6

ಸಂಪತ್ತಿನಿಂದ ತೃಪ್ತಿಯಿಲ್ಲ, ತೃಪ್ತಿಯೇ ಸಂಪತ್ತು

Published:
Updated:

ಮನುಷ್ಯನ ಬದುಕು ನಿಸರ್ಗವನ್ನು ಅವಲಂಬಿಸಿದೆ. ಹಣತೆ, ಎಣ್ಣೆ ಮತ್ತು ಬತ್ತಿ ಹೊರತು ಜ್ಯೋತಿ ಹೇಗೆ ಉರಿಯುವುದಿಲ್ಲವೋ. ಅದರಂತೆ, ನಿಸರ್ಗ ಇಲ್ಲದಿದ್ದರೆ ಜೀವನ ಶೂನ್ಯ. ದೇಹ ಎಂಬ ಹಣತೆಯಲ್ಲಿ ಮನಸ್ಸು ಎಂಬ ತೈಲದೊಳಗೆ ಆಯುಷ್ಯ ಎನ್ನುವ ಬತ್ತಿ ಬೆಳಗಲು ನಿಸರ್ಗ ಪೂರಕವಾಗಿ ಕೆಲಸ ಮಾಡುತ್ತದೆ. ಇವು ಮೂರು ಚೆನ್ನಾಗಿರುವಷ್ಟು ಸಮಯ ಬದುಕಿನ ಸೌಂದರ್ಯ ಹೆಚ್ಚುತ್ತದೆ. ಈ ಸಮನ್ವಯದಲ್ಲಿ ಸಣ್ಣ ವ್ಯತ್ಯಾಸವಾದರೂ ಜೀವನ ಅಸ್ತವ್ಯಸ್ತಗೊಳ್ಳುತ್ತದೆ.

ಕಾರ್ಯ ಕ್ಷಮತೆಯನ್ನು ಮನುಷ್ಯ ಪ್ರಕೃತಿಯಿಂದ ಕಲಿಯಬೇಕು. ಅರೆ ಕ್ಷಣ ವಿರಮಿಸದೆ ಕೆಲಸ ಮಾಡುವಂತಹ ಮನಸ್ಸು ನಮ್ಮದಾಗಬೇಕು. ಏಕೆಂದರೆ ಜೀವನಕ್ಕೆ ಬೇಕಾಗಿರುವುದು ಮನಸ್ಸಿನಲ್ಲಿದೆ. ಮನಸ್ಸನ್ನು ತೆಗೆದಿಟ್ಟರೇ ಮನುಷ್ಯನೇ ಇಲ್ಲ.

ಬುದ್ಧಿ, ಭಾವ, ಶರೀರ ಮತ್ತು ಇಂದ್ರಿಯಗಳನ್ನು ಪರಿಶುದ್ಧವಾಗಿಟ್ಟುಕೊಂಡರೇ ಬೇರೇನು ಬೇಕು ಹೇಳಿ? ಬದುಕು ಕಟ್ಟುವ ಹಾಗೂ ಕೆಡಿಸುವುದು ನಮ್ಮ ಕೈಯಲ್ಲಿ ಇದೆ. ತಮ್ಮ ಜೀವಿತಾವಧಿಯಲ್ಲಿ ಭಾವ ಸೌಂದರ್ಯದ ಮೂಲಕ ಸಂತರು ಈ ಭೂಮಿಯನ್ನು ಸ್ವರ್ಗ ಮಾಡಿ ಹೋದರು. ಶಾಂತಿ ಮತ್ತು ಅನುಭಾವದ ಮೂಲಕ ಬೆಳಕಿನಲ್ಲಿ ವಿಶ್ವವನ್ನು ಮುನ್ನಡೆಸಿದರು. ಜೀವನ ಮುಖ್ಯವೇ ಹೊರತು ಮನುಷ್ಯನ ಎತ್ತರ, ಬಣ್ಣ, ರೂಪು ಮತ್ತು ಜಾತಿಗಳಲ್ಲ. ಮನಸ್ಸು, ವಿಚಾರ, ಭಾವನೆ, ಆತ್ಮಗಳು ನಿರ್ಮಲಗೊಂಡಾಗ, ಸ್ವರ್ಗ ನಿರ್ಮಾಣವಾಗುತ್ತದೆ.

ಇದೇ ನಾಡಲ್ಲಿ ಬೆಳಕನ್ನು ಬೆಳಗಿದ ಷಣ್ಮುಖ ಶಿವಯೋಗಿಗಳು ‘ನಡೆ ಶುದ್ಧ, ನುಡಿಶುದ್ಧ, ತನು ಶುದ್ಧ, ಭಾವಶುದ್ಧ ಸಕಲ ಕಾರ್ಯಂಗಳು ಶುದ್ಧ. ಅಖಂಡೇಶ್ವರಾ ನೀವು ಒಲಿದ ಭಕ್ತನ ಕಾಯಕವೇ ಕೈಲಾಸ’ ಎಂದು ಹೇಳಿದ್ದಾರೆ. ಈ ಸುಂದರ ಮಾತುಗಳು ಸ್ವರ್ಗ ಎನಿಸಿದರೆ, ಹೊಲಸು ಮಾತುಗಳು ನರಕ ಸೃಷ್ಟಿಸುತ್ತವೆ. ಭೂಮಿಯಿಂದ ಬಂದರೂ ಮಣ್ಣು ಹತ್ತಿಸಿಕೊಳ್ಳದ ಹೂವು ಭಾವಶುದ್ಧತೆಯ ಪ್ರತೀಕ, ತನ್ನ ಇರುವಿಕೆಯಿಂದ ಅದು ಇಡೀ ವಾತಾವರಣವನ್ನೇ ಸುಂದರಗೊಳಿಸುತ್ತದೆ.

ಕಾಶ್ಮೀರದ ಅರಸನಾಗಿದ್ದ ಮಹಾದೇವ ಭೂಪಾಲ ತನ್ನ ಎಲ್ಲ ರಾಜಭೋಗವನ್ನು ತ್ಯಜಿಸಿ, ತಲೆಯ ಮೇಲೆ ಕಟ್ಟಿಗೆ ಹೊತ್ತು ಮಾರಿದ. ತಲೆಯೊಳಗಿನ ಸಿಂಹಾಸನ ಮತ್ತು ತಲೆಯ ಮೇಲಿನ ಕಟ್ಟಿಗೆ ಎರಡೂ ಒಂದೇ ಎಂದು ಪರಿಭಾವಿಸಿದ ಮೋಳಿಗೆ ಮಾರಯ್ಯನ ಬದುಕು ಎಷ್ಟು ಉದಾತ್ತವಾದದ್ದು ? ರೂಪಾಯಿ, ಡಾಲರ್‌, ಪೌಂಡ್‌, ಯೆನ್ ಮತ್ತು ಯುರೊಗಳಿಂದ ಜೀವನವನ್ನು ಅಳೆಯದೇ ಭಾವಸಂಪತ್ತಿನಿಂದ ತೂಗಬೇಕು.

ಗುಡಿಸಲಲ್ಲಿ ವಾಸ ಮಾಡಿ, ಬದುಕನ್ನು ನಂದನವನ ಮಾಡಿದವರೇ ಶರಣರು, ಸಂತರು. ಊರಿನ ಉಳ್ಳವರ ತಿಪ್ಪೆ ಕೆದರುತ್ತಿದ್ದ ಕೋಳಿಯನ್ನು ಮನುಷ್ಯ ಏನನ್ನು ಹುಡುಕುತ್ತಿದ್ದಿ ಎಂದು ಪ್ರಶ್ನಿಸಿದ ಆಕಸ್ಮಾತಾಗಿ ಸಿಕ್ಕ ಅಮೂಲ್ಯ ರತ್ನವನ್ನು ಮನುಷ್ಯ ನೆಡೆಗೆ ಬೀಸಾಡಿದ ಕೋಳಿ ಅಲ್ಲಿಯೇ ಸಿಕ್ಕ ಕಡಲೆ ಕಾಳನ್ನು ತಿಂದು ತೃಪ್ತಿ ಹೊಂದಿತು. ಸಂಪತ್ತಿನಿಂದ ತೃಪ್ತಿಯಿಲ್ಲ, ತೃಪ್ತಿಯೇ ಸಂಪತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry