮಂಗಗಳ ಮೇಲಿದ್ದ ಉಣ್ಣೆ ಕಚ್ಚಿದರೆ ಚುಚ್ಚುಮದ್ದು ಪಡೆದಿದ್ದರೂ ಕಾಯಿಲೆಗೆ ಒಳಗಾಗುತ್ತಾರೆ ಎಂದು ತೀರ್ಥಹಳ್ಳಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್ ತಿಳಿಸಿದರು.

ರೋಗ ಹರಡುವುದು ಹೀಗೆ...

ಮಂಗಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸುತ್ತವೆ. ಸತ್ತು ಬಿದ್ದ ತಕ್ಷಣ ಮಂಗನ ದೇಹದ ಮೇಲಿದ್ದ ವೈರಸ್‌ ಹೊತ್ತ ಉಣ್ಣೆಗಳು (ಒಣಗು) ಕಾಡಿನಲ್ಲಿ ಓಡಾಡುವ ಜನರಿಗೆ ಕಚ್ಚಿದರೆ ರೋಗ ಹರಡುತ್ತದೆ. ಸಾಯುವುದಕ್ಕೂ ಮೊದಲು ಮಂಗಗಳು ವಿಪರೀತ ನರಳಾಡುತ್ತವೆ. ಬಾಯಿ, ಜನನಾಂಗಗಳಿಂದ ರಕ್ತಸ್ರಾವವಾಗುತ್ತದೆ. ಮೊಲ, ಹೆಗ್ಗಣ, ಜಾನುವಾರು ಮೂಲಕವೂ ಉಣ್ಣೆಗಳು ಸಾಗಿ ಕಾಯಿಲೆ ಹರಡುತ್ತವೆ.

ಬ್ರಿಟನ್ ವೈದ್ಯರ ತಂಡದ ನೆರವು

ಆರು ದಶಕಗಳಾದರೂ ಮಂಗನ ಕಾಯಿಲೆಗೆ ನಿರ್ದಿಷ್ಟ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಬ್ರಿಟನ್‌ ಸರ್ಕಾರದ ಅಧೀನ ಸಂಸ್ಥೆ ಯುಕೆ ಮೆಡಿಕಲ್‌ ರಿಸರ್ಚ್ ಕೌನ್ಸಿಲ್‌ನ ವೈದ್ಯರು ಮತ್ತು ತಜ್ಞರನ್ನು ಒಳಗೊಂಡ ತಂಡ ಈಚೆಗೆ ತೀರ್ಥಹಳ್ಳಿ ತಾಲ್ಲೂಕಿಗೆ ಭೇಟಿ ನೀಡಿ, ಪ್ರಾಥಮಿಕ ಮಾಹಿತಿ ಸಂಗ್ರಹಿಸಿದೆ.

ಸಂಶೋಧನಾಲಯವಿದ್ದೂ ನಡೆಯದ ಪರೀಕ್ಷೆ

ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಬಳಿ ₹ 4 ಕೋಟಿ ವೆಚ್ಚದಲ್ಲಿ ಕ್ರಿಮಿ ಸಂಶೋಧನಾಲಯ ಆರಂಭಿಸಲಾಗಿದೆ. ಆದರೂ, ಮಂಗನ ಕಾಯಿಲೆ ಖಚಿತಪಡಿಸಲು ಮಣಿಪಾಲ, ಪುಣೆಗೆ ರಕ್ತದ ಮಾದರಿ ಕಳುಹಿಸಲಾಗುತ್ತಿದೆ.

‘ಕೆಲವು ಸಾಮಗ್ರಿಗಳ ಕೊರತೆ ಇದ್ದ ಕಾರಣ ವೈರಾಣು ಆಧಾರಿತ ಕಾಯಿಲೆಗಳನ್ನು ಪತ್ತೆಹಚ್ಚುವ ಪ್ರಯೋಗ ಆರಂಭಿಸಿಲ್ಲ. ಮಂಗನಕಾಯಿಲೆ ಪತ್ತೆ ಪರೀಕ್ಷೆ ಶೀಘ್ರ ಆರಂಭಿಸಲಾಗುವುದು’ ಎಂದು ವಿವರ ನೀಡುತ್ತಾರೆ ಸಂಶೋಧನಾಲಯದ ಉಪ ನಿರ್ದೇಶಕ ಡಾ.ರವಿಕುಮಾರ್

* * 

ಡಿಸೆಂಬರ್‌ನಲ್ಲೇ ರೋಗ ಪತ್ತೆಯಾಗಿರುವುದು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲು. ಅಕ್ಟೋಬರ್‌ನಿಂದಲೇ 18 ಸಾವಿರಕ್ಕೂ ಹೆಚ್ಚು ಜನರಿಗೆ ರೋಗ ನಿರೋಧಕ ಲಸಿಕೆ ಹಾಕಿದ್ದರೂ ರೋಗ ಹರಡುತ್ತಿದೆ.

-ಡಾ.ಹನುಮಂತಪ್ಪ, ಜಿಲ್ಲಾ ಆರೋಗ್ಯಾಧಿಕಾರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry