7

ವಿದ್ಯಾರ್ಥಿಗಳಿಂದ ಖಾಶೆಂಪುರ ಗ್ರಾಮ ದತ್ತು

Published:
Updated:

ಔರಾದ್: ತಾಲ್ಲೂಕಿನ ಯನಗುಂದಾ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಬಿಡುವಿನ ವೇಳೆ ಮತ್ತು ರಜಾ ದಿನ ಬಳಸಿಕೊಂಡು ಸ್ವಚ್ಛತಾ ಜಾಗೃತಿ ಅಭಿಯಾನದ ಮೂಲಕ ಸ್ವಚ್ಛ ಭಾರತ ಅಭಿಯಾನ ಯಶಸ್ವಿಗೆ ಕೈ ಜೋಡಿಸಿದ್ದಾರೆ.

ಹೌದು. ಇಲ್ಲಿನ 30 ವಿದ್ಯಾರ್ಥಿಗಳು ಬಸವಣ್ಣ ಎಂಬ ಹೆಸರಿನಲ್ಲಿ ಸ್ಕೌಟ್ಸ್‌ ಮತ್ತು 30 ವಿದ್ಯಾರ್ಥಿನಿಯರು ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಗೈಡ್‌ ಶಾಖೆ ರಚಿಸಿಕೊಳ್ಳುವ ಮೂಲಕ ಖಾಶೆಂಪುರ ಗ್ರಾಮವನ್ನು ದತ್ತು ಪಡೆದು ಅಲ್ಲಿ ಬಯಲು ಶೌಚ ಮುಕ್ತ ಗ್ರಾಮವಾಗಿ ಮಾಡಲು ಸಂಕಲ್ಪ ತೊಟ್ಟಿದ್ದಾರೆ.

100 ಮನೆಗಳಿರುವ ಈ ಊರಲ್ಲಿ ಐದಾರು ಕಟುಂಬದ ಸದಸ್ಯರು ಹೊರತುಪಡಿಸಿ ಎಲ್ಲರೂ ಬಯಲು ಶೌಚಾಲಯ ಮೇಲೆ ಅವಲಂಬಿಸಿದ್ದಾರೆ. ಶಾಲೆ ಶಿಕ್ಷಕರು, ಪಿಡಿಒ ಅವರ ಸಹಕಾರದಿಂದ ಗ್ರಾಮದಲ್ಲಿ ಸಭೆ ನಡೆಸಿದ ವಿದ್ಯಾರ್ಥಿಗಳು 2018 ಜನವರಿ 26ರ ಒಳಗಾಗಿ ಎಲ್ಲ ಮನೆಗಳಲ್ಲಿ ಶೌಚಾಲಯ ಹೊಂದುವ ರೀತಿ ಗ್ರಾಮಸ್ಥರನ್ನು ಬದಲಾಯಿಸುವ ಪಣ ತೊಟ್ಟಿದ್ದಾರೆ.

‘ಸ್ಕೌಟ್ಸ್‌ ಮಾಸ್ಟರ್ ಮಲ್ಲಿಕಾರ್ಜುನ ಟಂಕಸಾಲೆ ಅವರ ಸಹಕಾರದಿಂದ  ಸರ್ವೆ ಮಾಡಿರುವ ವಿದ್ಯಾರ್ಥಿಗಳು ಪ್ರತಿ ಮನೆಗೆ ಹೋಗಿ ಅವರಿಗೆ ಶೌಚಾಲಯ ಮಹತ್ವ ತಿಳಿಸಿದ್ದಾರೆ. ಸಹಾಯಧನಕ್ಕಾಗಿ ಅವರ ಎದುರಲ್ಲಿ ಅರ್ಜಿ ತುಂಬಿ ದಾಖಲೆ ಪಡೆದು ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದಾರೆ.

ಈಗಾಗಲೇ ಎಲ್ಲ 95 ಅರ್ಜಿ ಸ್ವೀಕರಿಸಿ ಅವರಿಗೆ ಕೆಲಸದ ಆದೇಶ ಕೊಡಲಾಗಿದೆ. ಈ ಪೈಕಿ 35 ಶೌಚಾಲಯಗಳ ಕೆಲಸ ಪ್ರಗತಿಯಲ್ಲಿದೆ. ಉಳಿದ ಮನೆಗಳಲ್ಲೂ ಶೀಘ್ರ ಕೆಲಸ ಆರಂಭವಾಗಲಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಘಾಟೆ ತಿಳಿಸಿದ್ದಾರೆ.

‘ನಮ್ಮ ಶಾಲೆ 8ನೇ ತರಗತಿ ವಿದ್ಯಾರ್ಥಿನಿ ಖಾಶೆಂಪುರ ಗ್ರಾಮದ ಆರತಿ ಪುಂಡಲಿಕ ತಮ್ಮ ಪಾಲಕರೊಂದಿಗೆ ಹಟ ಮಾಡಿ ಒಂದೇ ಕೋಣೆ ಇರುವ ತಮ್ಮ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಂಡಿದ್ದಾಳೆ. ಇವಳ ಪ್ರೇರಣೆ ಫಲವಾಗಿ ಇತರೆ ವಿದ್ಯಾರ್ಥಿಗಳು ನಾವೂ ಶೌಚಾಲಯ ಕಟ್ಟಿಕೊಳ್ಳಬೇಕು ಎಂಬ ಸಂಕಲ್ಪ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಮಾಜಿಕ ಕಳಕಳಿಯಿಂದಾಗಿ ಈಗ ಇಡೀ ಖಾಶೆಂಪುರ ಗ್ರಾಮ ಬಯಲು ಶೌಚಾಲಯದಿಂದ ಮುಕ್ತಿ ಪಡೆಯುತ್ತಿದೆ’ ಎಂದು ಗೈಡ್ಸ್‌ ಕ್ಯಾಪ್ಟನ್ ಸುಜಾತಾ ಟಂಕಸಾಲೆ ಸಂತಸ ವ್ಯಕ್ತಪಡಿಸಿದ್ದಾರೆ.

‘ನಮ್ಮ ಶಾಲೆ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಭಾನುವಾರ ಬಿಡುವು ಮಾಡಿಕೊಂಡು ಜನರ ಬಳಿಗೆ ಹೋಗಿ ಅವರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಮುಖ್ಯ ಶಿಕ್ಷಕ ಚಂದ್ರಕಾಂತ ನಿರ್ಮಳೆ ಹೇಳುತ್ತಾರೆ.

ಓದಿನಲ್ಲೂ ನಮ್ಮ ಶಾಲೆ ಮಕ್ಕಳು ಮುಂದಿದ್ದಾರೆ. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ನಮ್ಮ ಶಾಲೆ ವಿದ್ಯಾರ್ಥಿನಿಯೊಬ್ಬಳು ತಾಲ್ಲೂಕಿಗೆ ಪ್ರಥಮ. ಪ್ರತಿಭಾ ಕಾರಂಜಿಯಲ್ಲಿ ಎತ್ತರ ಜಿಗಿತ ಮತ್ತು ಓಟದಲ್ಲಿ ಮೂವರು ವಿದ್ಯಾರ್ಥಿಗಳು ವಿಭಾಗ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಎರಡು ವರ್ಷದಿಂದ ನಮ್ಮಲ್ಲಿ ವಿಜ್ಞಾನ ಶಿಕ್ಷಕರಿಲ್ಲ. ಆದರೂ ಬೇರೆ ಕಡೆಯಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಹೆಚ್ಚುವರಿ ತರಗತಿ ನಡೆಸುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

* * 

ಬಯಲು ಶೌಚಾಲಯ ಮುಕ್ತಿ ಅಭಿಯಾನ ಯಶಸ್ವಿಗೆ ಯನಗುಂದಾ ಶಾಲೆ ವಿದ್ಯಾರ್ಥಿಗಳು ನಮಗೆ ಸಹಕಾರ ನೀಡಿದ್ದಾರೆ. ಪಾಲಕರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಶಿವಕುಮಾರ ಘಾಟೆ, ಪಿಡಿಒ ಸುಂದಾಳ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry