ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿಗೆ ಜೀವಕಳೆ ತುಂಬುವ ಶಿಲ್ಪಿ

Last Updated 27 ಡಿಸೆಂಬರ್ 2017, 9:00 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ದೇವರ ವಿಗ್ರಹಗಳನ್ನು ನೋಡಿದಾಕ್ಷಣ ಭಯ ಭಕ್ತಿಯಿಂದ ಕೈಮುಗಿಯುತ್ತೇವೆ. ಆದರೆ, ಅವುಗಳನ್ನು ಸುಂದರವಾಗಿ ಕೆತ್ತಿ ಅವುಗಳಿಗೆ ಜೀವಕಳೆ ಬರುವಂತೆ ಮಾಡುವ ಶಿಲ್ಪಿಗಳನ್ನು ಮಾತ್ರ ನೆನಪಿಸಿಕೊಳ್ಳುವುದೇ ಇಲ್ಲ. ಅಂತಹ ವಿಗ್ರಹಗಳನ್ನು ನಿರ್ಮಿಸುವ ಶಿಲ್ಪಿಯೊಬ್ಬರು ಕಮರವಾಡಿ ಗ್ರಾಮದಲ್ಲಿ ಎಲೆಮರೆ ಕಾಯಿಯಂತೆ ಇದ್ದಾರೆ. ಅವರೇ, ಶಿಲ್ಪಿ ಕೆ.ಎಂ.ಗುರುಪಾದಸ್ವಾಮಿ.

ದೇವರ ಮೂರ್ತಿ ವಿಗ್ರಹಗಳನ್ನು ಕೆತ್ತುವುದರಲ್ಲಿ ನಿಪುಣರಾದ ಇವರು ಚಾಮರಾಜನಗರ ಮಾತ್ರವಲ್ಲದೇ, ಮಂಡ್ಯ, ಮೈಸೂರು, ಬೆಂಗಳೂರು, ತುಮಕೂರು ಜಿಲ್ಲೆಗಳಲ್ಲಿ ದೇವರ ಮೂರ್ತಿ ವಿಗ್ರಹಗಳನ್ನು ಕೆತ್ತಿ,ಗುಡಿ, ಗೋಪುರಗಳನ್ನೂ ನಿರ್ಮಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ದೇವಸ್ಥಾನಗಳಲ್ಲಿ ಶಿವ ಪಾರ್ವತಿ, ಸಪ್ತಮಾತೃಕೆಯರು, ಗಣೇಶ, ಮಹದೇಶ್ವರ ಸ್ವಾಮಿ, ಮಂಟೇಸ್ವಾಮಿ, ಸಿದ್ದಪ್ಪಾಜಿ, ಸೀತೆ, ರಾಮ, ಆಂಜನೇಯ, ನವಗ್ರಹಗಳು, ಜೈನ ಬಸದಿಗಳಲ್ಲಿರುವ ತೀರ್ಥಂಕರರ ಪ್ರತಿಮೆಗಳು ಹೀಗೆ ವಿವಿಧ ದೇವರುಗಳ ವಿವಿಧ ಭಂಗಿಯ ಶಿಲ್ಪಗಳನ್ನು ಕೆತ್ತುವುದರಲ್ಲಿ ಇವರು ಎತ್ತಿದ ಕೈ.

ಬಾಲ್ಯದಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಇವರನ್ನು ಗುರುತಿಸಿದ ತಮಿಳುನಾಡಿನ ಶಿಲ್ಪಿಯೊಬ್ಬರು ಅವರನ್ನು ಕರೆದೊಯ್ದು ಶಿಲ್ಪ ಕಲೆಯಲ್ಲಿ ನಿಪುಣರಾಗುವಂತೆ ಮಾಡಿದ್ದಾರೆ.

ಹತ್ತು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ ಗುರುಪಾದಸ್ವಾಮಿ ತವರಿಗೆ ವಾಪಸ್‌ ಆಗಿ ಇಲ್ಲಿ ತಮ್ಮ ಕೈಚಳಕದ ಮೂಲಕ ಹೆಸರುವಾಸಿಯಾಗಿದ್ದಾರೆ. ಈಗಾಗಲೇ ಅನೇಕ ದೇವಸ್ಥಾನಗಳಲ್ಲಿ ಇವರು ಕೆತ್ತಿರುವ ಮೂರ್ತಿಗಳಿಗೆ ಪೂಜೆ ಮಾಡಲಾಗುತ್ತಿದೆ.

‘ಹೊಸ ದೇವಸ್ಥಾನಗಳನ್ನು ನಿರ್ಮಿಸುವುದಕ್ಕಿಂತ ಗ್ರಾಮಗಳಲ್ಲಿ ಪಾಳು ಬಿದ್ದಿರುವ ದೇವಾಲಯಗಳನ್ನು, ಗುಡಿ ಗೋಪುರಗಳನ್ನು ಜೀರ್ಣೋದ್ಧಾರ ಮಾಡಿದರೆ ಪ್ರಾಚೀನ ಕಲೆಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎನ್ನುವ ಗುರುಸ್ವಾಮಿ, ಈ ಭಾಗದಲ್ಲಿ ವಿವಿಧ ಕಾರಣಗಳಿಂದ ನಶಿಸಿರುವ ಶಿಲ್ಪಕಲೆಗಳಿಗೆ ಮರುಜೀವ ನೀಡಬೇಕು ಎನ್ನುವ ಆಸೆ ಇದೆ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT