7

ತನಿಖೆ ಸಿಬಿಐಗೆ ವಹಿಸಲು ಒತ್ತಾಯ

Published:
Updated:
ತನಿಖೆ ಸಿಬಿಐಗೆ ವಹಿಸಲು ಒತ್ತಾಯ

ಚಿಕ್ಕಮಗಳೂರು: ವಿಜಯಪುರ ಜಿಲ್ಲೆಯ ದಲಿತ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಶಾಸಕ ಬಿ.ಬಿ.ನಿಂಗಯ್ಯ ಇಲ್ಲಿ ಮಂಗಳವಾರ ಒತ್ತಾಯಿಸಿದರು.

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗದಿರುವುದು ಇಂಥ ಪ್ರಕರಣಗಳು ಮರುಕಳಿಸಲು ಕಾರಣ. ಅಗತ್ಯ ಇದ್ದರೆ ಭಾರತೀಯ ದಂಡ ಸಂಹಿತೆಗೆ (ಐಪಿಸಿ) ತಿದ್ದುಪಡಿ ತಂದು ಶಿಕ್ಷೆ ವಿಧಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರ ನಾಲಿಗೆಗೆ ಲಂಗುಲಗಾಮು ಇಲ್ಲ. ಮನಸೋ ಇಚ್ಛೆ ಮಾತನಾಡಿದ್ದಾರೆ. ಅವರಿಗೆ ಜಾತ್ಯತೀತ ವ್ಯಾಖ್ಯಾನ ಗೊತ್ತಿಲ್ಲ. ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮನಸೋ ಇಚ್ಛೆ ಮಾತನಾಡುವುದನ್ನು ಸಚಿವರು ನಿಲ್ಲಿಸಬೇಕು. ಅನ್ಯಧರ್ಮೀಯರನ್ನು ಬೈಯ್ಯುವುದನ್ನೇ ಗುತ್ತಿಗೆ ಪಡೆದವರಂತೆ ವರ್ತಿಸುತ್ತಾರೆ. ಪ್ರಧಾನಿ ಮೋದಿ ಅವರು ಅನಂತುಕುಮಾರ ಹೆಗಡೆ ಅವರನ್ನು ಸಂಪುಟದಿಂದ ಕೈಬಿಟ್ಟು, ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿ ವ್ಯಾಪ್ತಿಯ ಉದುಸೆ ಗ್ರಾಮದಲ್ಲಿ ಅಣ್ಣೇಗೌಡ ಎಂಬುವರ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿದೆ. ಜನರು ಭಯಭೀತರಾಗಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಯವರು ಹುಲಿ ಹಿಡಿಯುವ ಕೆಲಸ ಮಾಡಬೇಕು. ಅಣ್ಣೇಗೌಡ ಅವರ ಆಸ್ಪತ್ರೆ ಖರ್ಚನ್ನು ಆಸ್ಪತ್ರೆ ಖರ್ಚನ್ನು ಅರಣ್ಯ ಇಲಾಖೆಯವರು ಭರಿಸಬೇಕು. ಹಾನಿಗೆ ಪರಿಹಾರವನ್ನು ನೀಡಬೇಕು ಎಂದು ಹೇಳಿದರು.

ಬೆಟ್ಟಗೆರೆ ಗ್ರಾಮದ ಸುತ್ತಮುತ್ತ ರೈತರ ಕಾಫಿ ತೋಟಗಳಿಗೆ ಕಾಡಾನೆ ದಾಳಿ ಮಾಡಿವೆ. ಆಹಾರ ಹುಡುಕಿಕೊಂಡು ಆನೆಗಳು ಊರಿಗೆ ಬರುತ್ತಿವೆ. ಆನೆ ಹಾವಳಿ ತಡೆಗೆ ಕ್ರಮ ವಹಿಸುವಂತೆ ಅರಣ್ಯ ಇಲಾಖೆಯವರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಜೆಡಿಎಸ್‌ ಮುಖಂಡರಾದ ಹೊಲದಗದ್ದೆ ಗಿರೀಶ್‌, ಮಂಜಪ್ಪ, ಲಕ್ಷ್ಮಣ ಇದ್ದರು.

* * 

ಮಹದಾಯಿ ಸಮಸ್ಯೆ ಇತ್ಯರ್ಥ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಒಗ್ಗೂಡಿ ಶ್ರಮಿಸಬೇಕು. ರೈತರಿಗೆ ನೀರು ಕೊಡಿಸುವ ಕೆಲಸ ಮಾಡಬೇಕು.|

ಬಿ.ಬಿ.ನಿಂಗಯ್ಯ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry