7

ತಾಲ್ಲೂಕು ರಚನೆ: ತೀವ್ರಗೊಂಡ ಹೋರಾಟ

Published:
Updated:
ತಾಲ್ಲೂಕು ರಚನೆ: ತೀವ್ರಗೊಂಡ ಹೋರಾಟ

ಗೋಣಿಕೊಪ್ಪಲು: ಪೊನ್ನಂಪೇಟೆ ಯನ್ನು ನೂತನ ತಾಲ್ಲೂಕು ಕೇಂದ್ರ ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ರಚನಾ ಹೋರಾಟ ಸಮಿತಿ, ನಾಗರಿಕ ವೇದಿಕೆ ಹಾಗೂ ವಿವಿಧ ಸಂಘಟನೆಗಳು 55 ದಿನಗಳಿಂದ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

‘ಚಿಕ್ಕಪಟ್ಟಣಗಳಾದ ಮೈಸೂರು ಜಿಲ್ಲೆಯ ಸರಗೂರು, ಉಡುಪಿ ಜಿಲ್ಲೆ ಯ ಕಾಪುಗೆ ತಾಲ್ಲೂಕು ಕೇಂದ್ರದ ಸ್ಥಾನಮಾನ ನೀಡಲಾಗಿದೆ. ಅದರ ಮೂರುಪಟ್ಟು ಹೆಚ್ಚು ವಿಸ್ತೀರ್ಣ ಹೊಂದಿರುವ ಪೊನ್ನಂಪೇಟೆಗೂ ತಾಲ್ಲೂಕು ಸ್ಥಾನಮಾನ ಬೇಕು’ ಎಂದು ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಆಗ್ರಹಿಸಿದ್ದಾರೆ.

ದಕ್ಷಿಣ ಕೊಡಗಿನ ಪ್ರಮುಖ ಸಾಂಸ್ಕೃತಿಕ, ಕ್ರೀಡಾ ಕೇಂದ್ರ ಪೊನ್ನಂಪೇಟೆ. 1800ರ ಅವಧಿಯಲ್ಲಿ ದಿವಾನರಾಗಿದ್ದ ಚೆಪ್ಪುಡೀರ ಪೊನ್ನಪ್ಪ ಕಟ್ಟಿಸಿದ ಪೇಟೆಯೇ ಈ ಪೊನ್ನಂಪೇಟೆ. ಹಿಂದೆ ‘ಪೊನ್ನಪ್ಪನಪೇಟೆ’ ಎಂದೂ ಕರೆಯಲಾಗುತ್ತಿತ್ತು.

ಅಸ್ತಿತ್ವ ಕಳೆದುಕೊಂಡ ‘ಕಿಗ್ಗಟ್ಟುನಾಡು’: ಪೊನ್ನಂಪೇಟೆಯು ವಿರಾಜಪೇಟೆ ತಾಲ್ಲೂಕು ಕೇಂದ್ರದಿಂದ 21 ಕಿ.ಮೀ ದೂರದಲ್ಲಿದೆ. 1956ಕ್ಕಿಂತ ಹಿಂದೆ ಕೊಡಗು ‘ಸಿ’ ರಾಜ್ಯವಾಗಿದ್ದಾಗ ‘ಕಿಗ್ಗಟ್ಟುನಾಡು’ ತಾಲ್ಲೂಕು ಕೇಂದ್ರವಾಗಿತ್ತು. ಬಳಿಕ ಮೈಸೂರು ರಾಜ್ಯದೊಂದಿಗೆ ವಿಲೀನವಾದಾಗ ತಾಲ್ಲೂಕು ಕೇಂದ್ರದ ಅಸ್ತಿತ್ವವನ್ನು ಕಳೆದುಕೊಂಡಿತು. ಇದೀಗ ಹೋಬಳಿ ಕೇಂದ್ರವಾಗಿದೆ.

ಹಲವು ಕಚೇರಿಗಳಿವೆ: ತಾಲ್ಲೂಕು ಕೇಂದ್ರವಾಗಿದ್ದಾಗ ಇದ್ದ ಬಹುತೇಕ ತಾಲ್ಲೂಕುಮಟ್ಟದ ಕಚೇರಿಗಳು ಈಗಲೂ ಕಾರ್ಯ ನಿರ್ವಹಿಸುತ್ತಿವೆ. ವಿರಾಜಪೇಟೆ ತಾಲ್ಲೂಕು ಕೇಂದ್ರವಾಗಿದ್ದರೂ ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯಿತಿ ಕಚೇರಿ, ಉಪ ಖಜಾನೆ, ಉಪ ನೋಂದಣಾಧಿಕಾರಿ ಕಚೇರಿ, ತೋಟಗಾರಿಕೆ ಮತ್ತು ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಇಲಾಖೆ, ಐಟಿಡಿಪಿ ಕಚೇರಿಗಳು ಪೊನ್ನಂಪೇಟೆಯಲ್ಲಿವೆ. ಸಿವಿಲ್ ನ್ಯಾಯಾಲಯದ ಬೃಹತ್ ಸಂಕೀರ್ಣವೂ ₹ 11 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ಪೊನ್ನಂಪೇಟೆ ಕೇಂದ್ರದ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪಟ್ಟಣದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಸೇರಿದ ಅರಣ್ಯ ಮಹಾವಿದ್ಯಾಲಯ, ಕೃಷಿ ಸಂಶೋಧನಾ ಕೇಂದ್ರ, ಪೊಲೀಸ್ ಠಾಣೆ, ಅಂಚೆ ಕಚೇರಿ, ನಾಡಕಚೇರಿ, ಉಪ ವಲಯ ಅರಣ್ಯಾಧಿಕಾರಿ ಕಚೇರಿ, 5 ಪ್ರಾಥಮಿಕ ಶಾಲೆ, 4 ಪ್ರೌಢಶಾಲೆ, 4 ಪದವಿಪೂರ್ವ ಕಾಲೇಜು, ಒಂದು ಪದವಿ ಮತ್ತು ಬಿ.ಇಡಿ ಕಾಲೇಜುಗಳಿವೆ. ಸಹಕಾರಿ ಸಂಘಗಳು ಸೇರಿದಂತೆ 5 ಬ್ಯಾಂಕ್‌ಗಳ ಶಾಖೆಗಳಿವೆ. ಈ ಎಲ್ಲಾ ಸೌಲಭ್ಯವಿರುವುದರಿಂದ ಗಡಿಭಾಗದ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪೊನ್ನಂಪೇಟೆಯನ್ನು ಕೇಂದ್ರವಾಗಿಸಿಕೊಂಡು ನೂತನ ತಾಲ್ಲೂಕು ರಚಿಸಬೇಕು ಎಂದು 2009ರಿಂದಲೂ ಹೋರಾಟ ನಡೆಸಲಾಗುತ್ತಿದೆ ಎನ್ನುತ್ತಾರೆ ಹೋರಾಟಗಾರರು.

ಉದ್ದೇಶಿತ ತಾಲ್ಲೂಕು ವ್ಯಾಪ್ತಿಗೆ 4 ಹೋಬಳಿ, 21 ಗ್ರಾಮ ಪಂಚಾಯಿತಿಯ 48 ಗ್ರಾಮಗಳನ್ನು ಗುರುತಿಸಲಾಗಿದೆ. ನಾಗರಹೊಳೆ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವೂ ಒಳಗೊಂಡಂತೆ 4 ಅರಣ್ಯ ಪ್ರದೇಶಗಳು ವ್ಯಾಪ್ತಿಗೆ ಒಳಪಡಲಿವೆ.

ಪೊನ್ನಂಪೇಟೆ ಬೇರ್ಪಟ್ಟರೆ ವಿರಾಜಪೇಟೆ ತಾಲ್ಲೂಕು ಕೇಂದ್ರದಲ್ಲಿ 2 ಹೋಬಳಿ, 16 ಗ್ರಾಮ ಪಂಚಾಯಿತಿಯ 46 ಗ್ರಾಮಗಳು ಉಳಿಯಲಿವೆ. ಗಡಿಗ್ರಾಮಗಳಾದ ಕುಟ್ಟ, ಕಾರ್ಮಾಡು, ಪೋಕೊಳ, ಬಾಡಗರಕೇರಿ, ನಾಗರಹೊಳೆ ಹಾಡಿಗಳು ಈಗಿನ ವಿರಾಜಪೇಟೆ ಕೇಂದ್ರದಿಂದ ಸುಮಾರು 55 ಕಿ.ಮೀ ದೂರದಲ್ಲಿದ್ದು ಪೊನ್ನಂಪೇಟೆ ಕೇಂದ್ರಕ್ಕೆ 35 ಕಿ.ಮೀ ಅಂತರವಿದೆ.

ಮುಖಂಡರಾದ ಪಿ.ಬಿ.ಪೂಣಚ್ಚ, ಚೆಪ್ಪುಡೀರ ಸೋಮಯ್ಯ, ಚೆಪ್ಪುಡೀರ ಪೊನ್ನಪ್ಪ, ಎಂ.ಎಸ್.ಕುಶಾಲಪ್ಪ, ಎ.ಎ.ಎರ್ಮು ಹಾಜಿ, ಕೆ.ಎಂ. ಗಣಪತಿ, ಮಾಚಿಮಾಡ ರವೀಂದ್ರ, ಕಾಟಿಮಾಡ ಜಿಮ್ಮಿ ಅಣ್ಣಯ್ಯ ನೇತೃತ್ವದಲ್ಲಿ ಹೋರಾಟಗಳು ನಡೆಯುತ್ತಿವೆ.

* * 

2008ರಿಂದಲೂ ಹೋರಾಟ ನಡೆಸಲಾಗುತ್ತಿದೆ. ಎಂ.ಪಿ.ಪ್ರಕಾಶ್ ಕಂದಾಯ ಸಚಿವರಾಗಿದ್ದ ಅವಧಿಯಲ್ಲೇ ಮನವಿ ಸಲ್ಲಿಸಲಾಗಿತ್ತು. ಆದರೂ ಕಡೆಗಣಿಸಲಾಗಿದೆ ಮತ್ರಂಡ ಅಪ್ಪಚ್ಚು, ಹಿರಿಯ ವಕೀಲ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry