3

ಜಾಲತಾಣದಿಂದ ಸಮಾಜ ಒಡೆಯುವ ಕೆಲಸ

Published:
Updated:

ಎಂ.ಕೆ. ಹುಬ್ಬಳ್ಳಿ (ಚನ್ನಮ್ಮನ ಕಿತ್ತೂರು): ‘ಸಾಮಾಜಿಕ ಜಾಲತಾಣದಲ್ಲಿ ಅವರವರ ವಿಚಾರಗಳನ್ನು ಇಟ್ಟುಕೊಂಡು ಕ್ಷಣದಲ್ಲೇ ಸಮಾಜ ಒಡೆಯುವ ಕೆಲಸ ಮಾಡಲಾಗುತ್ತಿದೆ’ ಎಂದು ಆಳ್ವಾ ಪ್ರತಿಷ್ಠಾನದ ರೂವಾರಿ ಮೋಹನ ಆಳ್ವ ಆತಂಕ ವ್ಯಕ್ತಪಡಿಸಿದರು.

ಎಂ.ಕೆ. ಹುಬ್ಬಳ್ಳಿಯಲ್ಲಿ ಸೋಮವಾರ ಬಿಜೆಪಿ ಮುಖಂಡ ಸಿ.ಆರ್. ಪಾಟೀಲ ಅಭಿಮಾನಿ ಬಳಗ ಮತ್ತು ಆಳ್ವಾಸ್ ನುಡಿಸಿರಿ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣ ಬಹಳ ಪ್ರಮುಖವಾಗಿದೆ. ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದ್ದ ಕೆಲ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ರೋಚಕತೆ ಬೆಳಸಿಕೊಂಡು ಮತ್ತು ವ್ಯಾಪಾರೀಕರಣ ಮಾಡಿಕೊಂಡು ಸಮಾಜದಲ್ಲಿ ಗೊಂದಲದ ವಾತಾರಣ ಸೃಷ್ಟಿ ಮಾಡುತ್ತಿವೆ’ ಎಂದು ದೂರಿದರು.

‘ರಾಜಕೀಯ ಪಕ್ಷಗಳು ಕೂಡ ಜನರ ಮನಸ್ಸುಗಳ ಮಧ್ಯೆ ಕಂದಕ ಸೃಷ್ಟಿಸಿ, ವೈಷಮ್ಯಗಳನ್ನು ಬೆಳೆಸಿ ಅರಾಜಕತೆ ಎಬ್ಬಿಸುವ ಕೆಲಸ ಮಾಡುತ್ತಿವೆ. ಈ ಪರಿಸ್ಥಿತಿ ಎಲ್ಲಿವರೆಗೆ ಹೋಗಿದೆ ಎಂದರೆ, ಯಾವ ರಾಜಕೀಯ ಪಕ್ಷಕ್ಕೆ ಮತ ನೀಡಿದ್ದಾನೆ ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳಲು ನಾಚಿಕೆಪಟ್ಟುಕೊಳ್ಳುವಂತಹ ಕಾಲ  ಬಂದಿದೆ’ ಎಂದು ವಿಷಾದಿಸಿದರು.

‘ಧರ್ಮದ ಅಡಿಯಲ್ಲಿರುವ ಮತಗಳೂ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಬೇಕಿತ್ತು. ಪ್ರೀತಿಯಿಂದ ಮತ್ತು ಸಾಮರಸ್ಯದಿಂದ ಬಾಳುವ ಪಾಠ ಹೇಳಬೇಕಿತ್ತು. ಆದರೆ ಇವು ಕೂಡ ಸಾಮರಸ್ಯ ಕೆಡಿಸಿ ಮನಸುಗಳ ಮಧ್ಯೆ ಅಂತರ ಹೆಚ್ಚಿಸುವ ಕೆಲಸ ಮಾಡುತ್ತಿವೆ. ರಾಜಕೀಯ ಪಕ್ಷಗಳು ಮತ್ತು ಧರ್ಮಗಳು ಮಾಡದಿರುವ ಕೆಲಸವನ್ನು ಕನ್ನಡ ಭಾಷೆ ಮತ್ತು ನಮ್ಮ ಸಂಸ್ಕೃತಿ ಮೂಲಕ ಮಾಡಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಸೋಲಬಾರದು. ಸೋತರೆ ಅದು ಕನ್ನಡದ ಮತ್ತು ನೆಲದ ಸಂಸ್ಕೃತಿಯ ಸೋಲು’ ಎಂದು ವಿಶ್ಲೇಷಿಸಿದ ಅವರು, ‘150ರಾಷ್ಟ್ರಗಳಲ್ಲಿ ಆಯಾ ದೇಶದ ಭಾಷೆಯೇ ಚಾಲ್ತಿಯಲ್ಲಿದೆ. ಅದರಂತೆ ದೇಶದ 14 ಪ್ರಾದೇಶಿಕ ಭಾಷೆಗಳು ಬದುಕಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಸರ್ಕಾರ, ಸಂಘ–ಸಂಸ್ಥೆಗಳು ಮತ್ತು ಪಾಲಕರು ಬದುಕಿಸಬೇಕು’ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಪತಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ‘ಆಳ್ವಾ ಸಂಸ್ಥೆ ಒಂದು ಶಿಕ್ಷಣ ಸಂಸ್ಥೆಯಾಗದೇ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಹಿಂದಿರುವ ಶಕ್ತಿ ಮೋಹನ ಆಳ್ವ ಆಗಿದ್ದಾರೆ’ ಎಂದರು.

ಕಾರ್ಯಕ್ರಮದ ರೂವಾರಿ ಮತ್ತು ಬಿಜೆಪಿ ಮುಖಂಡ ಸಿ.ಆರ್. ಪಾಟೀಲ ಮಾತನಾಡಿದರು. ಮುಖಂಡರಾದ ಚಿನ್ನಪ್ಪ ಮುತ್ನಾಳ, ವೀರಕ್ತಯ್ಯ ಸಾಲಿಮಠ, ಎಂ.ಎಸ್. ಕಲ್ಮಠ, ಎಂ.ಟಿ. ಸಂಬಣ್ಣವರ, ಮಹಾಂತೇಶ ದೊಡಗೌಡರ, ಚನ್ನಬಸಪ್ಪ ಮೊಕಾಶಿ, ಶಿದ್ರಾಮಗೌಡ ಪಾಟೀಲ, ಜಗದೀಶ ಹಾರುಗೊಪ್ಪ, ಬಸವರಾಜ ಪರವಣ್ಣವರ, ಬಸವರಾಜ ಡೂಗನವರ, ಬಸಪ್ಪ ಕರವಿನಕೊಪ್ಪ, ದೊಡ್ಡಪ್ಪ ಕರವಿನಕೊಪ್ಪ ಇದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry