ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತರ ಕೈಹಿಡಿದ ಕಪ್ಪುಬೆಲ್ಲ

Last Updated 27 ಡಿಸೆಂಬರ್ 2017, 8:59 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಗ್ರಾಮೀಣ ಕೃಷಿಕರ ಆಲೆಮನೆಯಿಂದ ದೂರವಾದ ಕರಿಬೆಲ್ಲದ ಸ್ಥಾನದಲ್ಲಿ ಬಿಳಿಯಚ್ಚು ಕೂತಿದೆ. ಆದರೆ, ರಸಾಯನಿಕ ಬಳಸದೆ ಕಬ್ಬು ನಾಟಿ ಮಾಡಿ ಕಟಾವಿನ ತನಕ ಪೋಷಿಸಿ ಕಪ್ಪು ಬೆಲ್ಲವನ್ನು ಉತ್ಪಾದಿಸುವ ಮಂದಿ ಇನ್ನೂ ಇದ್ದಾರೆ. ಇಂತಹ ಬೆಲ್ಲ ಮತ್ತು ಪುಡಿ ಹೆಚ್ಚು ಧಾರಣೆಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸುತ್ತಿದ್ದಾರೆ ಇಲ್ಲಿನ ಪ್ರಗತಿಪರ ರೈತರು.

ಶೂನ್ಯ ಬೇಸಾಯದಲ್ಲಿ ಹೆಚ್ಚಿನ ಖರ್ಚಿಲ್ಲ. ಮಣ್ಣಿನ ಆರೋಗ್ಯವೂ ಉತ್ತಮವಾಗಿರುತ್ತದೆ. ಇಂತಹ ಮಣ್ಣಿನಲ್ಲಿ ಬೆಳೆದ ಕಬ್ಬಿನಿಂದ ತಯಾರಾದ ಕಪ್ಪಚ್ಚು ಬೆಲ್ಲ ಹೊರ ರಾಜ್ಯಗಳಲ್ಲಿ ಮಾರಾಟವಾಗುವ ಮೂಲಕ ಅನ್ನದಾತರ ಕೈ ಹಿಡಿದಿದೆ.

‘ನೈಸರ್ಗಿಕ ಕೃಷಿಯಲ್ಲಿ ವ್ಯವಸಾಯ ಸುಲಭ, ಜಮೀನಿನಲ್ಲಿ ಬೆಳೆದಿರುವ ಅನುಪಯುಕ್ತ ಸಸ್ಯಗಳನ್ನು ಉಳುಮೆ ಮಾಡಿ ಕೊಳೆಯಲು ಬಿಡಬೇಕು. ಇದರಿಂದ ಜಮೀನಿನಲ್ಲಿ ಸೂಕ್ಷ್ಮ ಜೀವಿ ಹಾಗೂ ಎರೆಹುಳು ಹೆಚ್ಚಾಗುತ್ತವೆ. ಇದರಿಂದ ಮಣ್ಣಿನ ವಿಘಟನೆಯಿಂದ ಜೈವಿಕ ಅಂಶಗಳು ಮಣ್ಣಿನ ಇಳುವರಿ ಹೆಚ್ಚಿಸುತ್ತವೆ’ ಎನ್ನುತ್ತಾರೆ ಶೂನ್ಯ ಬೇಸಾಯದಲ್ಲಿ ತೊಡಗಿರುವ ರೈತರು.

‘2 ಎಕರೆ ಪ್ರದೇಶದಲ್ಲಿ ಕೃಷಿ ಮಾಡಿದ ಕಬ್ಬಿಗೆ ಖರ್ಚಾಗಿರುವುದು ಕೇವಲ ₹ 10 ಸಾವಿರ ಮಾತ್ರ. ಹೆಚ್ಚಿನ ಬೆಲೆಯ ಯೂರಿಯಾ, ಪೊಟ್ಯಾಶ್‌, ಡಿಎಪಿಗಳ ರಗಳೆ ಇಲ್ಲಾ. ಕೇವಲ ಅಲ್ಲಿ ಬೆಳೆಯುವ ಕಳೆಗಿಡಗಳನ್ನೂ ಅಲ್ಲೆ ಕೊಳೆಯಲು ಬಿಟ್ಟು, ಹಟ್ಟಿ ಗೊಬ್ಬರವನ್ನು ಹಾಕಿ ಬೆಲ್ಲವನ್ನು ತಯಾರಿಸಿದ್ದೇನೆ. ಮಾರುಕಟ್ಟೆಯಲ್ಲಿ ಕೆ.ಜಿಗೆ ₹80– ₹100 ಬೆಲೆಗೆ ಮಾರಾಟವಾಗಿದೆ. ಈ ವರ್ಷಾಂತ್ಯದಲ್ಲಿ ₹ 2 ಲಕ್ಷ ಹಣ ಕೈಸೇರಿದೆ’ ಎನ್ನುತ್ತಾರೆ ಜಿಲ್ಲಾ ಕೃಷಿಕರ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್‌.

‘ರಾಸಾಯನಿಕಗಳಿಗೆ ಹೆಚ್ಚು ಹಣ ವ್ಯಯಿಸಬೇಕು. ಬೆಲ್ಲ ಉತ್ಪಾದಿಸುವಾಗ ಹೆಚ್ಚು ಖರ್ಚು ತಗಲುತ್ತದೆ. ಆದರೆ, ನಾವು ಕಪ್ಪು ಬೆಲ್ಲಕ್ಕೆ ಸುಣ್ಣದ ನೀರು ಮತ್ತು ಕೊಬ್ಬರಿ ಎಣ್ಣೆಯನ್ನು ಮಾತ್ರ ಸೇರಿಸುತ್ತೇವೆ. ಬಿಳಿ (ಪೌಡರ್) ಬೆಲ್ಲಕ್ಕೆ ಹೋಲಿಸಿದರೆ ಸುಮಾರು ಒಂದು ಸಾವಿರ ಬೆಲ್ಲಕ್ಕೆ ₹ 1000 ಖರ್ಚು ಕಡಿಮೆಯಾಗುತ್ತದೆ ಎನ್ನುತ್ತಾರೆ ಪ್ರಕಾಶ್.

‘ಉತ್ತರ ಭಾರತ, ತಮಿಳುನಾಡು, ಕೇರಳಗಳಲ್ಲಿ ಈ ಬೆಲ್ಲಕ್ಕೆ ಹೆಚ್ಚಿನ ಬೇಡಿಕೆ ಇದೆ. ಇತರ ಜಿಲ್ಲೆಗಳಲ್ಲಿ ನಡೆಯುವ ಸಾವಯವ ಮೇಳದಲ್ಲಿ ಸಿರಿಧಾನ್ಯ ಹಾಗೂ ರಸಾಯನಿಕ ಮುಕ್ತ ಬಾಳೆ, ತರಕಾರಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಈಗಾಗಲೇ ನಮ್ಮ ಉತ್ಪನ್ನಗಳಿಗೆ ಮೈಸೂರು ಮಾರುಕಟ್ಟೆಯಾಗಿದೆ. ಬಾಂಬೆ ಮತ್ತು ಕ್ಯಾಲಿಕಟ್‌ ಉದ್ಯಮಿಗಳು ಸಕ್ಕರೆ ರೂಪದ ಕಪ್ಪು ಉಡಿ ಬೆಲ್ಲಕ್ಕೆ ಬೇಡಿಕೆ ಇಟ್ಟಿದ್ದಾರೆ. ಇನ್ನಷ್ಟೇ ನಮ್ಮ ಜಿಲ್ಲೆಯ ಕಪ್ಪು ಬೆಲ್ಲಕ್ಕೆ ಬ್ರಾಂಡ್‌ ಮೌಲ್ಯ ಬರಲಿದೆ ಎನ್ನುವ ನಿರೀಕ್ಷೆಯಲ್ಲಿ ಇದ್ದೇವೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT