ತಜ್ಞರ ಸಮಿತಿ: ಪಂಚಪೀಠಾಧೀಶರಲ್ಲಿ ತಳಮಳ

7

ತಜ್ಞರ ಸಮಿತಿ: ಪಂಚಪೀಠಾಧೀಶರಲ್ಲಿ ತಳಮಳ

Published:
Updated:

ಚಿಂಚೋಳಿ: ‘ಲಿಂಗಾಯತ ಹಾಗೂ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ತಜ್ಞರ ಸಮಿತಿ ರಚಿಸಿದ್ದರಿಂದ ಪಂಚಪೀಠದ ಜಗದ್ಗುರುಗಳಲ್ಲಿ ತಳಮಳ ಶುರುವಾಗಿದೆ’ ಎಂದು ಧಾರವಾಡ ಅಕ್ಕ ಮಹಾದೇವಿ ಅನುಭಾವ ಪೀಠದ ಗಂಗಾ ಮಾತಾಜಿ ತಿಳಿಸಿದರು.

ಅವರು ಸೋಮವಾರ ತಾಲ್ಲೂಕಿನ ಯಲಮಾಮಡಿ ಪುನರ್‌ವಸತಿ ಕೇಂದ್ರ–2ರಲ್ಲಿ ನಡೆದ 31ನೇ ಶರಣಮೇಳದ ಪ್ರಚಾರ ಸಭಾದಲ್ಲಿ ಅವರು ಮಾತನಾಡಿದರು. ‘ತಜ್ಞರ ಸಮಿತಿ ಎದುರು ತಮ್ಮ ವಾದ ಮಂಡಿಸಲು ಅಸಮರ್ಥರಾಗಿರುವ ವೀರಶೈವ ಲಿಂಗಾಯತ ಪ್ರತಿಪಾದಕರು ಈಗ ತಜ್ಞರ ಸಮಿತಿಗೆ ಕ್ಯಾತೆ ತೆಗೆದಿದ್ದು ಹಾಸ್ಯಾಸ್ಪದ’ ಎಂದು ಟೀಕಿಸಿದರು.

‘ಇದರಿಂದ ಭಕ್ತರನ್ನು ಕಗ್ಗತ್ತಲ್ಲಲ್ಲಿ ಇಟ್ಟಿರುವವರ ಬಣ್ಣ ಬಯಲಾಗಲಿದೆ. ಹೀಗಾಗಿ, ತಜ್ಞರ ಎದುರು ಸಮರ್ಥ ವಾದ ಮಂಡಿಸಲಾಗದೇ ಸೋಲು ಖಾತ್ರಿಯಾದಾಗ ತಜ್ಞರ ಸಮಿತಿ ವಿಸರ್ಜನೆಗೆ ಒತ್ತಾಯಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ’ ಎಂದರು.

‘ಲಿಂಗಾಯತ ಸ್ವತಂತ್ರ ಧರ್ಮ ಎಂಬುದು ಸತ್ಯ. ಇದನ್ನು ಒಪ್ಪಿಕೊಂಡರೆ ಎಲ್ಲಿ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುವುದೋ ಎಂಬ ಕಳವಳದಿಂದ ಅವರು ಮೈಪರಚಿಕೊಳ್ಳುತ್ತಿದ್ದಾರೆ’ ಎಂದು ಲೇವಡಿ ಮಾಡಿದರು. ಕೂಡಲಸಂಗಮದಲ್ಲಿ ಜ. 11ರಿಂದ 14ರವರೆಗೆ ನಡೆಯುವ ಶರಣಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯ ಬಸವಣಪ್ಪ ಕುಡಳ್ಳಿ, ಸೂರ್ಯಕಾಂತ ಹುಲಿ, ವೀರಶೆಟ್ಟಿ ಇಮ್ಡಾಪುರ ಮಾತನಾಡಿ, ಮಾತಾಜಿ ಅವರ ಸೇವೆ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ತಮ್ಮ ಅಳಲು ತೋಡಿಕೊಂಡರು.

ಬಸವರತ್ನ ತಾಯಿ, ಬಸವ ಕಲ್ಯಾಣದ ಜಯಶ್ರೀ ಪಾಟೀಲ, ಶಕುಂತಲಾ ಹುಲಿ, ಶ್ರೀದೇವಿ ಸಂಗಶೆಟ್ಟಿ, ಬಸವರಾಜ ಕೆರೋಳ್ಳಿ, ಅಣವೀರಪ್ಪ ಕೆರೋಳ್ಳಿ, ಘಾಳಪ್ಪ ಮಾಸ್ತರ್‌, ಗೇಮು ನಾಯಕ್‌, ಸುಭಾಷ ನಾರಾಯಣ ನಾಯಕ್‌, ಭೀಮಾಶಕರ ಹತ್ತಿ, ಶಶಿಧರ ತಡಕಲ್‌, ಓಮಕಾರ ಮಠಪತಿ, ರವೀಂದ್ರ ಜಮಾದಾರ, ಸಂತೋಷ ದೇಶಮುಖ್‌ ಇದ್ದರು. ವೀರಶೆಟ್ಟಿ ಸ್ವಾಗತಿಸಿದರು. ಲಿಂಗಾನಂದ ಲಿಂಗಾಯತ ನಿರೂಪಿಸಿದರು. ನಾಗಶೆಟ್ಟಿ ಬೆಡಸೂರು ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry