7

ಉದ್ಘಾಟನೆಯಾಗದೆ ವ್ಯರ್ಥವಾದ ಸಂಕೀರ್ಣ

Published:
Updated:
ಉದ್ಘಾಟನೆಯಾಗದೆ ವ್ಯರ್ಥವಾದ ಸಂಕೀರ್ಣ

ಜಯಸಿಂಹ

ಪಾವಗಡ: ರೈತರು ಬೆಳೆದ ತರಕಾರಿ, ಸೊಪ್ಪು, ಇತ್ಯಾದಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಪಟ್ಟಣದ ಪುರಸಭೆ ಕಚೇರಿ ಬಳಿ ಒಂದೂವರೆ ದಶಕದ ಹಿಂದೆ ನಿರ್ಮಿಸಿರುವ ಮಾರಾಟ ಸಂಕೀರ್ಣ ವ್ಯರ್ಥವಾಗಿ ಉಳಿದಿದೆ.

ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರು ಬೆಳೆದ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಸಲುವಾಗಿ 16 ವರ್ಷಗಳ ಹಿಂದೆಯೇ ಪಟ್ಟಣದ ಪ್ರಮುಖ ಸ್ಥಳದಲ್ಲಿ ನಿರ್ಮಿಸಲಾಗಿದೆ.

ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಯೋಜನೆಯಡಿ 2001ರಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಲಾದ ಮಾರುಕಟ್ಟೆ ಸಂಕೀರ್ಣ ಕಸ ಸಂಗ್ರಹಿಸುವ ಕಸದ ಬುಟ್ಟಿಯಂತೆ ಬಳಕೆಯಾಗುತ್ತಿದೆ. ಪುರಸಭೆ ಅಧಿಕಾರಿಗಳು ಕಟ್ಟಡಕ್ಕೆ ಜಾಗ ತೋರಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ಗಳ ಉಸ್ತುವಾರಿಯಲ್ಲಿ ಸಂಕೀರ್ಣ ನಿರ್ಮಾಣವಾಗಿದೆ.

ಕಾಮಗಾರಿ ಮುಗಿದ ಕೂಡಲೇ ಕಟ್ಟಡವನ್ನು ಪುರಸಭೆಗೆ ಹಸ್ತಾಂತರಿಸಲಾಗಿದೆ. ಆದರೆ ಹಸ್ತಾಂತರವಾದ ದಾಖಲೆಗಳನ್ನು ಪುರಸಭೆ ಅಧಿಕಾರಿ, ಸಿಬ್ಬಂದಿ ನಿರ್ವಹಿಸದೆ, ಸಂಕೀರ್ಣ ಹಸ್ತಾಂತರಿಸಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಎಂಜಿನಿಯರ್ ಒಬ್ಬರು ಸಂಕೀರ್ಣದ ಬಗೆಗಿನ ಮಾಹಿತಿ ನೀಡಿದರು.

ಕಟ್ಟಡ ನಿರ್ಮಾಣವಾದ ನಂತರ ಕಟ್ಟಡದ ನಿರ್ವಹಣೆ ಜವಾಬ್ದಾರಿ ಪುರಸಭೆಯದ್ದು. ಆದರೆ ಚಿಕ್ಕ ಪುಟ್ಟ ನೆಪ ಒಡ್ಡಿ ಸಂಕೀರ್ಣ ಉದ್ಘಾಟಿಸಲು ವಿಳಂಬ ಮಾಡಲಾಗುತ್ತಿದೆ. ಸಂಕೀರ್ಣ ನಿರುಪಯುಕ್ತವಾಗಲು ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿತನವೇ  ಕಾರಣ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಈ ಭಾಗದ ಹೋಟೆಲ್, ಅಂಗಡಿ, ಕೆಲ ಮನೆಗಳವರು ಸಂಕೀರ್ಣದ ಬಳಿ ಕಸ ಹಾಕುತ್ತಾರೆ. ಸಂಕೀರ್ಣದ ಕಟ್ಟಡವನ್ನು ಬಳಸಿಕೊಂಡು ಅಂಗಡಿಗಳನ್ನು ತೆರೆಯಲಾಗಿದೆ. ಕೊಳಚೆ ನೀರು ಸಂಗ್ರಹವಾಗುವುದರಿಂದ ಹಂದಿಗಳು ಸಂಕೀರ್ಣವನ್ನು ಆವಾಸ ಸ್ಥಾನವಾಗಿ ಬಳಸಿಕೊಳ್ಳುತ್ತಿವೆ.

ಮಾರಾಟ ಸಂಕೀರ್ಣ ಉದ್ಘಾಟನೆಯಾದಲ್ಲಿ ಪುರಸಭೆಗೆ ಆದಾಯ ಸಿಗುತ್ತದೆ. ರೈತರಿಗೂ ಅನುಕೂಲವಾಗುತ್ತದೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸಂಕೀರ್ಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ರೈತ ಮುಖಂಡ ಕರಿಯಣ್ಣ ಬೇಸರ ವ್ಯಕ್ತಪಡಿಸಿದರು.

ಅಂಕಿ ಅಂಶ

ನಿರ್ಮಾಣ-2001ರಲ್ಲಿ ವೆಚ್ಚ ₹ 4 ಲಕ್ಷ

ಸಂಕೀರ್ಣ ನಿರ್ಮಾಣವಾಗಿ 16 ವರ್ಷವಾಗಿದೆ

ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಪತ್ರ ಬರೆದು ಸಂಕೀರ್ಣದ ಸ್ಥಿತಿಗತಿ ಬಗ್ಗೆ ತಿಳಿಯಲಾಗುವುದು. ರೈತರ ಬಳಕೆಗೆ ಸಂಕೀರ್ಣ ತೆರೆದಿಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.

ನವೀನ್ ಚಂದ್, ಮುಖ್ಯಾಧಿಕಾರಿ, ಪುರಸಭೆ

ರೈತರ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಪುರಸಭೆ ಕಚೇರಿ ಬಳಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮಾರಾಟ ಸಂಕೀರ್ಣ ನಿರುಪಯುಕ್ತವಾಗಿದೆ. ಅಧಿಕಾರಿಗಳು ನೆಪ ಹೇಳುವುದನ್ನು ಬಿಟ್ಟು ರೈತರು ಉಪಯೋಗಿಸಿಕೊಳ್ಳಲು ಸಂಕೀರ್ಣವನ್ನು ಸಿದ್ಧಪಡಿಸಬೇಕು.

ಪೂಜಾರಪ್ಪ, ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry