7

ಟೊಮೆಟೊ ಸುರಿದು ಪ್ರತಿಭಟನೆ

Published:
Updated:

ಪಾವಗಡ: ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಮಂಭಾಗದ ರಸ್ತೆಗೆ ಟೊಮೊಟೊ ಸುರಿದು ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟಿಸಿದರು.

ವರ್ಷಪೂರ್ತಿ ಕಷ್ಟಪಟ್ಟು ಸಾಲ ಮಾಡಿ ಬೆಳೆ ಬೆಳೆದ ರೈತ ನಷ್ಟ ಅನುಭವಿಸಬೇಕಿದೆ. ಮಧ್ಯವರ್ತಿಗಳು ಲಾಭ ಪಡೆದೊಕೊಳ್ಳುತ್ತಿದ್ದಾರೆಯೇ ಹೊರತು ರೈತನಿಗೆ ಬಿಡಿಗಾಸು ಸಿಗುತ್ತಿಲ್ಲ. ಸರ್ಕಾರಗಳು ರೈತರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿವೆ. ಇದರಿಂದ ಅನ್ನದಾತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದು ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು.

ರೈತರಿಗೆ ಅಗತ್ಯವಿರುವ ಸೌಕರ್ಯ ಕಲ್ಪಿಸುವತ್ತ ಸರ್ಕಾರ ಗಮನಹರಿಸುತ್ತಿಲ್ಲ. ನೆರೆಯ ಆಂಧ್ರದಲ್ಲಿ ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ಕೊಡಲಾಗುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನಿಗದಿಪಡಿಸಲಾಗುತ್ತಿದೆ. ಆದರೆ ರಾಜ್ಯ, ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ನಿಗದಿಪಡಿಸದೆ ರೈತರ ಅಮೂಲ್ಯ ಜೀವಗಳೊಟ್ಟಿಗೆ ಆಟ ಆಡುತ್ತಿವೆ ಎಂದು ದೂರಿದರು.

ಟೊಮೊಟೊ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಲಾಯಿತು. ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿ ಮುಂಭಾಗ ರಸ್ತೆ ತಡೆ ನಡೆಸಲಾಯಿತು. ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶಿರಸ್ತೇದಾರ್ ಹನುಮಂತಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಹಸಿರು ಸೇನೆ ತಾಲ್ಲೂಕು ಘಟಕದ ಪದಾಧಿಕಾರಿ ತಿಮ್ಮರಾಯಪ್ಪ, ಕರಿಯಣ್ಣ, ದೇವರಾಜು, ರವೀಶ್, ಯರಗುಂಟಪ್ಪ, ವೆಂಕಟಸ್ವಾಮಿ, ಸಣ್ಣರಾಮಪ್ಪ, ಗುಡಿಪಲ್ಲಪ್ಪ, ಕೃಷ್ಣಪ್ಪ, ನಾಗಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry