7

ಹಾಳಾದ ರಸ್ತೆಯಲ್ಲಿ ಹತ್ತೆಂಟು ಸಮಸ್ಯೆ

Published:
Updated:
ಹಾಳಾದ ರಸ್ತೆಯಲ್ಲಿ ಹತ್ತೆಂಟು ಸಮಸ್ಯೆ

ಚೇಳೂರು: ಚಾಕವೇಲು ಪಂಚಾಯಿತಿ ವ್ಯಾಪ್ತಿಯ ವಡ್ಡಿವಾಂಡ್ಲಪಲ್ಲಿ ಗ್ರಾಮದಿಂದ ಚೇಳೂರು, ಬಾಗೇಪಲ್ಲಿ ಮುಖ್ಯರಸ್ತೆಗೆ ಸಂಪರ್ಕಿಸುವ ರಸ್ತೆ ಗುಂಡಿಗಳಿಂದಾಗಿ ಸಂಪೂರ್ಣ ಹದಗೆಟ್ಟಿ ಹೋಗಿದ್ದು, ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.

ಈ ರಸ್ತೆಯು ಇತ್ತ ಚೇಳೂರು ವಾರ್ಗವಾಗಿ ಅತ್ತ ಚಾಕವೇಲು, ಬಿಳ್ಳೂರು ಬಾಗೇಪಲ್ಲಿಗೆ ಸಂಪರ್ಕವನ್ನು ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಸುಮಾರು ವರ್ಷಗಳಿಂದ ಡಾಂಬರ್‌ ಕಾಣದೆ ಅಧ್ವಾನಗೊಂಡು ಹೋಗಿದೆ. ವಡ್ಡಿವಾಂಡ್ಲಪಲ್ಲಿ ಗ್ರಾಮದ ಮುಂದೆ ಇರುವ ತಿರುವಿನಲ್ಲಿ ವಿಪರೀತ ಗಿಡಗಂಟಿಗಳು ಬೆಳೆದು ರಸ್ತೆಯನ್ನು ಆವರಿಸಿಕೊಂಡಿವೆ.

ಇದರಿಂದ ಈ ತಿರುವಿನಲ್ಲಿ ಸದ್ಯ ಎದುರಿನಿಂದ ಬರುವ ವಾಹನಗಳು ಕಾಣುವುದೇ ಇಲ್ಲ. ಹೀಗಾಗಿ ಇಲ್ಲಿ ಸವಾರರು ಅಪಾಯವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಅಪಘಾತ ಸಂಭವಿಸಿ ಜೀವ ಹಾನಿಯಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತಿರುವಿನಲ್ಲಿ ಇರುವ ಗಿಡಗಂಟಿಗಳನ್ನು ತೆರವುಗೊಳಿಸುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

‘ಈ ರಸ್ತೆಯ ಬದಿಗಳಲ್ಲಿ ಹೊಲಗದ್ದೆಗಳಿದ್ದು, ರಸ್ತೆ ಹಾಳಾದ ಕಾರಣಕ್ಕೆ ಇದೀಗ ರೈತಾಪಿ ಜನರಿಗೆ ನಿತ್ಯ ಜಮೀನುಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಇದೇ ಮಾರ್ಗವಾಗಿ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಚೇಳೂರು, ಚಿಂತಾಮಣಿ ಮತ್ತು ಬಾಗೇಪಲ್ಲಿ ಕಡೆಗೆ ನಿತ್ಯ ಶಾಲಾ, ಕಾಲೇಜುಗಳಿಗೆ ಪ್ರಯಾಣಿಸುತ್ತಾರೆ. ಹದಗೆಟ್ಟ ರಸ್ತೆಯಿಂದಾಗಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಲು ಸಮಸ್ಯೆಯಾಗುತ್ತಿದೆ ಎಂದು ದೂರುಗಳು ಬರುತ್ತಿವೆ.

‘ಅವ್ಯವಸ್ಥೆಯಿಂದ ಕೂಡಿರುವ ಈ ರಸ್ತೆಯಲ್ಲಿ ಅನೇಕ ಬಾರಿ ವಾಹನಗಳು ತಿರುವಿನಲ್ಲಿ ಡಿಕ್ಕಿ ಹೊಡೆದ ಉದಾಹರಣೆಗಳಿವೆ. ಅನೇಕರು ಗಾಯಗೊಂಡಿದ್ದಾರೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಸಾರ್ವಜನಿಕರು ಅಸಹಾಯಕರಾಗಿದ್ದಾರೆ’ ಎಂದು ವಡ್ಡಿವಾಂಡ್ಲಪಲ್ಲಿ ಗ್ರಾಮದ ನಿವಾಸಿ ವೆಂಕಟರವಣ ಅಳಲು ತೋಡಿಕೊಂಡರು.

‘ಹದಗೆಟ್ಟ ರಸ್ತೆಯಲ್ಲಿ ಅನೇಕ ಗ್ರಾಮಗಳ ಜನರು ನಿತ್ಯ ಸರ್ಕಸ್‌ ಮಾಡುತ್ತ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಾಗಬೇಕು. ತಿರುವಿನಲ್ಲಿ ಯಾವ ಹೊತ್ತಿನಲ್ಲಿ ಅಪಘಾತವಾಗುತ್ತದೋ ಎನ್ನುವ ಭೀತಿ ಕಾಡುತ್ತದೆ. ಅಪಘಾತಗಳು ನಡೆದ ನಂತರ ಜನಪ್ರತಿನಿಧಿಗಳು ಬಂದು ಸಾಂತ್ವನ ಹೇಳುವಂತೆ ನಟಿಸುವ ಬದಲು ಅಪಘಾತಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಾಗಿದೆ’ ಎಂದು ಸಾಮಾಜಿಕ ಹೋರಾಟಗಾರ ರವಿಕುಮಾರ್ ಒತ್ತಾಯಿಸಿದರು.

* * 

ಹಾಳಾದ ರಸ್ತೆಯಲ್ಲೇ ಶಾಸಕರು, ಸಂಸದರು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಓಡಾಡಿದ್ದಾರೆ. ಆದರೂ ಸಮಸ್ಯೆ ಕಂಡರೂ ಕಾಣದಂತೆ ವರ್ತಿಸುತ್ತಾರೆ

ರವಿಕುಮಾರ್

ಸಾಮಾಜಿಕ ಹೋರಾಟಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry